ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ಕ್ಕೆ ಒಕ್ಕಲಿಗರ ಬೃಹತ್‌ ಸಮಾವೇಶ

ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ವೆಂಕಟಾಚಲ ಹೇಳಿಕೆ
Last Updated 9 ಮಾರ್ಚ್ 2021, 16:53 IST
ಅಕ್ಷರ ಗಾತ್ರ

ಕೋಲಾರ: ‘ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ನಗರೂರು ಗ್ರಾಮದಲ್ಲಿ ಮಾರ್ಚ್ 13ರಂದು ಸಮುದಾಯದ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ವೆಂಕಟಾಚಲ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನರಗೂರು ಗ್ರಾಮದ ಬಿಜಿಎಸ್ ವರ್ಲ್ಡ್‌್ ಸ್ಕೂಲ್‌ ಆವರಣದಲ್ಲಿ ಸಮಾವೇಶ ನಡೆಯಲಿದೆ. ಅಂದು ಬೆಳಿಗ್ಗೆ ಜಿಲ್ಲಾ ಕೇಂದ್ರದ ಒಕ್ಕಲಿಗರ ವಿದ್ಯಾರ್ಥಿನಿಲಯದಿಂದ ಸಮಾವೇಶಕ್ಕೆ ಸಮುದಾಯದವರನ್ನು ಬಸ್‌ಗಳಲ್ಲಿ ಕರೆದೊಯ್ಯಲಾಗುತ್ತದೆ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಬರಬೇಕು’ ಎಂದು ಮನವಿ ಮಾಡಿದರು.

‘ರಾಜ್ಯದ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಪ್ರಭಾವಯುತವಾಗಿದೆ. ಹೈದರಾಬಾದ್‌ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಭಾಗದಲ್ಲಿನ ಸಮುದಾಯದವರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಒಕ್ಕೂಟವು ಸಂಘಟನೆ ಬಲಪಡಿಸುವ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಒಕ್ಕಲಿಗ ಜನಾಂಗಕ್ಕೆ ಶಕ್ತಿ ತುಂಬಲು ಮುಂದಾಗಿದೆ’ ಎಂದು ವಿವರಿಸಿದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆ ಸುಮಾರು 12 ಲಕ್ಷವಿದೆ. ಜನಾಂಗದವರಿಗೆ 3ಎ ಜಾತಿ ಪ್ರಮಾಣಪತ್ರವಿಲ್ಲದ ಕಾರಣ ತೊಂದರೆಯಾಗಿದೆ. ಲಿಂಗಾಯತ ಸಮುದಾಯದ ಜಾತಿ ಪ್ರಮಾಣಪತ್ರ ನೀಡುತ್ತಿರುವುದರಿಂದ ಒಕ್ಕಲಿಗ ಸಮುದಾಯದವರಿಗೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಆರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು.

6 ಕಡೆ ಸಮಾವೇಶ: ‘ರಾಜ್ಯದಲ್ಲಿ 6 ಕಡೆ ಒಕ್ಕಲಿಗರ ಬೃಹತ್ ಸಮಾವೇಶ ನಡೆಲಾಗುತ್ತದೆ. ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ತುಮಕೂರು ಜಿಲ್ಲೆ ಒಳಗೊಂಡಂತೆ ಸಮಾವೇಶ ನಡೆಸಲಾಗುತ್ತದೆ. 2ನೇ ಹಂತದಲ್ಲಿ ಹೈದರಾಬಾದ್ ಕರ್ನಾಟಕ, 3ನೇ ಹಂತದಲ್ಲಿ ಮುಂಬೈ ಕರ್ನಾಟಕ, 4ನೇ ಹಂತದಲ್ಲಿ ಉತ್ತರ ಕರ್ನಾಟಕ, 5ನೇ ಹಂತದಲ್ಲಿ ಮಧ್ಯ ಕರ್ನಾಟಕದಲ್ಲಿ ಸಮಾವೇಶ ನಡೆಯಲಿದೆ. ಅಂತಿಮವಾಗಿ ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತದೆ’ ಎಂದರು.

‘ರಾಜ್ಯ ಬಜೆಟ್‌ನಲ್ಲಿ ಒಕ್ಕಲಿಗರ ಪ್ರಾಧಿಕಾರಕ್ಕೆ ₹ 500 ಕೋಟಿ ಅನುದಾನ ಮೀಸಲಿಟ್ಟಿರುವುದು ಒಳ್ಳೆಯ ಬೆಳವಣಿಗೆ. ಉಳುಮೆ ಮಾಡುವವರೆಲ್ಲರೂ ಒಕ್ಕಲಿಗರು. ಜನಾಂಗದವರು ಸ್ವಾಭಿಮಾನದಿಂದ ಬದುಕುತ್ತಿದ್ದು, ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಒಕ್ಕೂಟದ ಕಾನೂನು ಸಲಹೆಗಾರ ಕೆ.ವಿ.ಶಂಕರಪ್ಪ ಹೇಳಿದರು.

ಒಕ್ಕೂಟದ ರಾಜ್ಯ ಹಿರಿಯ ಉಪಾಧ್ಯಕ್ಷ ಎಚ್.ರಾಮಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ಬಿ.ಆರ್.ಲಕ್ಷ್ಮಣ್, ನಿರ್ದೇಶಕ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣಗೌಡ, ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ, ನಿರ್ದೇಶಕರಾದ ಎಸ್.ಬೈಚಪ್ಪ, ಮುತ್ತುರಾಜ್, ಪುನಿತ್‌, ಖಜಾಂಚಿ ವೀರವೆಂಕಟಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT