ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆ ಪ್ರಕ್ರಿಯೆ ಪಾರದರ್ಶಕ, ಅಭ್ಯರ್ಥಿಗಳಿಗೆ ಅನುಮಾನ ಬೇಡ: ಮಂಜುನಾಥ್‌

Last Updated 22 ಮೇ 2019, 14:14 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದ್ದು, ಏಜೆಂಟರು ಗೊಂದಲಕ್ಕೆ ಅವಕಾಶ ನೀಡಬಾರದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

ಇಲ್ಲಿ ಬುಧವಾರ ಕಾಂಗ್ರೆಸ್– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹಾಗೂ ಅವರ ಏಜೆಂಟರಿಗೆ ಮತ ಎಣಿಕೆ ಕುರಿತು ಮಾಹಿತಿ ನೀಡಿ ಮಾತನಾಡಿ, ‘ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಅಭ್ಯರ್ಥಿಗಳಿಗೆ ಹಾಗೂ ಏಜೆಂಟರಿಗೆ ಯಾವುದೇ ಅನುಮಾನ ಬೇಡ’ ಎಂದರು.

‘ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭೆ ಕ್ಷೇತ್ರಗಳು ಮತ್ತು 2100 ಬೂತ್‌ಗಳಿವೆ. ಎಣಿಕೆ ಕಾರ್ಯ ಬೆಳಿಗ್ಗೆ 8ಕ್ಕೆ ಆರಂಭವಾಗಲಿದ್ದು, ಏಜೆಂಟರು 7.30ಕ್ಕೆ ಕೇಂದ್ರದಲ್ಲಿ ಹಾಜರಿರಬೇಕು. ಎಣಿಕೆ ಕೇಂದ್ರದೊಳಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಕಡ್ಡಾಯವಾಗಿ ಗುರುತಿನ ಚೀಟಿ ತರಬೇಕು’ ಎಂದು ಸೂಚಿಸಿದರು.

‘ಮತದಾನ ದಿನದಂದು ವಿದ್ಯುನ್ಮಾನ ಮತ ಯಂತ್ರ (ಇವಿಎಂ), ಬ್ಯಾಟರಿ ಮತ್ತು ಮತ ಖಾತ್ರಿ ಉಪಕರಣ (ವಿ.ವಿ ಪ್ಯಾಟ್) ಸಮರ್ಪಕವಾಗಿ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಪರೀಕ್ಷೆ ನಡೆದಿರುತ್ತದೆ. ಆಗ 15 ಚೀಟಿಗಳು ವಿ.ವಿ ಪ್ಯಾಟ್‌ನಲ್ಲಿರುತ್ತವೆ. ಈ ಚೀಟಿಗಳಲ್ಲಿನ ಮತವು ಯಾವುದೇ ಅಭ್ಯರ್ಥಿಗೆ ಅನ್ವಯಿಸುವುದಿಲ್ಲ’ ಎಂದು ಹೇಳಿದರು.

‘ಇವಿಎಂ ಬಗ್ಗೆ ಯಾವುದೇ ಅನುಮಾನ ಬೇಡ. ಪ್ರತಿ ವಿಧಾನಸಭಾ ಕ್ಷೇತ್ರದ ತಲಾ 5 ವಿ.ವಿ ಪ್ಯಾಟ್‌ ಉಪಕರಣಗಳಲ್ಲಿನ ಮತ ಎಣಿಕೆ ಮಾಡಿ ಇವಿಎಂಗಳ ಜತೆ ತಾಳೆ ಹಾಕಲಾಗುತ್ತದೆ. ಆ ನಂತರವಷ್ಟೇ ಫಲಿತಾಂಶ ಘೋಷಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಮರು ಎಣಿಕೆ: ‘ಇವಿಎಂ ಮತ್ತು ವಿ.ವಿ ಪ್ಯಾಟ್ ಉಪಕರಣದ ಮತಗಳಲ್ಲಿ ವ್ಯತ್ಯಾಸ ಕಂಡುಬಂದರೆ ಮರು ಎಣಿಕೆಗೆ ಅವಕಾಶ ನೀಡುತ್ತೀರಾ?’ ಎಂದು ಮುನಿಯಪ್ಪ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಇವಿಎಂ ಮತ್ತು ವಿ.ವಿ ಪ್ಯಾಟ್‌ ಮತಗಳಲ್ಲಿ ವ್ಯತ್ಯಾಸ ಕಂಡುಬಂದರೆ ವಿ.ವಿ ಪ್ಯಾಟ್ ಮತಗಳನ್ನು ಎಣಿಕೆಗೆ ತೆಗೆದುಕೊಳ್ಳಲಾಗುವುದು’ ಎಂದು ಉತ್ತರಿಸಿದರು.

‘ವಿ.ವಿ ಪ್ಯಾಟ್‌ ಉಪಕರಣದಲ್ಲಿನ ಮತ ಎಣಿಕೆಯೂ ಬ್ಯಾಲೆಟ್ ಪೇಪರ್ ಎಣಿಕೆ ಮಾದರಿಯಲ್ಲಿ ನಡೆಯುತ್ತದೆ. ಇದನ್ನು ಲೆಕ್ಕ ಮಾಡಲು ಪ್ರತ್ಯೇಕ ಗ್ಯಾಲರಿ ಸಹ ನಿರ್ಮಿಸಲಾಗಿದೆ. ಎಣಿಕೆಯಲ್ಲಿ ಯಾವುದೇ ಅಕ್ರಮ ನಡೆಯುವುದಿಲ್ಲ. ಎಲ್ಲಾ ಅಭ್ಯರ್ಥಿಗಳ ಏಜೆಂಟರೂ ಇರುತ್ತಾರೆ’ ಎಂದು ಹೇಳಿದರು.

‘ಯಾವ ಬೂತ್‌ನ ವಿ.ವಿ ಪ್ಯಾಟ್‌ಗಳ ಮತ ಎಣಿಕೆ ಮಾಡಬೇಕೆಂದು ನಿರ್ಧರಿಸಿಲ್ಲ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಸಂಖ್ಯೆ ವಿವರವನ್ನು ಚೀಟಿಯಲ್ಲಿ ಬರೆದು ಡಬ್ಬಿಯೊಳಗೆ ಹಾಕಲಾಗುತ್ತದೆ. ನಂತರ ಆಯಾ ಕ್ಷೇತ್ರದ ಚುನಾವಣಾಧಿಕಾರಿ ಚೀಟಿ ತೆಗೆದಾಗ ಯಾವ ಬೂತ್ ಸಂಖ್ಯೆ ಬರುತ್ತದೆಯೋ ಅದರ ವಿ.ವಿ ಪ್ಯಾಟ್‌ನ ಮತಗಳನ್ನು ಎಣಿಕೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT