ಭಾನುವಾರ, ಆಗಸ್ಟ್ 25, 2019
28 °C
ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದೆ ವಂಚನೆ: ಉಪ ವಿಭಾಗಾಧಿಕಾರಿ ಕಿಡಿ

ಶಾಲೆಗಳ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ

Published:
Updated:
Prajavani

ಕೋಲಾರ: ‘ಖಾಸಗಿ ಶಾಲೆಗಳು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮೀಸಲಾತಿ ಆಧಾರದಲ್ಲಿ ಪ್ರವೇಶ ನೀಡದೆ ವಂಚಿಸುತ್ತಿವೆ. ಈ ಬಗ್ಗೆ ಶೀಘ್ರವೇ ಪರಿಶೀಲನೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಬೇಕು’ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಆದೇಶಿಸಿದರು.

ಇಲ್ಲಿ ಮಂಗಳವಾರ ನಡೆದ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣ ತಡೆ ಸಭೆಯಲ್ಲಿ ಮಾತನಾಡಿ, ‘ಖಾಸಗಿ ಶಾಲೆಗಳು ಸರ್ಕಾರದ ನಿಯಮಾವಳಿ ಗಾಳಿಗೆ ತೂರಿದರೆ ನೋಡಿಕೊಂಡು ಕೂರಲು ಸಾಧ್ಯವಿಲ್ಲ. ಕೂಡಲೇ ಡಿಡಿಪಿಐಗೆ ಪತ್ರ ಕಳುಹಿಸಿ, ಸಭೆ ನಡೆಸಿ ಖಾಸಗಿ ಶಾಲೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಪ್ರವೇಶ ಶುಲ್ಕದ ವಿವರವುಳ್ಳ ಫಲಕವನ್ನು ಶಾಲೆಗಳಲ್ಲಿ ಹಾಕಿಸಲಾಗುವುದು. ಆಗಲೂ ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ಖಾಸಗಿ ಶಾಲೆಗಳು ಹದ್ದು ಮೀರಿವೆ. ಶಾಲೆ ಆಡಳಿತ ಮಂಡಳಿ ಸದಸ್ಯರು ಶಿಕ್ಷಣ ಇಲಾಖೆ ಅಧಿಕಾರಿಗಳ ಮಾತಿಗೆ ನಯಾಪೈಸೆ ಬೆಲೆ ಕೊಡುತ್ತಿಲ್ಲ. ಹೆಚ್ಚು ಮಾತನಾಡಿದರೆ ಅಧಿಕಾರಿಗಳನ್ನೇ ಬೆದರಿಸಿ ಕೂಡಿ ಹಾಕುತ್ತಾರೆ’ ಎಂದು ಪರಿಶಿಷ್ಟ ಸಮುದಾಯದ ಮುಖಂಡರು ಕಿಡಿಕಾರಿದರು.

‘ಸಮಿತಿಯಿಂದ ಗ್ರಾಮೀಣ ಭಾಗದಲ್ಲಿ ದೇವಸ್ಥಾನಗಳ ಸಮೀಕ್ಷೆ ನಡೆಸಲಾಗಿದ್ದು, ಶೇ 90ರಷ್ಟು ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ರಕ್ಷಣೆ ಇದ್ದರೆ ದಲಿತರು ಸಹ ಎಲ್ಲರಂತೆ ದೇವಾಲಯಕ್ಕೆ ಬರುತ್ತಾರೆ. ನಾವು ಕಾರ್ಯಕ್ರಮ ನಡೆಸಿರುವ ಪರಿಣಾಮ ರಾಜ್ಯದ 32 ಸಾವಿರ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶಾವಕಾಶ ಸಿಕ್ಕಿದೆ’ ಎಂದು ಭಾರತ ಗೃಹಪ್ರವೇಶ ಸಮಿತಿ ಅಧ್ಯಕ್ಷ ಜಿ.ಶಿವಪ್ಪ ಅರಿವು ತಿಳಿಸಿದರು.

ಕ್ರಮ ತೆಗೆದುಕೊಂಡಿಲ್ಲ: ‘ನಗರ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಗಳು ಬಹುತೇಕ ದಲಿತರೇ ಆಗಿದ್ದಾರೆ. ಮುಳಬಾಗಿಲಿನಲ್ಲಿ ಇತ್ತೀಚೆಗೆ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ಯಾವುದೇ ಸುರಕ್ಷತಾ ಸಲಕರಣೆ ಬಳಸದೆ ಸಫಾಯಿ ಕರ್ಮಚಾರಿಗಳಿಂದಲೇ ಕೆಲಸ ಮಾಡಿಸಲಾಯಿತು. ಈ ಬಗ್ಗೆ ಅಧಿಕಾರಿಗಳಿಗೆ ಚಿತ್ರ ಸಮೇತ ಮಾಹಿತಿ ನೀಡಿದರೂ ಕ್ರಮ ತೆಗೆದುಕೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ, ‘ಮುಜರಾಯಿ ಇಲಾಖೆ ದೇವಾಲಯಗಳು ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲೂ ಎಲ್ಲಾ ವರ್ಗದ ಜನರಿಗೆ ಪ್ರವೇಶವಿದೆ ಎಂಬ ಫಲಕ ಅಳವಡಿಸಬೇಕು. ತಹಶೀಲ್ದಾರ್‌ಗಳು ಪೊಲೀಸರ ಸಹಕಾರ ಪಡೆದು ಈ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಸಲಕರಣೆ ವ್ಯವಸ್ಥೆ ಮಾಡಿ’ ಎಂದು ಮುಳಬಾಗಿಲು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.

ಅಕ್ರಮ ಪರಭಾರೆ: ‘ಸರ್ವೆ ಇಲಾಖೆ ಅಧಿಕಾರಿ ಸುರೇಶ್‌ಬಾಬು ದಲಿತರ ಜಮೀನುಗಳನ್ನು ಗುರಿಯಾಗಿಸಿಕೊಂಡು ನಕಲಿ ದಾಖಲೆಪತ್ರ ಸೃಷ್ಟಿಸಿ ಅಕ್ರಮವಾಗಿ ಪರಭಾರೆ ಮಾಡುತ್ತಿದ್ದಾರೆ. ಅವರ ವಿರುದ್ಧ ಈವರೆಗೆ ಶಿಸ್ತುಕ್ರಮ ಜರುಗಿಸಿಲ್ಲ’ ಎಂದು ದಲಿತ ಮುಖಂಡರು ಆರೋಪಿಸಿದರು.

‘ಸುರೇಶ್‌ಬಾಬು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಮಾಲೂರು ಶಾಸಕ ನಂಜೇಗೌಡರನ್ನು ಪ್ರಕರಣದಲ್ಲಿ ಸಿಲುಕಿಸಿ ತೊಂದರೆ ನೀಡಿ ಬೆದರಿಸುತ್ತಿದ್ದಾರೆ. ದಾಖಲೆಪತ್ರ ಸಮೇತ ದೂರು ನೀಡಿದರೂ ಸುರೇಶ್‌ಬಾಬು ವಿರುದ್ಧ ಕ್ರಮ ಜರುಗಿಸಿಲ್ಲ’ ಎಂದು ದೂರಿದರು.

ಸಮಸ್ಯೆಗೆ ಸ್ಪಂದಿಸುತ್ತಿಲ್ಲ: ‘ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿ ಮೂಲಸೌಕರ್ಯಗಳಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಮಾಲೂರು ತಾಲ್ಲೂಕು ಅಧಿಕಾರಿ ಶಿವಕುಮಾರ್ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಅಸಮಾಧಾನ ವ್ಯಕ್ತಪಡಿಸಿದರು.

ಆಗ ಶಿವಕುಮಾರ್‌ ಅವರನ್ನು ತರಾಟೆ ತೆಗೆದುಕೊಂಡ ಉಪ ವಿಭಾಗಾಧಿಕಾರಿ, ‘ನಾನು ಹೇಳಿದ್ದ 3 ಕೆಲಸ ನೀವು ಮಾಡಿಲ್ಲ. ನಿಮಗೆ ಯಾಕೆ ಸಂಬಳ ಕೊಡಬೇಕು. ಆಟ ಅಡುತ್ತೀರಾ, 2 ದಿನದೊಳಗೆ ಸಮಗ್ರ ವರದಿ ನೀಡದಿದ್ದರೆ ತಕ್ಕ ಶಾಸ್ತಿ ಮಾಡುತ್ತೇನೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ದೌರ್ಜನ್ಯ ಪ್ರಕರಣ: ‘ದಲಿತರ ಮೇಲಿನ ದೌರ್ಜನ್ಯ ಸಂಬಂಧ 2017ರಲ್ಲಿ 39 ಪ್ರಕರಣ ದಾಖಲಾಗಿದ್ದು, ಈ ಪೈಕಿ 8 ಪ್ರಕರಣ ಸುಳ್ಳಾಗಿವೆ. 2018ರಲ್ಲಿ 31 ಪ್ರಕರಣ ದಾಖಲಾಗಿದ್ದು, 5 ಸುಳ್ಳೆಂದು ಸಾಬೀತಾಗಿವೆ. 2019ರಲ್ಲಿ 19 ಪ್ರಕರಣ ದಾಖಲಾಗಿದ್ದು, 1 ಪ್ರಕರಣ ಸುಳ್ಳೆಂದು ಸಾಬೀತಾಗಿದೆ’ ಎಂದು ಕೋಲಾರ ಉಪ ವಿಭಾಗದ ಡಿವೈಎಸ್ಪಿ ಚೌಡಪ್ಪ ಮಾಹಿತಿ ನೀಡಿದರು.

‘ದಲಿತರ ವಿರುದ್ಧದ ದೌರ್ಜನ್ಯ ಸಂಬಂಧ 2017ರಲ್ಲಿ 23 ಪ್ರಕರಣ ದಾಖಲಾಗಿದ್ದು, ಇದರಲ್ಲಿ 2 ಪ್ರಕರಣ ಸುಳ್ಳೆಂದು ಸಾಬೀತಾಗಿವೆ. 2018ರಲ್ಲಿ ದಾಖಲಾದ 19 ಪ್ರಕರಣಗಳಲ್ಲಿ 2 ಸುಳ್ಳು ಪ್ರಕರಣಗಳಾಗಿವೆ. 2019ರಲ್ಲಿ 12 ಪ್ರಕರಣ ದಾಖಲಾಗಿದ್ದು, 1 ಪ್ರಕರಣ ಸುಳ್ಳೆಂದು ಸಾಬೀತಾಗಿದೆ’ ಎಂದು ಮುಳಬಾಗಿಲು ಉಪ ವಿಭಾಗದ ಡಿವೈಎಸ್ಪಿ ಬಿ.ಕೆ.ಉಮೇಶ್ ವಿವರಿಸಿದರು.

ಜಿ.ಪಂ ಸದಸ್ಯೆ ರೂಪಶ್ರೀ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ ಹಾಜರಿದ್ದರು.

Post Comments (+)