ಬುಧವಾರ, ಜನವರಿ 20, 2021
15 °C

ಗೋಡ ಬರಹ: ಕಾಂಗ್ರೆಸ್‌ ತುಷ್ಟೀಕರಣ ನೀತಿ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಮಂಗಳೂರಿನಲ್ಲಿ ವರದಿಯಾಗಿರುವ ದೇಶದ್ರೋಹದ ಗೋಡೆ ಬರಹಕ್ಕೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ನೀತಿಯೇ ಕಾರಣ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವಾಗ್ದಾಳಿ ನಡೆಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವಿದ್ದಾಗ ರಾಜ್ಯದಲ್ಲಿ 24 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿದ್ದ ಎಸ್‌ಡಿಪಿಐ, ಕೆಎಫ್‌ಡಿ ಸಂಘಟನೆ ಕಾರ್ಯಕರ್ತರನ್ನು ಬಿಡುಗಡೆ ಮಾಡಿತು’ ಎಂದು ಗುಡುಗಿದರು.

‘ವಿವಾದಿತ ಗೋಡೆ ಬರಹ ಪ್ರಕರಣದ ತನಿಖೆಗೆ ಸರ್ಕಾರ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಪ್ರಕರಣದ ಹಿಂದೆ ಇರುವ ಸಂಘಟನೆ ಅಥವಾ ವ್ಯಕ್ತಿಗಳ ಎಡೆಮುರಿಕಟ್ಟುವಂತೆ ಸೂಚಿಸಲಾಗಿದೆ. ಆರೋಪಿಗಳನ್ನು ಬಂಧಿಸುವುದು ಪೊಲೀಸರ ಅಧಿಕಾರ’ ಎಂದರು.

‘ರಾಜ್ಯದಲ್ಲಿ ಎಲ್ಲಿಯೂ ದೇಶದ್ರೋಹದ ಘಟನೆ ನಡೆಯಬಾರದು. ನಮ್ಮ ಸರ್ಕಾರ ಇಂತಹ ಚಟುವಟಿಕೆಗಳಿಗೆ ಆಸ್ಪದ ಕೊಡುವುದಿಲ್ಲ. ಡಿ.ಜೆ.ಹಳ್ಳಿ, ಮಂಗಳೂರು ಗಲಭೆ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಂಡಿದೆ. ದೇಶದ್ರೋಹದ ಚಟುವಟಿಕೆ ನಡೆಸಿದರೆ ಮುಲಾಜಿಲ್ಲದೆ ಬಂಧಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಪಕ್ಷವು ಸಚಿವ ಸಂಪುಟ ವಿಸ್ತರಣೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದೆ. ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯ ಮತ್ತು ಪ್ರದೇಶವಾರು ಪ್ರಾತಿನಿಧ್ಯದ ಆಧಾರದಲ್ಲಿ ವರಿಷ್ಠರ ಅನುಮತಿ ಪಡೆದು ನಿರ್ಧಾರ ಮಾಡುತ್ತಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.