ಮಂಗಳವಾರ, ಜನವರಿ 28, 2020
23 °C
ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ಸೂಚನೆ

ನೀರಿನ ಸಮಸ್ಯೆ: ನಿರ್ಲಕ್ಷ್ಯ ಬೇಡ: ಸಚಿವ ನಾಗೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ಕೊಡಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ ತೋರಬಾರದು’ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿದೆ. ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ನೀರಿನ ಸಮಸ್ಯೆ ಸಂಬಂಧ ದೂರು ಬಂದ ಕೂಡಲೇ ಬಗೆಹರಿಸಬೇಕು’ ಎಂದು ತಿಳಿಸಿದರು.

‘ಹೊಸದಾಗಿ ಕೊಳವೆ ಬಾವಿ ಕೊರೆಸಿ ಶೀಘ್ರವೇ ಪಂಪ್ ಮೋಟರ್ ಅಳವಡಿಸಿ ನೀರು ಕೊಡುವುದು ಅಧಿಕಾರಿಗಳ ಜವಾಬ್ದಾರಿ. ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಬೇಕು. ಹೊಸ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಬೆಸ್ಕಾಂ ಅಧಿಕಾರಿಗಳು ತಡ ಮಾಡಬಾರದು’ ಎಂದು ಹೇಳಿದರು.

ಸಭೆಯಲ್ಲಿ ಕುಡಿಯುವ ನೀರಿನ ವಿಚಾರವಾಗಿ ಗಂಭೀರ ಚರ್ಚೆ ನಡೆಯಿತು. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ‘ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವೆಡೆ ಕೊಳವೆ ಬಾವಿ ಕೊರೆದು 6 ತಿಂಗಳಾದರೂ ಪಂಪ್ ಮೋಟರ್ ಅಳವಡಿಸಿಲ್ಲ. ಅಧಿಕಾರಿಗಳನ್ನು ಕೇಳಿದರೆ ಪಂಪ್ ಮೋಟರ್‌ಗೆ ಅನುದಾನವಿಲ್ಲ ಎನ್ನುತ್ತಾರೆ. ನೀವು ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಸಮಸ್ಯೆಯಿಲ್ಲ ಎನ್ನುತ್ತೀರಿ. ಆದರೆ, ಅಧಿಕಾರಿಗಳು ಮತ್ತೊಂದು ರೀತಿ ಹೇಳುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಳೆಯ ಪಂಪ್ ಮೋಟರ್‌ ಸಂಗ್ರಹ ಆಗುತ್ತಿಲ್ಲ. ಜಿಲ್ಲೆಯಲ್ಲಿ 1,500 ಅಡಿಗೂ ಹೆಚ್ಚು ಆಳ ಕೊಳವೆ ಬಾವಿ ಕೊರೆದರೆ ಮಾತ್ರ ನೀರು ಸಿಗುತ್ತದೆ. ಅಷ್ಟು ಆಳದಿಂದ ನೀರು ತೆಗೆಯಲು ಕನಿಷ್ಠ 20 ಎಚ್.ಪಿ ಮೋಟರ್ ಬೇಕು. ೩ ವರ್ಷಗಳಿಂದ ಪಂಪ್‌ ಮೋಟರ್‌ನ ಸಮಸ್ಯೆಯಿದೆ. ಈ ಹಿಂದೆ ಅಳವಡಿಸಿದ್ದ 10 ಎಚ್.ಪಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ಮೋಟರ್‌ಗಳು ಏನಾದವು?’ ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ‘ಗ್ರಾಮ ಪಂಚಾಯಿತಿಗಳಲ್ಲಿ ಹಳೆಯ ಮೋಟರ್‌ ಸಂಗ್ರಹಣೆ ಆಗಬೇಕು. ಎಲ್ಲೆಲ್ಲಿ ಎಷ್ಟು ಮೋಟರ್‌ಗಳಿವೆ ಮತ್ತು ಎಷ್ಟು ಕಾರ್ಯ ನಿರ್ವಹಿಸುತ್ತಿವೆ. ಎಷ್ಟು ಮೋಟರ್‌ ಕೆಟ್ಟಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಸೂಚಿಸಿದರು.

ಪಿ–ನಂಬರ್‌ ಸಮಸ್ಯೆ: ‘ಜಿಲ್ಲೆಯಲ್ಲಿ ಪಿ–ನಂಬರ್‌ ಸಮಸ್ಯೆಯಿದ್ದು, ರೈತರಿಗೆ ತೀವ್ರ ತೊಂದರೆಯಾಗಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪಿ–ನಂಬರ್‌ ಸಮಸ್ಯೆಗೆ ಸಂಬಂಧಿಸಿದ ಕಡತಗಳನ್ನು ಇತ್ಯರ್ಥಪಡಿಸಿ. ರೈತರಿಗೆ ಯಾವುದೇ ತೊಂದರೆ ಆಗಬಾರದು’ ಎಂದು ಸಚಿವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಚುನಾವಣೆ ಹಾಗೂ ಬೆಳೆ ಪರಿಹಾರ ಸಮಸ್ಯೆಯಿಂದಾಗಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕೆಲ ತಿಂಗಳುಗಳಿಂದ ಪಿ ನಂಬರ್ ಸಮಸ್ಯೆ ಕಡೆಗೆ ಗಮನ ಹರಿಸಲು ಸಾಧ್ಯವಾಗಿಲ್ಲ. ಇದೀಗ ಇಲಾಖೆ ಕೆಲಸ ಮುಗಿದಿದ್ದು, ಪಿ ನಂಬರ್ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಒತ್ತು ಕೊಡುತ್ತೇವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಭರವಸೆ ನೀಡಿದರು.

‘ಈಗಾಗಲೇ ಒಂದು ತಿಂಗಳಿಂದ ಪಿ ನಂಬರ್‌ ಸಮಸ್ಯೆ ಬಗೆಹರಿಸುವ ಕೆಲಸ ನಡೆಯುತ್ತಿದೆ. ಜಿಲ್ಲೆಯಲ್ಲಿ 48,582 ಪಿ ನಂಬರ್ ಸಮಸ್ಯೆಗಳಿವೆ. ಇದರಲ್ಲಿ 34,613ನ್ನು ಒಟ್ಟುಗೂಡಿಸಲಾಗಿದೆ. ವಾರಕ್ಕೆ ಒಂದು ಹೋಬಳಿಯಂತೆ ಸಮಸ್ಯೆ ಬಗೆಹರಿಸಲಾಗುವುದು’ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು