ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಸಮಸ್ಯೆಗೆ ಹಿಂಸಾಚಾರ ಪರಿಹಾರವಲ್ಲ: ಸಚಿವ ಜಗದೀಶ ಶೆಟ್ಟರ್

Last Updated 10 ಮಾರ್ಚ್ 2021, 14:12 IST
ಅಕ್ಷರ ಗಾತ್ರ

ಕೋಲಾರ: ‘ಕಂಪನಿಗಳಲ್ಲಿ ಹಿಂಸಾಚಾರ ನಡೆದರೆ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಕಂಪನಿಗಳಲ್ಲಿ ಕಾರ್ಮಿಕರ ಸಮಸ್ಯೆಗೆ ಹಿಂಸಾಚಾರ ಪರಿಹಾರವಲ್ಲ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಕಿವಿಮಾತು ಹೇಳಿದರು.

ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಆ್ಯಪಲ್‌ ಐ–ಫೋನ್‌ ಉತ್ಪಾದಿಸುವ ವಿಸ್ಟ್ರಾನ್‌ ಇನ್ಫೋಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಬುಧವಾರ ಭೇಟಿ ನೀಡಿದ ಸಚಿವರು ಕಂಪನಿ ಕಾರ್ಮಿಕರ ಜತೆ ಸಂವಾದ ನಡೆಸಿದರು.

‘ವೇತನದ ವಿಚಾರವಾಗಿ ವಿಸ್ಟ್ರಾನ್‌ ಕಂಪನಿಯಲ್ಲಿ 2020ರ ಡಿ.12ರಂದು ನಡೆದ ಅಹಿತಕರ ಘಟನೆಯಿಂದ ಇಡೀ ಕಂಪನಿ ಬಂದ್‌ ಆಯಿತು. ಕೆಲ ಕಾರ್ಮಿಕರ ಮುಂಗೋಪಕ್ಕೆ ಸಾವಿರಾರು ಕಾರ್ಮಿಕರು ತೊಂದರೆ ಅನುಭವಿಸಬೇಕಾಯಿತು. ಕಾರ್ಮಿಕರು ಕೆಲಸ ಕಳೆದುಕೊಂಡು ಕೆಲ ತಿಂಗಳು ನಿರುದ್ಯೋಗಿಗಳಾಗಬೇಕಾಯಿತು. ಕಂಪನಿಯಲ್ಲಿ ಮುಂದೆ ಇಂತಹ ಘಟನೆ ಮರುಕಳಿಸಬಾರದು’ ಎಂದರು.

‘ಕಂಪನಿಯಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದರೆ ಮೊದಲು ಮಾನವ ಸಂಪನ್ಮೂಲ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ. ಅಲ್ಲಿಯೂ ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಿ. ಅದು ಬಿಟ್ಟು ಹಿಂಸಾಚಾರಕ್ಕೆ ಇಳಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದು ಹೇಳಿದರು.

‘10 ವರ್ಷದ ಹಿಂದೆ ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದಾಗ ಇಲ್ಲಿನ ಜನ ಉದ್ಯೋಗಕ್ಕಾಗಿ ಪ್ರತಿನಿತ್ಯ ಬೆಂಗಳೂರಿಗೆ ಹೋಗುವ ಪರಿಸ್ಥಿತಿಯಿತ್ತು. ಆದರೆ, ಈಗ ಜಿಲ್ಲೆಯ ಪರಿಸ್ಥಿತಿ ಬದಲಾಗಿದೆ. ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುತ್ತಿದ್ದು, ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಯಾಗಿವೆ. ಈ ವಾತಾವರಣ ಸುಧಾರಿಸಬೇಕೇ ಹೊರತು ಕಂಪನಿಗಳಲ್ಲಿ ದಾಂದಲೆ ನಡೆಸಿ ಜಿಲ್ಲೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಬಾರದು’ ಎಂದು ಸಲಹೆ ನೀಡಿದರು.

ಸಮಸ್ಯೆ ಪರಿಹರಿಸಿ: ‘ಅಧಿಕಾರಿಗಳು ಜಿಲ್ಲೆಯ ಕೈಗಾರಿಕೆ ಅಥವಾ ಕಂಪನಿಗಳಲ್ಲಿ ಸಮಸ್ಯೆ ಉದ್ಭವಿಸಿದಾಗ ಭೇಟಿ ನೀಡುವ ಪರಿಪಾಠ ಬಿಡಬೇಕು. ಬದಲಿಗೆ ನಿಯಮಿತವಾಗಿ ಕೈಗಾರಿಕೆಗಳಿಗೆ ಭೇಟಿ ಕೊಟ್ಟು ಸಮಸ್ಯೆ ಸೃಷ್ಟಿಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬೃಹತ್ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ಸೂಚಿಸಿದರು.

‘ಅಧಿಕಾರಿಗಳು ಕೈಗಾರಿಕೆಗಳಲ್ಲಿನ ಮೂಲಸೌಕರ್ಯ ಹಾಗೂ ಅಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಆಗಾಗ್ಗೆ ಪರಿಶೀಲನೆ ಸಲಹೆ ನೀಡಬೇಕು. ಜತೆಗೆ ಕಾರ್ಮಿಕರ ಅಹವಾಲು ಆಲಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಬೇಕು’ ಎಂದು ಸೂಚಿಸಿದರು.

ಮಾಹಿತಿ ಸಂಗ್ರಹ: ಕಾರ್ಮಿಕರ ದಾಂದಲೆ ಕಾರಣಕ್ಕೆ ತಾತ್ಕಾಲಿಕವಾಗಿ ಬಂದ್‌ ಆಗಿದ್ದ ವಿಸ್ಟ್ರಾನ್‌ ಕಂಪನಿಯಲ್ಲಿ ಇತ್ತೀಚೆಗೆ ಐ–ಫೋನ್‌ ಮತ್ತು ಮೊಬೈಲ್‌ ಬಿಡಿ ಭಾಗಗಳ ಉತ್ಪಾದನೆ ಪುನರಾರಂಭವಾಗಿದೆ. ಕಂಪನಿ ಮತ್ತು ಕಾರ್ಮಿಕರ ಸದ್ಯದ ಸ್ಥಿತಿಗತಿ ಬಗ್ಗೆ ಸಚಿವ ಜಗದೀಶ ಶೆಟ್ಟರ್‌ ಮಾಹಿತಿ ಸಂಗ್ರಹಿಸಿದರು.

ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿಇಒ ಶಿವಶಂಕರ್, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ವಿಸ್ಟ್ರಾನ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸುದಿಪ್ತೊ ಗುಪ್ತಾ, ಜಿಲ್ಲಾಧಿಕಾರಿ ಆರ್.ಸೆಲ್ಪಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಕೆಐಎಡಿಬಿ ಮುಖ್ಯ ಎಂಜಿನಿಯರ್‌ ಬಿ.ಕೆ.ಪವಿತ್ರಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT