ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಬಹಿಷ್ಕಾರದ ಎಚ್ಚರಿಕೆ

ಕೆ.ಸಿ ವ್ಯಾಲಿ ಯೋಜನೆ ನೀರಿಗೆ ಆಗ್ರಹಿಸಿ ಮಲ್ಲಸಂದ್ರ ಗ್ರಾಮಸ್ಥರ ಧರಣಿ
Last Updated 18 ಏಪ್ರಿಲ್ 2019, 15:00 IST
ಅಕ್ಷರ ಗಾತ್ರ

ಕೋಲಾರ: ಗ್ರಾಮಕ್ಕೆ ಕೆ.ಸಿ ವ್ಯಾಲಿ ನೀರು ಹರಿಸುವಂತೆ ಆಗ್ರಹಿಸಿ ತಾಲ್ಲೂಕಿನ ಮಲ್ಲಸಂದ್ರ ಗ್ರಾಮಸ್ಥರು ಗುರುವಾರ ಧರಣಿ ನಡೆಸಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

ಮಾಲೂರು ತಾಲ್ಲೂಕು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಸುಮಾರು 450 ಮಂದಿ ಮತದಾರರಿದ್ದಾರೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಹಣ ಕೊಟ್ಟರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರಿನ ಸಮಸ್ಯೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಗುರುವಾರ ಬೆಳಿಗ್ಗೆ ದಿಢೀರ್‌ ಹೋರಾಟ ಆರಂಭಿಸಿ ಸರ್ಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಧರಣಿನಿರತ ಗ್ರಾಮಸ್ಥರು ಮಧ್ಯಾಹ್ನ 2 ಗಂಟೆವರೆಗೂ ಮತಗಟ್ಟೆಯತ್ತ ಸುಳಿಯಲಿಲ್ಲ.

‘ಗ್ರಾಮದಿಂದ ಒಂದೆರಡು ಕಿ.ಮೀ ದೂರದ ಲಕ್ಷ್ಮೀಸಾಗರ ಕೆರೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿಸಲಾಗಿದೆ. ಆದರೆ, ಸಮೀಪದಲ್ಲೇ ಇರುವ ನಮ್ಮ ಗ್ರಾಮದ ಕೆರೆಗೆ ನೀರು ಕೊಟ್ಟಿಲ್ಲ. ನಾವೇನು ಅನ್ಯಾಯ ಮಾಡಿದ್ದೇವೆ’ ಎಂದು ಗ್ರಾಮದ ಯುವಕ ಜಗನ್ ಹಾಗೂ ಶುಭಾ ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮವು ಗಡಿ ಗ್ರಾಮವಾಗಿದ್ದು, ಜಿಲ್ಲಾಡಳಿತ ನಮ್ಮನ್ನು ಕಡೆಗಣಿಸಿದೆ. ಗ್ರಾಮದಲ್ಲಿ ಪೋಡಿ ಅದಾಲತ್ ನಡೆಸಿಲ್ಲ. ಕೆ.ಸಿ ವ್ಯಾಲಿ ನೀರಿಗೆ ಆಗ್ರಹಿಸಿ ಈಗಾಗಲೇ ಅಧಿಕಾರಿಗಳಿಗೆ 2 ಬಾರಿ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿ ನಮ್ಮ ಅಳಲು ಆಲಿಸಲು ಸಿದ್ಧರಿಲ್ಲ’ ಎಂದು ಆರೋಪಿಸಿದರು.

ಮತದಾನ ಮಾಡುವುದಿಲ್ಲ: ‘ಗ್ರಾಮದಲ್ಲಿ 1,500 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಕೆ.ಸಿ ವ್ಯಾಲಿ ನೀರು ಹರಿಸುವ ಭರವಸೆ ನೀಡುವವರೆಗೂ ಮತದಾನ ಮಾಡುವುದಿಲ್ಲ’ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಬಳಿಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್‌ ಗ್ರಾಮಕ್ಕೆ ಭೇಟಿ ನೀಡಿ ಧರಣಿನಿರತರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಗ್ರಾಮಸ್ಥರು ಪಟ್ಟು ಸಡಿಲಿಸದ ಕಾರಣ ಸಿಇಒ ಹಿಂದಿರುಗಿದರು.

6 ತಿಂಗಳಲ್ಲಿ ಕ್ರಮ: ನಂತರ ಮಧ್ಯಾಹ್ನ 1-.30ರ ಸುಮಾರಿಗೆ ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್, ‘ಗ್ರಾಮಕ್ಕೆ ಕೆ.ಸಿ ವ್ಯಾಲಿ ನೀರು ಹರಿಸುವ ಬಗ್ಗೆ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಿ 6 ತಿಂಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಮಧ್ಯಾಹ್ನ 2 ಗಂಟೆ ವೇಳೆಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT