ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಪಿ ಸಂಸ್ಕೃತಿ ಸಹಿಸಲ್ಲ: ಡಿಡಿಪಿಐ ರೇವಣ ಸಿದ್ದಪ್ಪ ಎಚ್ಚರಿಕೆ

ಕೋವಿಡ್ ಮಾರ್ಗಸೂಚಿ ಪಾಲನೆ ಗಂಭೀರವಾಗಿ ಪರಿಗಣಿಸಿ: ಮುಖ್ಯ ಶಿಕ್ಷಕರಿಗೆ ತಾಕೀತು
Last Updated 8 ಡಿಸೆಂಬರ್ 2021, 13:52 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಕರೆದಿರುವ ಸಭೆಗೆ ಬರುವುದು ಮುಖ್ಯ ಶಿಕ್ಷಕರ ಜವಾಬ್ದಾರಿ. ವಿಐಪಿ ಸಂಸ್ಕೃತಿ ಸಹಿಸಲು ಸಾಧ್ಯವಿಲ್ಲ. ಇಂದಿನ ಸಭೆಗೆ ಗೈರಾದವರಿಗೆ ನೋಟಿಸ್‌ ಜಾರಿ ಮಾಡಿ’ ಎಂದು ಡಿಡಿಪಿಐ ರೇವಣ ಸಿದ್ದಪ್ಪ ಬಿಇಒಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಕೋವಿಡ್ ಸುರಕ್ಷತಾ ಮಾರ್ಗಸೂಚಿ ಪಾಲನೆ ಸಂಬಂಧ ಇಲ್ಲಿ ಬುಧವಾರ ನಡೆದ ಕೋಲಾರ ಮತ್ತು ಮಾಲೂರು ತಾಲ್ಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಧನೆಯಲ್ಲಿ ಕೋಲಾರ ಜಿಲ್ಲೆ ನಂ.1 ಸ್ಥಾನಕ್ಕೆ ತಲುಪಲು ಬದ್ಧತೆ ಇರಲಿ’ ಎಂದರು.

‘ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕೋವಿಡ್ ಮಾರ್ಗಸೂಚಿ ಪಾಲನೆಯನ್ನು ಗಂಭೀರವಾಗಿ ಪರಿಗಣಿಸಿ. ಮುಖ್ಯ ಶಿಕ್ಷಕರು ನಾಯಕರಿದ್ದಂತೆ, ನಾಯಕ ಸರಿಯಿದ್ದರೆ ಶಾಲೆ ಚೆನ್ನಾಗಿರುತ್ತದೆ. ಓಮೈಕ್ರಾನ್‌ ಆತಂಕದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಿ. ಕೊರೊನಾ ಸೋಂಕಿನ ಕುರಿತು ಪ್ರತಿನಿತ್ಯ ಮಾಹಿತಿ ಕಳುಹಿಸಿ’ ಎಂದು ಸೂಚಿಸಿದರು.

‘ಶಾಲಾ ಅನುದಾನದಲ್ಲಿ ಸ್ಯಾನಿಟೈಸರ್ ಖರೀದಿಸಲು ₹ 1 ಸಾವಿರ ಬಳಸಿಕೊಳ್ಳಿ. ಶಾಲೆಯ ದೈಹಿಕ ಶಿಕ್ಷಣ ಮತ್ತು ವೃತ್ತಿ ಶಿಕ್ಷಕರು ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಅಂತರ ಕಾಪಾಡುವುದನ್ನು ಗಮನಿಸಿ. ದೇಶದಲ್ಲಿ ದಿನದಿಂದ ದಿನಕ್ಕೆ ಓಮೈಕ್ರಾನ್‌ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಪೋಷಕರಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಿದ್ದು, ಶಾಲೆಗಳಲ್ಲಿ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ತಿಳಿಸಿದರು.

ಗುಣಮಟ್ಟದ ಆಹಾರ: ‘ಅಕ್ಷರ ದಾಸೋಹ ಯೋಜನೆಯಡಿ ಶಾಲೆಗೆ ಕಳುಹಿಸುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದ್ದರೆ ಅಥವಾ ತೂಕದಲ್ಲಿ ವ್ಯತ್ಯಾಸವಿದ್ದರೆ ತೆಗೆದುಕೊಳ್ಳಬೇಡಿ. ಆ ಆಹಾರ ಪದಾರ್ಥಗಳನ್ನು ವಾಪಸ್‌ ಕಳುಹಿಸಿ. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವುದು ಮುಖ್ಯ ಶಿಕ್ಷಕರ ಜವಾಬ್ದಾರಿ. ಶಾಲೆಯ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಿ’ ಎಂದು ಸೂಚಿಸಿದರು.

‘ಶಾಲಾ ಕಟ್ಟಡಗಳ ದುರಸ್ತಿಗೆ ₹ 4 ಕೋಟಿ ಅನುದಾನ ಕೋರಿ ಇಲಾಖೆ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿದೆ, ಮುಖ್ಯ ಶಿಕ್ಷಕರು ಮಕ್ಕಳ ಸುರಕ್ಷತೆ ಜತೆ ಬೋಧನೆ ಮಾಡುವುದನ್ನು ರೂಢಿಸಿಕೊಳ್ಳಿ. ತಿಂಗಳಿಗೊಮ್ಮೆ ಶಿಕ್ಷಕರ ಸಭೆ ನಡೆಸಿ ಬೋಧನಾ ಕ್ರಮ ಪರಿಶೀಲಿಸಿ’ ಎಂದು ತಾಕೀತು ಮಾಡಿದರು.

`ಕಡಿಮೆ ಫಲಿತಾಂಶವಿರುವ ಶಾಲೆ ಕಡೆ ನಡೆ ಎಂಬುದಾಗಲಿ. ಇಲಾಖೆ ಈಗಾಗಲೇ ಫಲಿತಾಂಶ ಸುಧಾರಣೆಗೆ ಕ್ರಿಯಾ ಯೋಜನೆ, ಮಾರ್ಗದರ್ಶಿ ರಚನೆ, ಅಧ್ಯಾಯವಾರು ಪ್ರಶ್ನೋತ್ತರ ಸೇರಿದಂತೆ ಹಲವು ವರ್ಷಗಳಿಂದ ಉತ್ತಮ ಕಾರ್ಯ ನಿರ್ವಹಿಸಿಕೊಂಡು ಬಂದಿದೆ. ಅದೇ ಹಾದಿಯಲ್ಲಿ ಕೆಲಸ ಸಾಗಬೇಕು’ ಎಂದರು.

ಪರೀಕ್ಷಾ ಅರ್ಜಿ: ‘ಡಿ.13ರಿಂದ ಆನ್‌ಲೈನ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಅರ್ಜಿ ಅಪ್‌ಲೋಡ್‌ ಪ್ರಕ್ರಿಯೆ ಆರಂಭವಾಗಲಿದೆ. ಮೊದಲು ಸ್ಯಾಟ್ಸ್‌ನಲ್ಲಿ ಮಾಹಿತಿ ತಪ್ಪಿದ್ದರೆ ಸರಿಪಡಿಸಿಕೊಳ್ಳಿ. ನಿರ್ಲಕ್ಷ್ಯ ತೋರಿ ಅಂಕಪಟ್ಟಿಯಲ್ಲಿ ತಪ್ಪಾದರೆ ದಂಡ ತೆರಬೇಕಾದೀತು’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಎಚ್ಚರಿಸಿದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್‌, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ, ಡಿವೈಪಿಸಿ ಗಂಗರಾಮಯ್ಯ, ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ಬಿ.ವೆಂಕಟೇಶಪ್ಪ, ಸಿರಾಜುದ್ದೀನ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT