ವರಿಷ್ಠರಿಗೆ ಮತದಾರರೇ ಪಾಠ ಕಲಿಸುತ್ತಾರೆ: ಬಿಜೆಪಿ ಬಂಡಾಯ ಅಭ್ಯರ್ಥಿ ರಮೇಶ್‌ಬಾಬು

ಶುಕ್ರವಾರ, ಏಪ್ರಿಲ್ 26, 2019
28 °C

ವರಿಷ್ಠರಿಗೆ ಮತದಾರರೇ ಪಾಠ ಕಲಿಸುತ್ತಾರೆ: ಬಿಜೆಪಿ ಬಂಡಾಯ ಅಭ್ಯರ್ಥಿ ರಮೇಶ್‌ಬಾಬು

Published:
Updated:
Prajavani

ಕೋಲಾರ: ‘ನನಗೆ ಬಿಜೆಪಿಯ ಟಿಕೆಟ್ ಕೈತಪ್ಪಲು ಪಕ್ಷದ ಸ್ಥಳೀಯ ನಾಯಕರೇ ಕಾರಣ. ಬಿಜೆಪಿ ವರಿಷ್ಠರಿಗೆ ಹಾಗೂ ಜಿಲ್ಲೆಯ ಮುಖಂಡರಿಗೆ ಕ್ಷೇತ್ರದ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ವಿ.ಎಂ.ರಮೇಶ್‌ಬಾಬು ವಾಗ್ದಾಳಿ ನಡೆಸಿದರು.

ಇಲ್ಲಿ ಮಂಗಳವಾರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸತತ 2 ವರ್ಷಗಳಿಂದ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಜನರಿಗೆ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಕ್ಷೇತ್ರಕ್ಕೆ ಹೆಚ್ಚು ಚಿರಪರಿಚಿತನಾಗಿದ್ದೇನೆ’ ಎಂದರು.

‘ಯಾವುದೇ ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ಜನ ಸೇವೆ ಮಾಡುತ್ತಾ ಬಂದಿದ್ದೇನೆ. ನನಗೆ ಬಿಜೆಪಿಯ ಟಿಕೆಟ್ ಸಿಗುತ್ತದೆ ಎಂದು ಜನ ನಿರೀಕ್ಷಿಸಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ. ನನಗೆ ಟಿಕೆಟ್ ಕೈ ತಪ್ಪಿದ ವಿಚಾರ ತಿಳಿದ ಅನೇಕ ಮಂದಿ ಕರೆ ಮಾಡಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ಜನರ ಒತ್ತಾಯಕ್ಕೆ ಮಣಿದು ಉಮೇದುವಾರಿಕೆ ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.

‘ಸಂಸದ ಕೆ.ಎಚ್.ಮುನಿಯಪ್ಪ ಅವರ ಸಾಧನೆ ಏನೆಂದು ಜನರಿಗೆ ಗೊತ್ತಿದೆ. ಮುನಿಯಪ್ಪರ ದುರಾಡಳಿತದಿಂದ ಬೇಸತ್ತಿರುವ ಜನ ರಾಜಕೀಯ ಬದಲಾವಣೆ ಬಯಸಿದ್ದಾರೆ. ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಜನ ನನ್ನನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ’ ಎಂದು ಹೇಳಿದರು.

ಮೋದಿ ಹವಾ: ‘ರಾಷ್ಟ್ರ ಮತ್ತು ರಾಜ್ಯದಲ್ಲಿ ಮೋದಿ ಹವಾ ಇದೆ. ಈ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ಸಿಕ್ಕಿದರೆ ಗೆಲುವು ಖಚಿತವೆಂದು ಅರಿತು ಎದುರಾಳಿಗಳು ಕುತಂತ್ರ ಮಾಡಿ ಟಿಕೆಟ್ ತಪ್ಪಿಸಿದ್ದಾರೆ. ಅವರ ಕುತಂತ್ರ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ. ಜನರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ತೀವ್ರಗೊಂಡಿದೆ. ಇಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿದ್ದರೂ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ. ಸಂಸದ ಮುನಿಯಪ್ಪ ತಮ್ಮ ಬೆಂಬಲಿಗರು, ಸಂಬಂಧಿಕರು ಹಾಗೂ ಹೊರ ಜಿಲ್ಲೆಯವರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕೊಡಿಸಿದ್ದಾರೆ’ ಎಂದು ದೂರಿದರು.

‘ಪ್ರಧಾನಿ ಮೋದಿ 5 ವರ್ಷಗಳಲ್ಲಿ ಜನಪರ ಯೋಜನೆ ಜಾರಿಗೊಳಿಸುವ ಮೂಲಕ ಮನೆ ಮಾತಾಗಿದ್ದಾರೆ. ಜನರ ಮುಂದೆ ಕೇಂದ್ರದ ಯೋಜನೆಗಳನ್ನು ಪ್ರಸ್ತಾಪಿಸಿ ಮತ ಯಾಚಿಸುತ್ತೇನೆ. ಜತೆಗೆ ಮುನಿಯಪ್ಪರ ವೈಫಲ್ಯಗಳನ್ನು ಜನರ ಮುಂದಿಡುತ್ತೇನೆ’ ಎಂದರು.

ನಾಮಪತ್ರ ಸಲ್ಲಿವುದಕ್ಕೂ ಮುನ್ನ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಗರದ ಶಕ್ತಿ ದೇವತೆ ಕೋಲಾರಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !