ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ನೀರಿನ ಸಮಸ್ಯೆ: ವಸ್ತುಸ್ಥಿತಿ ಪರಿಶೀಲಿಸಲು ಜಿಲ್ಲಾಧಿಕಾರಿ ಸೂಚನೆ

ನೋಡಲ್‌ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ
Last Updated 4 ಜೂನ್ 2020, 3:33 IST
ಅಕ್ಷರ ಗಾತ್ರ

ಕೋಲಾರ: ‘ಕುಡಿಯುವ ನೀರಿನ ಸಮಸ್ಯೆಯ ಮೇಲ್ವಿಚಾರಣೆಗೆ ಹೋಬಳಿವಾರು ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ಕೊಟ್ಟು ಸಮಸ್ಯೆ ಸಂಬಂಧ ವಸ್ತುಸ್ಥಿತಿ ಪರಿಶೀಲಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.

ಇಲ್ಲಿ ಬುಧವಾರ ನಡೆದ ಬರ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಸರ್ಕಾರವು ಈಗಾಗಲೇ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸಿದೆ. ನೋಡಲ್‌ ಅಧಿಕಾರಿಗಳು ಸಮಸ್ಯೆ ಎದುರಾಗದಂತೆ ಕಾರ್ಯ ನಿರ್ವಹಿಸಬೇಕು’ ಎಂದರು.

‘ಕುಡಿಯುವ ನೀರು ಅವಶ್ಯಕತೆ ಇರುವ ಕಡೆಗೆ ಟ್ಯಾಂಕರ್‌ ನೀರು ಕೊಡಲು ಅಭ್ಯಂತರವಿಲ್ಲ. ಆದರೆ, ಇದು ದುರ್ಬಳಕೆ ಆಗಬಾರದು. ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಟ್ಯಾಂಕರ್ ಮತ್ತು ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸುತ್ತಿರುವ ಸ್ಥಳಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಬೇಕು. ಇದರಿಂದ ಅವಶ್ಯಕತೆ ಇರುವವರಿಗೆ ನೀರು ಕೊಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಖಾಸಗಿ ಕೊಳವೆ ಬಾವಿಗಳು ಮತ್ತು ಟ್ಯಾಂಕರ ಮೂಲಕ ನೀರು ಸರಬರಾಜು ಮಾಡುವ ಪ್ರಮಾಣ ಕಡಿಮೆ ಆಗಬೇಕಿತ್ತು. ಆದರೆ, ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರ ನೀರು ಪೂರೈಕೆ ಪ್ರಮಾಣ ಹೆಚ್ಚಿದೆ. ಟ್ಯಾಂಕರ್‌ ನೀರು ಪೂರೈಕೆ ಪ್ರಕ್ರಿಯೆಯಲ್ಲಿ ಸೋರಿಕೆಯಾಗುತ್ತಿದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡುವ ಮೂಲಕ ಟ್ಯಾಂಕರ್‌ಗಳ ಸಂಖ್ಯೆ ತಗ್ಗಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರಿನ ಸಮಸ್ಯೆ ಎದುರಾದರೆ ತಾತ್ಕಾಲಿಕವಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿ’ ಎಂದು ಸೂಚನೆ ನೀಡಿದರು.

ಅಂತರ್ಜಲ ವೃದ್ಧಿ: ‘ಕೊಳವೆ ಬಾವಿಗಳ ಬಳಿ ನರೇಗಾ ಯೋಜನೆಯಡಿ ಜಲ ಮರುಪೂರಣ ಘಟಕಗಳನ್ನು ನಿರ್ಮಿಸಬೇಕು. ಆ ಮೂಲಕ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುವಂತೆ ಮಾಡಬೇಕು. ಅಂತರ್ಜಲ ಮಟ್ಟ ಸುಧಾರಿಸಿದರೆ ನೀರಿನ ಸಮಸ್ಯೆ ಬಗೆಹರಿಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಗರ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಗಳ ಮನೆಗೆ ಹೆಚ್ಚು ಮತ್ತು ಜನಸಾಮಾನ್ಯರ ಮನೆಗೆ ಕಡಿಮೆ ಪ್ರಮಾಣದಲ್ಲಿ ನೀರು ಕೊಡುತ್ತಿರುವ ಬಗ್ಗೆ ದೂರು ಬಂದಿವೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಕ್ರಮ ತಡೆಯಬೇಕು. ಎಲ್ಲರಿಗೂ ಸಮನಾಗಿ ನೀರು ಒದಗಿಸಬೇಕು. ₹ 1.50 ಕೋಟಿ ವೆಚ್ಚದಲ್ಲಿ ಕೊಳವೆ ಬಾವಿಗಳ ಆಳ ಹೆಚ್ಚಿಸಲು (ರೀ ಡ್ರಿಲ್‌) ಅನುಮೋದನೆ ನೀಡುತ್ತೇವೆ. ಉಳಿದ ಕೊಳವೆ ಬಾವಿಗಳ ರೀ ಡ್ರಿಲ್‌ಗೆ ಇತರೆ ಇಲಾಖೆಗಳ ಅನುದಾನ ಬಳಸಿ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ನೋಡಲ್ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT