ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಜೀವಸೆಲೆ: ಪ್ರಾಣಿ–ಪಕ್ಷಿಗಳ ಮೂಕವೇದನೆ

ಅಡವಿಯಲ್ಲಿ ಜೀವ ಸಂಕುಲಕ್ಕೆ ತಟ್ಟಿದ ಬೇಸಿಗೆ ಬಿಸಿ
Last Updated 20 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಅಂಕಿ ಅಂಶ
* 50,831 ಹೆಕ್ಟೇರ್‌ ಅರಣ್ಯ

* 2,000 ಕೃಷ್ಣಮೃಗಗಳು

* 5,000 ಜಿಂಕೆಗಳು

* 5 ಅರಣ್ಯ ವಲಯ

ಕೋಲಾರ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿನ ಜೀವ ಸಂಕುಲಕ್ಕೂ ಬೇಸಿಗೆ ಬಿಸಿ ತಟ್ಟಿದ್ದು, ಪ್ರಾಣಿ ಪಕ್ಷಿಗಳು ಆಹಾರ ಮತ್ತು ಕುಡಿಯುವ ನೀರಿಗಾಗಿ ಮೂಕವೇದನೆ ಪಡುತ್ತಿವೆ. ಅಡವಿಯ ಹಳ್ಳ ಕೊಳ್ಳಗಳಲ್ಲಿ ಜೀವಸೆಲೆ ಬತ್ತಿದ್ದು, ಪ್ರಾಣಿ ಪಕ್ಷಿ ಸಂಕುಲದ ಗೋಳು ಹೇಳತೀರದು.

ನೀರು, ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳು ಆಕಸ್ಮಿಕವಾಗಿ ವಾಹನಗಳಿಗೆ ಸಿಲುಕಿ ಮೃತಪಡುತ್ತಿವೆ. ಮತ್ತೊಂದೆಡೆ ನಾಯಿಗಳು ನಾಡಿಗೆ ಬರುವ ಜಿಂಕೆ, ಕೃಷ್ಣಮೃಗದಂತಹ ಪ್ರಾಣಿಗಳನ್ನು ಹಿಡಿದು ತಿನ್ನುತ್ತಿವೆ. ಇನ್ನೊಂದೆಡೆ ಅರಣ್ಯ ಪ್ರದೇಶದ ಸುತ್ತಮುತ್ತ ಬೇಟೆಗಾರರ ಹಾವಳಿ ಶುರುವಾಗಿದೆ.

ಜಿಲ್ಲೆಯಲ್ಲಿ ಸುಮಾರು 50,831 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ, ಮುತ್ತುನೂರು, ತಮಟ ಮಾಕನಹಳ್ಳಿ, ಯರಗೋಳ್‌, ತೊಪ್ಪನಹಳ್ಳಿ, ಕಾಳಮ್ಮಗುಡಿ, ಕದರಿನತ್ತ, ಬತ್ತಲಹಳ್ಳಿ, ಮುಷ್ಟರಹಳ್ಳಿ, ಗುಡಿವಂಕ, ಕೋಲಾರ ತಾಲ್ಲೂಕಿನ ಅಂತರಗಂಗೆ ಬೆಟ್ಟ, ವಕ್ಕಲೇರಿ, ಮಡೇರಹಳ್ಳಿ, ಹರಟಿ, ಹೊತ್ತೂರು ಮತ್ತು ಹೊಳಲಿ ಹೊಸೂರು ಅಕ್ಕಪಕ್ಕದ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಹಾಗೂ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಮಾಲೂರು ತಾಲ್ಲೂಕಿನ ಎಸ್‌.ಕೆ.ಹೊಸಳ್ಳಿ, ಕೂರಂಡಹಳ್ಳಿ, ದಿನ್ನಹಳ್ಳಿ, ಗುಂಡ್ಲುಪೇಟೆ, ಯಶವಂತಪುರ, ಆನೇಪುರ, ಕೆಜಿಎಫ್ ತಾಲ್ಲೂಕಿನ ಕೋರಮಂಡಲ್‌, ಡಿ.ಕೆ.ಹಳ್ಳಿ, ರಾಜಪೇಟೆ ರೋಡ್‌, ಬಡಮಾಕನಹಳ್ಳಿ, ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು, ದಳಸನೂರು, ಶೆಟ್ಟಹಳ್ಳಿ. ಸುಣ್ಣಕಲ್‌, ಹೊಗಳಗೆರೆ, ಕಲ್ಲೂರು, ಸೋಮಯಾಜಲಹಳ್ಳಿ, ಆವಲುಗುಪ್ಪ, ಹಕ್ಕಿಪಿಕ್ಕಿ ಕಾಲೊನಿ, ಹೊದಲಿ, ಕಲ್ಲೂರು ಮತ್ತು ಅಡ್ಡಗಲ್‌, ಮುಳಬಾಗಿಲು ತಾಲ್ಲೂಕಿನ ಗೋಕುಂಟೆ ಹಾಗೂ ಕಾಶಿಪುರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲೂ ವನ್ಯಜೀವಿಗಳಿವೆ.

ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸುಮಾರು 2 ಸಾವಿರ ಕೃಷ್ಣಮೃಗ, 5 ಸಾವಿರ ಜಿಂಕೆಗಳಿವೆ. ಜತೆಗೆ ಚಿರತೆ, ಕರಡಿ, ಕೋತಿ, ಮೊಲ, ನರಿ, ಕಾಡುಹಂದಿ, ನವಿಲುಗಳಿವೆ.

ತೊಟ್ಟಿ ನಿರ್ಮಾಣ: ಬೇಸಿಗೆ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿನ ಹಳ್ಳ, ಹೊಂಡಗಳಲ್ಲಿ ನೀರು ಬತ್ತಿದೆ. ಹೀಗಾಗಿ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಸಿಮೆಂಟ್‌ ತೊಟ್ಟಿ ನಿರ್ಮಿಸಿ ಅವುಗಳಿಗೆ ಟ್ಯಾಂಕರ್‌ ನೀರು ತುಂಬಿಸುತ್ತಿದ್ದಾರೆ. ಅಲ್ಲದೇ, ದೊಡ್ಡ ಗುಂಡಿ ಮಾಡಿ ಸುತ್ತಲೂ ಪ್ಲಾಸ್ಟಿಕ್‌ ಹೂದಿಸಿ ಟ್ಯಾಂಕರ್‌ ನೀರು ತುಂಬಿಸಲಾಗುತ್ತಿದೆ. ಆದರೂ ಕಾಡು ಪ್ರಾಣಿಗಳು ನೀರು ಅರಸಿ ಅರಣ್ಯದಂಚಿನ ಕೃಷಿ ಜಮೀನು, ಗ್ರಾಮಗಳಿಗೆ ಬರುತ್ತಿವೆ.

ಕೆಜಿಎಫ್‌ ಬಳಿಯ ಕೊಡಿಗೇನಹಳ್ಳಿ ಸಮೀಪ ಏ.16ರಂದು ಆಹಾರ, ನೀರು ಅರಸಿ ಅರಣ್ಯದಿಂದ ಹೊರಬಂದಿದ್ದ ಜಿಂಕೆಯೊಂದು ಬೈಕ್‌ಗೆ ಸಿಲುಕಿ ಮೃತಪಟ್ಟಿತ್ತು. ಅದೇ ದಿನ ಕೆಜಿಎಫ್‌ ಹೊರವಲಯದ ಕೋರಮಂಡಲ್‌ ಬಳಿ ಜಿಂಕೆಯೊಂದು ಬೈಕ್‌ಗೆ ಸಿಲುಕಿ ಗಾಯಗೊಂಡಿತ್ತು. ಏ.1ರಂದು ಮಾಲೂರು ತಾಲ್ಲೂಕಿನ ಆನೇಪುರ ಅರಣ್ಯದಿಂದ ಮೇವು ಹುಡುಕಿಕೊಂಡು ಬಂದ 6 ಜಿಂಕೆಗಳು ಕೀಟನಾಶಕ ಸಿಂಪಡಿಸಿದ ಬೆಳೆ ತಿಂದು ಮೃತಪಟ್ಟಿದ್ದವು. ಕೋಲಾರ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿ ಈ ತಿಂಗಳ ಆರಂಭದಲ್ಲಿ ನೀರಿನ ಸಮಸ್ಯೆಯಿಂದ 10ಕ್ಕೂ ಹೆಚ್ಚು ಕೋತಿಗಳು ಮೃತಪಟ್ಟಿದ್ದವು.

ಕಾಡಿನ ಭಯ: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೌದೆಗಾಗಿ ಮರ ಕಡಿಯುವವರ ಸಂಖ್ಯೆ ಕಡಿಮೆಯಾಗಿದ್ದು, ಕಾಡುಗಳಲ್ಲಿ ಮರ ಗಿಡಗಳು ದಟ್ಟವಾಗಿ ಬೆಳೆದಿವೆ. ಸಾಮಾನ್ಯವಾಗಿ ಬಯಲು ಪ್ರದೇಶದಲ್ಲಿ ವಾಸ ಮಾಡ ಬಯಸುವ ಜಿಂಕೆ, ಕೃಷ್ಣಮೃಗಗಳು ದಟ್ಟ ಕಾಡು ಬಿಟ್ಟು ನಾಡಿಗೆ ಬರುತ್ತಿವೆ. ಅವು ಕಾಡು ದಟ್ಟವಾಗಿರುವ ಕಡೆ ವಾಸ ಮಾಡಲು ಭಯಪಡುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಗ್ರಾಮದ ಸುತ್ತಮುತ್ತ ಹೆಚ್ಚಾಗಿ ಬೆಳೆದಿರುವ ಅಕೇಶಿಯಾ ಗಿಡ, ರೈತರ ಜಮೀನುಗಳಲ್ಲಿನ ಬೆಳೆಗಳನ್ನು ತಿನ್ನಲು ಕೃಷ್ಣಮೃಗ ಮತ್ತು ಜಿಂಕೆಗಳು ಕಾಡು ಬಿಟ್ಟು ಬರುತ್ತಿವೆ. ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ನೀರಿನ ಮೂಲವೇ ಇಲ್ಲದಂತಾಗಿದೆ. ಹೀಗಾಗಿ ವನ್ಯಜೀವಿಗಳು ನೀರು ಕುಡಿಯಲು ಕಾಡಿನಂಚಿನ ಕೆರೆ, ಕುಂಟೆಗಳಿಗೆ ಬರುತ್ತಿವೆ. ಇದೇ ರೀತಿ ನವಿಲುಗಳೂ ಬರುತ್ತಿವೆ. ಒಟ್ಟಾರೆ ಜಲಕ್ಷಾಮದಿಂದ ನಲುಗಿರುವ ಕಾಡು ಪ್ರಾಣಿಗಳಿಗೆ ಅಡವಿ ಮತ್ತು ನಾಡು ಎರಡೂ ಸುರಕ್ಷಿತವಲ್ಲ ಎಂಬಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT