ಬಿಲ್‌ ಪಾವತಿಗೆ ಒತ್ತಾಯ: ಮನವಿ ಸಲ್ಲಿಕೆ

7

ಬಿಲ್‌ ಪಾವತಿಗೆ ಒತ್ತಾಯ: ಮನವಿ ಸಲ್ಲಿಕೆ

Published:
Updated:
Deccan Herald

ಕೋಲಾರ: ನಗರಕ್ಕೆ ನೀರು ಸರಬರಾಜು ಮಾಡಿದ ಖಾಸಗಿ ಟ್ಯಾಂಕರ್‌ ಮಾಲೀಕರ ಬಾಕಿ ಬಿಲ್‌ ಪಾವತಿಸುವಂತೆ ಒತ್ತಾಯಿಸಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಹಾಗೂ ಟ್ಯಾಂಕರ್‌ ಮಾಲೀಕರು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಇಲ್ಲಿ ಬುಧವಾರ ಮನವಿ ಸಲ್ಲಿಸಿದರು.

‘ಬರ ಪರಿಸ್ಥಿತಿ ಸಂದರ್ಭದಲ್ಲಿ ನಗರಸಭೆಯಿಂದ ಟೆಂಡರ್‌ ಪಡೆದು ನಗರಕ್ಕೆ ನೀರು ಪೂರೈಸಿದ್ದೆವು. ಆದರೆ, ಜಿಲ್ಲಾಡಳಿತವು 2016ರ ಜೂನ್‌ನಿಂದ 2017ರ ಜುಲೈವರೆಗಿನ 13 ತಿಂಗಳ ಸುಮಾರು ₹ 6.30 ಕೋಟಿ ಬಿಲ್‌ ಪಾವತಿಸಿಲ್ಲ. ಈ ಸಂಬಂಧ ಹಲವು ಬಾರಿ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಟ್ಯಾಂಕರ್‌ ಮಾಲೀಕರು ಅಳಲು ತೋಡಿಕೊಂಡರು.

‘ಟ್ಯಾಂಕರ್‌ ಮಾಲೀಕರು ಬ್ಯಾಂಕ್‌ಗಳು ಹಾಗೂ ಲೇವಾದೇವಿದಾರರಿಂದ ಬಡ್ಡಿ ಸಾಲ ಮಾಡಿ ಟ್ಯಾಂಕರ್‌ ಖರೀದಿಸಿದ್ದಾರೆ. ಜಿಲ್ಲಾಡಳಿತವು ನೀರಿನ ಬಿಲ್‌ ಪಾವತಿಸದಿರುವುದರಿಂದ ಟ್ಯಾಂಕರ್‌ ಮಾಲೀಕರಿಗೆ ಸಾಲದ ಕಂತು ಹಾಗೂ ಬಡ್ಡಿ ಕಟ್ಟಲು ಸಾಧ್ಯವಾಗಿದೆ. ಜೀವನ ನಿರ್ವಹಣೆಗೂ ಹಣವಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ನಾರಾಯಣಸ್ವಾಮಿ ಹೇಳಿದರು.

‘ಬಿಲ್‌ ಪಾವತಿಸದಿರುವುದರಿಂದ ಮಾಲೀಕರು ಟ್ಯಾಂಕರ್‌ ಚಾಲಕರು ಮತ್ತು ನೌಕರರಿಗೆ ಸಂಬಳ ಕೊಟ್ಟಿಲ್ಲ. ನೀರು ಪೂರೈಸಿರುವ ಖಾಸಗಿ ಕೊಳವೆ ಬಾವಿಗಳ ಮಾಲೀಕರಿಗೂ ಹಣ ಕೊಟ್ಟಿಲ್ಲ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಟ್ಯಾಂಕರ್‌ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿರ್ದೇಶನ ನೀಡಬೇಕು: ‘ನೀರು ಸರಬರಾಜು ಮಾಡಿದ ಸಂದರ್ಭದಲ್ಲಿದ್ದ ನಗರಸಭೆ ತಾಂತ್ರಿಕ ವಿಭಾಗದ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆಯಾಗಿದ್ದು, ಹಾಲಿ ಸೇವೆಯಲ್ಲಿರುವ ಅಧಿಕಾರಿಗಳಿಗೆ ಬಿಲ್‌ನ ದಾಖಲೆಪತ್ರ ಸಿದ್ಧಪಡಿಸುವಂತೆ ಸೂಚನೆ ನೀಡಬೇಕು. ಶೀಘ್ರವೇ ಬಿಲ್‌ ಪಾವತಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು’ ಎಂದು ಟ್ಯಾಂಕರ್‌ ಮಾಲೀಕರು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಸಚಿವರು, ‘ಟ್ಯಾಂಕರ್‌ ಬಿಲ್‌ ಬಾಕಿ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ. ಶೀಘ್ರವೇ ಲೆಕ್ಕ ಪರಿಶೋಧನೆ ಮಾಡಿಸಿ ಬಿಲ್‌ ಪಾವತಿಸಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !