ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರದಲ್ಲಿ ವಾರ್ಡ್‌ವಾರು ಸಭೆ

ನಗರಸಭೆ ಹಂತದಲ್ಲೇ ಸಮಸ್ಯೆ ಬಗೆಹರಿಸಿ: ಎಸಿಬಿ ಡಿವೈಎಸ್ಪಿ ಪುರುಷೋತ್ತಮ್‌ ಸೂಚನೆ
Last Updated 28 ಜನವರಿ 2020, 13:49 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾ ಕೇಂದ್ರದಲ್ಲಿ ದಿನೇದಿನೇ ಸಮಸ್ಯೆ ಹೆಚ್ಚುತ್ತಿದ್ದು, ನಗರವಾಸಿಗಳು ರೋಸಿ ಹೋಗಿದ್ದಾರೆ. ಜನರ ಅನುಕೂಲಕ್ಕಾಗಿ ವಾರ್ಡ್‌ವಾರು ಕುಂದು ಕೊರತೆ ಸಭೆ ನಡೆಸುತ್ತೇವೆ’ ಎಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್ಪಿ ಪುರುಷೋತ್ತಮ್ ತಿಳಿಸಿದರು.

ಭ್ರಷ್ಟಾಚಾರ ನಿಗ್ರಹ ದಳವು ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿ, ‘ನಗರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ನಗರಸಭಾ ಸದಸ್ಯರ ಮೇಲೆ ಜವಾಬ್ದಾರಿ ಹೆಚ್ಚಿದೆ. ನಗರಸಭೆ ಹಂತದಲ್ಲೇ ಸಮಸ್ಯೆ ಬಗೆಹರಿಸಿದರೆ ಜನರು ಎಸಿಬಿವರೆಗೆ ಬರುವುದಿಲ್ಲ’ ಎಂದರು.

‘ಸಾರ್ವಜನಿಕರಿಗೆ ಅರಿವು ಮೂಡಿಸಲು ಸಭೆ ನಡೆಸಲಾಗುತ್ತಿದೆ. ಸರ್ಕಾರ ಬಡವರು, ದಲಿತರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಸೌಕರ್ಯ ಜನರಿಗೆ ತಲುಪುವ ಹಂತದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಸ್ತಕ್ಷೇಪ ಮಾಡುವ ಕಡೆ ಎಸಿಬಿ ಮಧ್ಯಪ್ರವೇಶಿಸುತ್ತದೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿಯಿಂದ ಹಿಡಿದು ಪ್ರಧಾನಿಯವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಪ್ಪನ್ನು ಜನ ಎಲ್ಲಿವರೆಗೆ ಪ್ರಶ್ನಿಸುವುದಿಲ್ಲವೋ ಆವರೆಗೆ ವ್ಯವಸ್ಥೆ ಹೀಗೆಯೇ ಮುಂದುವರಿಯುತ್ತದೆ. ಚುನಾವಣೆಯಲ್ಲಿ ಗೆದ್ದ ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸದೆ ಜನರೇ ಹುಡುಕಿಕೊಂಡು ಬರುವಂತಹ ಪರಿಸ್ಥಿತಿ ಸೃಷ್ಟಿಸುವುದು ಸರಿಯಲ್ಲ. ಜನಪ್ರತಿನಿಧಿಗಳು ವ್ಯವಸ್ಥೆ ಬದಲಾವಣೆ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಳ್ಮೆ ವಹಿಸಿದ್ದಾರೆ: ‘ಆಂಧ್ರಪ್ರದೇಶ ಸೇರಿದಂತೆ ನೆರೆಹೊರೆಯ ರಾಜ್ಯಗಳಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಜನರೇ ತಕ್ಕ ಶಾಸ್ತಿ ಮಾಡಿದ ಉದಾಹರಣೆಗಳಿವೆ. ಕರ್ನಾಟಕ ರಾಜ್ಯದ ಜನ ತಾಳ್ಮೆ ವಹಿಸಿದ್ದಾರೆ. ಸಾರ್ವಜನಿಕರು ತಾಳ್ಮೆ ಕಳೆದುಕೊಂಡು ಆಕ್ರೋಶಗೊಳ್ಳುವ ಮೊದಲು ಅಧಿಕಾರಿಗಳು ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.

‘ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಹೆಸರಿನಲ್ಲಿ ಕೆಲ ಸಂಘಟನೆಗಳ ಸದಸ್ಯರು ತಮ್ಮ ವಾಹನಗಳಿಗೆ ನಾಮಫಲಕ ಹಾಕಿಕೊಂಡು ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅಪರಾಧ. ಕೆಲವರು ಪತ್ರಿಕಾ ವರದಿಗಾರರೆಂದು ಹೇಳಿಕೊಂಡು ಅಧಿಕಾರಿಗಳನ್ನು ಪ್ರಶ್ನಿಸುವುದೂ ಇದೆ. ಇದಕ್ಕೆಲ್ಲಾ ಅವಕಾಶ ಕೊಡಬೇಡಿ’ ಎಂದು ಎಚ್ಚರಿಕೆ ನೀಡಿದರು.

ತನಿಖೆ ನಡೆಸುತ್ತೇವೆ: ‘ವಾರ್ಷಿಕ ಆಯವ್ಯಯದಲ್ಲಿ ಆಗಿರುವ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ನಡೆಯುವ ಲೆಕ್ಕಪರಿಶೋಧನೆಯಲ್ಲಿ ಕಂಡುಬರುವ ವ್ಯತ್ಯಾಸದ ಹಣವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಆದರೆ, ತಪ್ಪಿತಸ್ಥ ಅಧಿಕಾರಿಗಳಿಂದ ಹಣ ವಸೂಲಿ ಮಾಡದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ದೂರು ಬಂದಿದ್ದು, ತನಿಖೆ ನಡೆಸುತ್ತೇವೆ’ ಎಂದು ವಿವರಿಸಿದರು.

ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಹೆಚ್ಚು ದೂರು ಸಲ್ಲಿಕೆಯಾದವು. ಯುಜಿಡಿ, ಕಸ, ಖಾತೆ ಬದಲಾವಣೆ, ಬೀದಿ ದೀಪ ನಿರ್ವಹಣೆ ಕುರಿತು ಜನರು ಅಹವಾಲು ಸಲ್ಲಿಸಿದರು. ಕೆಲ ಸಮಸ್ಯೆಗೆ ಸಂಬಂಧಿಸಿದ ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು. ಎಸಿಬಿ ಇನ್ಸ್‌ಪೆಕ್ಟರ್ ವೆಂಕಟಾಚಲಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT