ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹19 ಕೋಟಿ ವೆಚ್ಚ: 140 ಕೊಠಡಿ

ವಿವೇಕ ಯೋಜನೆ: ಶಾಲೆ ಆಕರ್ಷಣೀಯಗೊಳಿಸಲು ಹೆಜ್ಜೆ–ಮುನಿಸ್ವಾಮಿ
Last Updated 15 ನವೆಂಬರ್ 2022, 5:51 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ವಿವೇಕ ಯೋಜನೆಯಡಿ 140 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ₹ 19 ಕೋಟಿ ಬಿಡುಗಡೆಯಾಗಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಶಾಲೆಗಳನ್ನು ಆಕರ್ಷಣೀಯಗೊಳಿಸಲಾಗುವುದು’ ಎಂದು ಸಂಸದ ಎಸ್.ಮುನಿಸ್ವಾಮಿ
ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆಶ್ರಯದಲ್ಲಿ 2022-23ನೇ ಸಾಲಿನ ವಿವೇಕ ಯೋಜನೆಯಡಿ ನೂತನ ಶಾಲಾ ಕೊಠಡಿಗಳ ಶಂಕುಸ್ಥಾಪನೆ ಹಾಗೂ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ ಸಂಸ್ಕೃತಿ, ಪರಂಪರೆಗೆ ವಿವೇಕಾನಂದರು ನೀಡಿದ ಕೊಡುಗೆ ಅಪಾರವಾಗಿದೆ. ವಿಶ್ವಮಟ್ಟದಲ್ಲಿ ದೇಶದ ಸಂಸ್ಕೃತಿ ಪರಿಚಯಿಸಿದ ಅವರ ಆದರ್ಶದ ಅಡಿಯಲ್ಲಿ ರಾಜ್ಯದಾದ್ಯಂತ ವಿವೇಕ ಶಾಲಾ ಕೊಠಡಿಗಳನ್ನು
ನಿರ್ಮಿಸಲಾಗುತ್ತಿದೆ. ಶಾಲೆಗಳ ದುರಸ್ತಿಗಾಗಿ ಜಿಲ್ಲಾ ಪಂಚಾಯಿತಿನಿಂದ ತಲಾ ₹ 1.5 ಲಕ್ಷ ಬಿಡುಗಡೆಗೆ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ 500 ಶಾಲೆಗಳು
ಸೋರುತ್ತಿರುವ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ’
ಎಂದರು.

‘ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣ ಸಿಗಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿದವರೇ ದೇಶದ ಸಾಧಕರು’ ಎಂದರು.

ಮಕ್ಕಳ ದಿನಾಚರಣೆ ಅಂಗವಾಗಿ ಅವರಿಂದಲೇ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸೇಬು, ಬಾಳೆಹಣ್ಣು ವಿತರಿಸಿದರು.

ಜಿಲ್ಲಾಧಿಕಾರಿ ವೆಂಕಟ್‍ ರಾಜಾ ಮಾತನಾಡಿ, ‘ಜಿಲ್ಲೆಯು ಶೈಕ್ಷಣಿಕ ಸಾಧನೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ಹೈಕೋರ್ಟ್‍ನಲ್ಲಿ ಶೇ 30 ರಷ್ಟು ವಕೀಲರು ಕೋಲಾರದವರಿದ್ದು, ಈಚೆಗೆ ಕೋರ್ಟ್‍ಗೆ ಹೋದಾಗ ಗುರುತಿಸಿ ಮಾತನಾಡಿಸಿದರು. ವಿಧಾನಸೌಧಕ್ಕೆ ಹೋದರೂ ಅಲ್ಲಿ ಕೋಲಾರಅಧಿಕಾರಿಗಳೇ ಹೆಚ್ಚಿದ್ದಾರೆ. ಇಲ್ಲಿನ ಜನರಲ್ಲಿ ಸಭ್ಯತೆ, ಸಂಸ್ಕೃತಿ ಇದೆ’ ಎಂದರು.

‘ಕೋಲಾರದ ವಿದ್ಯಾರ್ಥಿಗಳು ಪ್ರಪಂಚಕ್ಕೆ ಜಿಲ್ಲೆಯ ರಾಯಭಾರಿಗಳಾಗಬೇಕು’ ಎಂದು ಕಿವಿಮಾತು
ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‍ ಕುಮಾರ್, ‘ಮುಂದಿನ ನಾಲ್ಕೈದು ತಿಂಗಳಲ್ಲಿ ವಿವೇಕ ಶಾಲಾ ಕೊಠಡಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ. ನರೇಗಾದಡಿ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್, ಆಟದ ಮೈದಾನ ಅಭಿವೃದ್ಧಿ, ಶೌಚಾಲಯ, ಅಡುಗೆ ಮನೆ ನಿರ್ಮಾಣದೊಂದಿಗೆ ಶಾಲೆಗಳನ್ನು ಆಕರ್ಷಣೀಯಗೊಳಿಸಲಾಗುವುದು’ ಎಂದು ತಿಳಿಸಿದರು.

ಡಿಡಿಪಿಐ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ. ಜಿಲ್ಲೆಯ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗಾಗಿ 140 ಕೊಠಡಿಗಳು ತಲೆ ಎತ್ತಲಿವೆ ಎಂದರು.

ನಿವೃತ್ತ ಡಿವೈಎಸ್‍ಪಿ ಶಿವಕುಮಾರ್, ಬಿಇಒ ಕನ್ನಯ್ಯ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ನಗರಸಭಾ ಸದಸ್ಯರಾದ ಪ್ರವೀಣ್, ಸಂದೇಶ್, ಖಾಸಗಿ ಶಾಲೆಗಳ ಅಧ್ಯಕ್ಷ ನಾಗಭೂಷಣ್, ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ವಿವಿಧ ಶಿಕ್ಷಕ ಸಂಘಗಳ ಪದಾಧಿಕಾರಿಗಳಾದ ವಿ.ಮುರಳಿಮೋಹನ್, ಆರ್.ನಾಗರಾಜ್, ಜಿ.ಶ್ರೀನಿವಾಸ್, ನಾರಾಯಣರೆಡ್ಡಿ, ಇಸಿಒಗಳಾದ ವೆಂಕಟಾಚಲಪತಿ, ರಾಘವೇಂದ್ರ, ಮುನಿರತ್ನಯ್ಯಶೆಟ್ಟಿ, ಬಿಆರ್‌ಪಿ ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT