ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ: ಕೋಲಾರದಲ್ಲಿ ಮತದಾನ ಶಾಂತಿಯುತ

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ: ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ
Last Updated 28 ಅಕ್ಟೋಬರ್ 2020, 15:24 IST
ಅಕ್ಷರ ಗಾತ್ರ

ಕೋಲಾರ: ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಜಿಲ್ಲೆಯಲ್ಲಿ ಬುಧವಾರ ನಡೆದ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದ್ದು, 15 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಜಿಲ್ಲೆಯ 36 ಮತಗಟ್ಟೆಗಳಲ್ಲಿ ನಿಗದಿತ ಸಮಯದಂತೆ ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತು. ಮೊದಲ ಎರಡು ತಾಸು ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಮತದಾನ ಮಂದ ಗತಿಯಲ್ಲಿ ಸಾಗಿತ್ತು. 10 ಗಂಟೆಯ ನಂತರ ಮತದಾನ ಪ್ರಕ್ರಿಯೆ ಚುರುಕುಗೊಂಡಿತು. ಜಿಲ್ಲೆಯಲ್ಲಿನ ಅರ್ಹ ಪದವೀಧರ ಮತದಾರರು ತಂಡೋಪತಂಡವಾಗಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.

ಸಮಯ ಕಳೆದಂತೆ ಮತಗಟ್ಟೆಗಳ ಬಳಿ ಮತದಾರರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕೋಲಾರ ತಾಲ್ಲೂಕಿನ ಮತಗಟ್ಟೆಗಳ ಬಳಿ ಮತದಾರರ ದೊಡ್ಡ ಸಾಲು ಕಂಡು ಬಂತು.

ಕೋವಿಡ್‌ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಪ್ರತಿ ಮತಗಟ್ಟೆಗೆ ಇಬ್ಬರು ಆಶಾ ಕಾರ್ಯಕರ್ತೆಯರು ಹಾಗೂ ಒಬ್ಬರು ಶುಶ್ರೂಷಕಿಯರನ್ನು ನೇಮಿಸಲಾಗಿತ್ತು. ಆಶಾ ಕಾರ್ಯಕರ್ತೆಯರು ಮತಗಟ್ಟೆಗಳ ಪ್ರವೇಶ ಭಾಗದಲ್ಲೇ ಮತದಾರರ ಕೈಗಳಿಗೆ ಸ್ಯಾನಿಟೈಸರ್‌ ಹಾಕಿ ಗ್ಲೌಸ್‌ ನೀಡಿದರು. ಆರೋಗ್ಯ ಕಾರ್ಯಕರ್ತೆಯರು ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.

ಮತದಾರರು ಮಾಸ್ಕ್‌ ಧರಿಸಿ ಮತಗಟ್ಟೆಗೆ ಬಂದಿದ್ದರು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಸಹ ಮಾಸ್ಕ್‌ ಧರಿಸಿದ್ದರು. ಮಹಿಳಾ ಹಾಗೂ ಪುರುಷ ಮತದಾರರು ಅಂತರ ಕಾಯ್ದುಕೊಂಡು ಮತ ಚಲಾಯಿಸಿದರು. ಮತಗಟ್ಟೆ ಸಿಬ್ಬಂದಿಯು ಮತದಾರರ ಎಡಗೈನ ತೋರು ಬೆರಳಿಗೆ ಶಾಹಿ ಗುರುತು ಹಾಕಿದರು.

ಸಾಂದರ್ಭಿಕ ರಜೆ: ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಪ್ರಮುಖ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆಗಳಿಂದ ಸ್ವಲ್ಪ ದೂರದಲ್ಲಿ ಟೇಬಲ್‌ ಹಾಕಿ, ಮತದಾರರಿಗೆ ಅಭ್ಯರ್ಥಿಗಳ ಕ್ರಮಸಂಖ್ಯೆ ಹಾಗೂ ಇತರೆ ವಿವರಗಳನ್ನು ಒಳಗೊಂಡ ಕರಪತ್ರ ಕೊಟ್ಟು ಮತ ಯಾಚಿಸುತ್ತಿದ್ದ ದೃಶ್ಯ ಕಂಡುಬಂತು. ಅಲ್ಲದೇ, ಮತದಾರರಿಗೆ ಊಟ, ತಿಂಡಿ, ಕಾಫಿ, ಟೀ, ನೀರು, ಮಜ್ಜಿಗೆ ಹಾಗೂ ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.

ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಅರ್ಹ ಪದವೀಧರ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡಲಾಗಿತ್ತು.

ಮತಗಟ್ಟೆ ಪರಿಶೀಲನೆ: ಚುನಾವಣಾ ವೀಕ್ಷಕ ಮಹೇಂದ್ರ ಜೈನ್‌ ಹಾಗೂ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಉಪ ವಿಭಾಗಾಧಿಕಾರಿ ಸೋಮಶೇಖರ್‌ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋವಿಡ್‌–19 ಹಿನ್ನೆಲೆಯಲ್ಲಿ ಮತದಾರರು ಸಾಲಿನಲ್ಲಿ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಪೊಲೀಸರು ಮತಗಟ್ಟೆಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿ ವ್ಯಕ್ತಿಯನ್ನು ತಪಾಸಣೆ ಮಾಡಿದ ನಂತರವಷ್ಟೇ ಒಳ ಹೋಗಲು ಅವಕಾಶ ನೀಡಿದರು. ಮತಗಟ್ಟೆಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.ತಹಶೀಲ್ದಾರ್‌ಗಳ ನೇತೃತ್ವದ ಮಾದರಿ ಚುನಾವಣಾ ನೀತಿಸಂಹಿತೆ ತಂಡ ಮತ್ತು ಸಂಚಾರ ದಳದ (ಫ್ಲೈಯಿಂಗ್‌ ಸ್ಕ್ವಾಡ್‌) ಅಧಿಕಾರಿಗಳು ಹಾಗೂ ವೀಕ್ಷಕರು ನಿಯಮಿತವಾಗಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಸಂಜೆ 5ಕ್ಕೆ ಮತದಾನ ಪೂರ್ಣಗೊಂಡ ನಂತರ ಮತ ಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಭದ್ರತಾ ಕೊಠಡಿಗೆ ಕೊಂಡೊಯ್ಯಲಾಯಿತು. ಸರ್ಕಾರಿ ಕಲಾ ಕಾಲೇಜಿನಲ್ಲಿ ನ.2ರಂದು ಮತ ಎಣಿಕೆ ನಡೆಯಲಿದೆ.

ಅಂಕಿ ಅಂಶ.....
* 21,442 ಮಂದಿ ಮತದಾರರು
* 36 ಮತಗಟ್ಟೆಗಳು
* 17,043 ಮಂದಿ ಮತ ಚಲಾವಣೆ
* 4,399 ಮಂದಿ ಮತ ಚಲಾಯಿಸದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT