ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: ಅವಳಿ ಜಿಲ್ಲೆಯಲ್ಲಿ ಮತದಾನ ಶಾಂತಿಯುತ

ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ
Last Updated 10 ಡಿಸೆಂಬರ್ 2021, 14:36 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಅವಳಿ ಜಿಲ್ಲೆಯ 321 ಮತಗಟ್ಟೆಗಳಲ್ಲಿ ನಿಗದಿತ ಸಮಯದಂತೆ ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತು. ಮೊದಲ ಎರಡು ತಾಸು ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಮತದಾನ ಮಂದ ಗತಿಯಲ್ಲಿ ಸಾಗಿತ್ತು.

ಮಧ್ಯಾಹ್ನ 12 ಗಂಟೆವರೆಗೆ ಶೇ 51.17ರಷ್ಟು ಮತದಾನವಾಗಿತ್ತು. ನಂತರ ಮತದಾನ ಚುರುಕುಗೊಂಡು ಮಧ್ಯಾಹ್ನ 2ರ ವೇಳೆಗೆ ಶೇ 86.29ರಷ್ಟು ಮತದಾನವಾಯಿತು. ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಯ ಅರ್ಹ ಮತದಾರರು ತಂಡೋಪತಂಡವಾಗಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.ಸಮಯ ಕಳೆದಂತೆ ಮತಗಟ್ಟೆಗಳ ಬಳಿ ಮತದಾರರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕೋಲಾರ, ಗೌರಿಬಿದನೂರು ಹಾಗೂ ಚಿಂತಾಮಣಿ ತಾಲ್ಲೂಕಿನ ಮತಗಟ್ಟೆಗಳ ಬಳಿ ಮತದಾರರ ದೊಡ್ಡ ಸಾಲು ಕಂಡುಬಂತು.

ಕೋವಿಡ್‌ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಪ್ರತಿ ಮತಗಟ್ಟೆಗೆ ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರನ್ನು ನೇಮಿಸಲಾಗಿತ್ತು. ಆಶಾ ಕಾರ್ಯಕರ್ತೆಯರು ಮತಗಟ್ಟೆಗಳ ಪ್ರವೇಶ ಭಾಗದಲ್ಲೇ ಮತದಾರರ ಕೈಗಳಿಗೆ ಸ್ಯಾನಿಟೈಸರ್‌ ಹಾಕಿದರು. ಆರೋಗ್ಯ ಕಾರ್ಯಕರ್ತೆಯರು ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.

ಮತದಾರರು ಮಾಸ್ಕ್‌ ಧರಿಸಿ ಮತಗಟ್ಟೆಗೆ ಬಂದಿದ್ದರು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಸಹ ಮಾಸ್ಕ್‌ ಧರಿಸಿದ್ದರು. ಮಹಿಳಾ ಹಾಗೂ ಪುರುಷ ಮತದಾರರು ಅಂತರ ಕಾಯ್ದುಕೊಂಡು ಮತ ಚಲಾಯಿಸಿದರು. ಪ್ರತಿ ಮತಗಟ್ಟೆಯಲ್ಲೂ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಯಿತು.

ಹಣದ ಹೊಳೆ: ಮತಗಟ್ಟೆಗಳಿಂದ ಸ್ವಲ್ಪ ದೂರದಲ್ಲಿ ಗುಂಪುಗೂಡಿದ್ದ ರಾಜಕೀಯ ಮುಖಂಡರು, ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳ ಬೆಂಬಲಿಗರು ಮತದಾರರಿಗೆ ಅಭ್ಯರ್ಥಿಗಳ ಕ್ರಮಸಂಖ್ಯೆ ಹಾಗೂ ಇತರೆ ವಿವರ ನೀಡಿ ಮತ ಯಾಚಿಸುತ್ತಿದ್ದ ದೃಶ್ಯ ಕಂಡುಬಂತು. ಗ್ರಾಮೀಣ ಭಾಗದಲ್ಲಿ ಮತದಾರರಿಗೆ ಊಟ, ತಿಂಡಿ, ಕಾಫಿ, ಟೀ, ನೀರು, ಮಜ್ಜಿಗೆ ಹಾಗೂ ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು. ಕೆಲವೆಡೆ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ವಾಹನದಲ್ಲಿ ಕರೆತಂದು ಮತ ಹಾಕಿಸಿದರು.

ಮತದಾರರ ಓಲೈಕೆಗೆ ಅಂತಿಮ ಕ್ಷಣದ ಕಸರತ್ತು ನಡೆಸಿದ ಮೂರೂ ಪಕ್ಷಗಳು ಹಣದ ಹೊಳೆ ಹರಿಸಿದವು. ಪಕ್ಷಗಳ ಕಾರ್ಯಕರ್ತರು ಪರಸ್ಪರ ಪೈಪೋಟಿಗೆ ಇಳಿದವರಂತೆ ಮತದಾರರಿಗೆ ಹಣ ಹಂಚಿದರು. ಪ್ರತಿ ಮತದಾರನಿಗೆ ₹ 1 ಲಕ್ಷದವರೆಗೆ ಹಣ ಕೊಡಲಾಯಿತು. ಅಲ್ಲದೇ, ಚಿನ್ನದ ಉಂಗುರ, ಮಹಿಳಾ ಮತದಾರರಿಗೆ ರೇಷ್ಮೆ ಸೀರೆ ಉಡುಗೊರೆಯಾಗಿ ನೀಡಲಾಯಿತು.

ಮತಗಟ್ಟೆ ಪರಿಶೀಲನೆ: ಚುನಾವಣಾ ವೀಕ್ಷಕ ಮನೀಷ್‌ ಮೌದ್ಗಲ್‌, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಜಿ.ಪಂ ಸಿಇಒ ಉಕೇಶ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಮತದಾರರು ಸಾಲಿನಲ್ಲಿ ಅಂತರ ಕಾಯ್ದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಪೊಲೀಸರು ಮತಗಟ್ಟೆಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿ ವ್ಯಕ್ತಿಯನ್ನು ತಪಾಸಣೆ ಮಾಡಿದ ನಂತರವಷ್ಟೇ ಒಳ ಹೋಗಲು ಅವಕಾಶ ನೀಡಿದರು. ಮತಗಟ್ಟೆಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಮಾದರಿ ಚುನಾವಣಾ ನೀತಿಸಂಹಿತೆ ತಂಡ ಮತ್ತು ಸಂಚಾರ ದಳದ (ಫ್ಲೈಯಿಂಗ್‌ ಸ್ಕ್ವಾಡ್‌) ಅಧಿಕಾರಿಗಳು ಹಾಗೂ ವೀಕ್ಷಕರು ನಿಯಮಿತವಾಗಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಸಂಜೆ 4ಕ್ಕೆ ಮತದಾನ ಪೂರ್ಣಗೊಂಡ ನಂತರ ಮತ ಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯಲ್ಲಿ ಕೋಲಾರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಭದ್ರತಾ ಕೊಠಡಿಗೆ ತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT