ಅಗ್ನಿಶಾಮಕ ವಾಹನಗಳಿಗೆ ಜಲಕ್ಷಾಮದ ಬಿಸಿ; ನೀರಿಗಾಗಿ ಕೆರೆ ಕುಂಟೆ ಅಲೆಯುವ ಸಿಬ್ಬಂದಿ

ಶನಿವಾರ, ಏಪ್ರಿಲ್ 20, 2019
30 °C
ಬಿರು ಬೇಸಿಗೆ

ಅಗ್ನಿಶಾಮಕ ವಾಹನಗಳಿಗೆ ಜಲಕ್ಷಾಮದ ಬಿಸಿ; ನೀರಿಗಾಗಿ ಕೆರೆ ಕುಂಟೆ ಅಲೆಯುವ ಸಿಬ್ಬಂದಿ

Published:
Updated:
Prajavani

ಕೋಲಾರ: ಬೇಸಿಗೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ನೀರಿಗೆ ಹಾಹಾಕಾರವಿದ್ದು, ಅಗ್ನಿಶಾಮಕ ಠಾಣೆಗೂ ಜಲಕ್ಷಾಮದ ಬಿಸಿ ತಟ್ಟಿದೆ. ನಗರದ ಬಹುಪಾಲು ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದರಿಂದ ಸಿಬ್ಬಂದಿ ಅಗ್ನಿನಂದಕ ವಾಹನಗಳಿಗೆ ನೀರು ತುಂಬಿಸಿಕೊಳ್ಳಲು ಕೆರೆ ಕುಂಟೆಗಳಿಗೆ ಅಲೆಯುವಂತಾಗಿದೆ.

1984ರಲ್ಲಿ ಕಾರ್ಯಾರಂಭ ಮಾಡಿದ ಅಗ್ನಿಶಾಮಕ ಠಾಣೆಯು ಈ ಹಿಂದೆ ನಗರದೊಳಗೆ ಪುರಸಭೆ (ಈಗಿನ ನಗರಸಭೆ) ಆವರಣದಲ್ಲಿತ್ತು. ಬಳಿಕ 2005ರಲ್ಲಿ ಟಮಕ ಬಳಿ ಹೊಸ ಕಟ್ಟಡ ನಿರ್ಮಿಸಿ ಠಾಣೆಯನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು.

ಅಗ್ನಿಶಾಮಕ ಠಾಣೆ ಹಿಂಭಾಗದಲ್ಲೇ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಸಿಬ್ಬಂದಿಗೆ ವಸತಿ ಸಮುಚ್ಚಯ ನಿರ್ಮಿಸಲಾಗಿದೆ. ಸಮುಚ್ಚಯದಲ್ಲಿ 12 ಮನೆಗಳಿವೆ. ಅಗ್ನಿನಂದಕ ವಾಹನಗಳಿಗೆ ಹಾಗೂ ಇಲಾಖೆ ಸಿಬ್ಬಂದಿಗೆ ಅಗತ್ಯವಿರುವ ನೀರಿನ ಸೌಕರ್ಯಕ್ಕಾಗಿ ಠಾಣೆ ಹಿಂಭಾಗದಲ್ಲಿ 3 ಕೊಳವೆ ಬಾವಿ ಕೊರೆಸಲಾಗಿದೆ. ಈ ಪೈಕಿ 2 ಕೊಳವೆ ಬಾವಿಗಳಲ್ಲಿ ಜೀವಸೆಲೆ ಬತ್ತಿದ್ದು, ನೀರಿನ ಸಮಸ್ಯೆ ಸೃಷ್ಟಿಯಾಗಿದೆ.

ಮತ್ತೊಂದೆಡೆ ಸಿಬ್ಬಂದಿಯ ವಸತಿ ಸಮುಚ್ಚಯ ಹಾಗೂ ಠಾಣೆಗೆ ನೀರಿನ ಸೌಕರ್ಯ ಕಲ್ಪಿಸುವ ಉದ್ದೇಶಕ್ಕಾಗಿ ನಗರಸಭೆ ವತಿಯಿಂದ ಪೈಪ್‌ಲೈನ್‌ ಅಳವಡಿಸಿ ಕೊಳಾಯಿಗಳನ್ನು ಹಾಕಲಾಗಿದೆ. ಆದರೆ, ಕೊಳಾಯಿಗಳಲ್ಲಿ ನೀರು ಬಂದು ವರ್ಷಗಳೇ ಕಳೆದಿವೆ. ಹೀಗಾಗಿ ನಗರಸಭೆಯು ಟ್ಯಾಂಕರ್‌ ಮೂಲಕ ಸಿಬ್ಬಂದಿ ವಸತಿ ಸಮುಚ್ಚಯಕ್ಕೆ ಆಗೊಮ್ಮೆ ಈಗೊಮ್ಮೆ ನೀರು ಪೂರೈಸುತ್ತಿದೆ.

ಆದರೆ, ಸಮುಚ್ಚಯದಲ್ಲಿ ವಾಸವಿರುವ ಕುಟುಂಬಗಳಿಗೆ ನಗರಸಭೆಯ ಟ್ಯಾಂಕರ್‌ ನೀರು ಸಾಕಾಗುತ್ತಿಲ್ಲ. ಆದರೂ ಬೇರೆ ದಾರಿ ಇಲ್ಲದೆ ಸಿಬ್ಬಂದಿ ಕಡಿಮೆ ನೀರಿನಲ್ಲೇ ದಿನ ದೂಡುತ್ತಿದ್ದಾರೆ.

ಕರೆ ಹೆಚ್ಚಳ: ಅಗ್ನಿ ಅವಘಡ ಸಂಬಂಧ ಅಗ್ನಿಶಾಮಕ ಠಾಣೆಗೆ ತಿಂಗಳಲ್ಲಿ ಸರಾಸರಿ 30 ಕರೆಗಳು ಬರುತ್ತವೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಬೇಸಿಗೆ ಅವಧಿಯಲ್ಲಿ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚು. ಬೇಸಿಗೆ ಆರಂಭವಾದ ನಂತರ ಅಗ್ನಿ ಅವಘಡಗಳ ಸಂಖ್ಯೆ ಹೆಚ್ಚಿದ್ದು, ಇದಕ್ಕೆ ಅನುಗುಣವಾಗಿ ಠಾಣೆಗೆ ಬರುವ ಕರೆಗಳ ಸಂಖ್ಯೆ 50ರ ಗಡಿ ದಾಟಿದೆ.

ಅಗ್ನಿ ಅನಾಹುತ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ನೀರು ಅತ್ಯಗತ್ಯ. ಆದರೆ, ಠಾಣೆಯ ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದರಿಂದ ಅಗ್ನಿನಂದಕ ವಾಹನಗಳಿಗೆ ನೀರು ಸಿಗುತ್ತಿಲ್ಲ. ವಾಹನಗಳಿಗೆ ಖಾಸಗಿ ಕೊಳವೆ ಬಾವಿ ಅಥವಾ ಟ್ಯಾಂಕರ್‌ಗಳಿಂದ ನೀರು ಖರೀದಿಸಲು ಸರ್ಕಾರ ಇಲಾಖೆಗೆ ಅನುದಾನ ಕೊಡುವುದಿಲ್ಲ. ಹೀಗಾಗಿ ಸಿಬ್ಬಂದಿ ಅಗ್ನಿನಂದಕ ವಾಹನಗಳಿಗೆ ನೀರು ತುಂಬಿಸಿಕೊಳ್ಳಲು ಬವಣೆ ಪಡುವಂತಾಗಿದೆ.

ಕೆರೆ– ಕುಂಟೆ ನೀರು: ಠಾಣೆಯ ಹತ್ತಿರದಲ್ಲಿ ಯಾವುದೇ ಕೆರೆ ಕುಂಟೆಗಳಿಲ್ಲ. ಹೀಗಾಗಿ ಸಿಬ್ಬಂದಿಯು ತಾಲ್ಲೂಕಿನ ನೆರ್ನಹಳ್ಳಿ, ತಲಗುಂದ, ಲಕ್ಷ್ಮೀಸಾಗರ, ನರಸಾಪುರ ಬೇತಮಂಗಲ ರಸ್ತೆಯಲ್ಲಿನ ಭಟ್ಟರಹಳ್ಳಿ ಹಾಗೂ ಶ್ರೀನಿವಾಸಪುರ ರಸ್ತೆ ಬಳಿಯ ಕೆರೆ ಕುಂಟೆಗಳಲ್ಲಿ, ಕ್ವಾರಿಗಳಲ್ಲಿ ಸಂಗ್ರಹವಾಗಿರುವ ನೀರನ್ನು ಅಗ್ನಿನಂದಕ ವಾಹನಗಳಿಗೆ ತುಂಬಿಸಿಕೊಂಡು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದ್ದಾರೆ.

ಈ ಕೆರೆ ಕುಂಟೆಗಳು, ಕ್ವಾರಿಗಳು ಠಾಣೆಯಿಂದ ಸುಮಾರು 10 ಕಿ.ಮೀ ದೂರದಲ್ಲಿವೆ. ಸಿಬ್ಬಂದಿ ನೀರು ತುಂಬಿಸಿಕೊಳ್ಳಲು ವಾಹನಗಳೊಂದಿಗೆ ಅಲ್ಲಿಗೆ ಹೋಗಿ ಬರಲು ಸಾಕಷ್ಟು ಇಂಧನ ವ್ಯಯವಾಗುತ್ತಿದೆ. ಇದರಿಂದ ಇಲಾಖೆಗೆ ಇಂಧನ ವೆಚ್ಚದ ಹೊರೆ ಹೆಚ್ಚುತ್ತಿದೆ.

ನೀರು ಖರೀದಿ: ನಗರಸಭೆಯಿಂದ ಸಿಬ್ಬಂದಿ ವಸತಿ ಸಮುಚ್ಚಯಕ್ಕೆ ಪೂರೈಸುತ್ತಿರುವ ಟ್ಯಾಂಕರ್‌ ನೀರಿನಲ್ಲಿ ವಿಷಕಾರಿ ಫ್ಲೋರೈಡ್‌ ಅಂಶ ಹೆಚ್ಚಿರುವುದರಿಂದ ಈ ನೀರು ಕುಡಿಯಲು ಮತ್ತು ಅಡುಗೆಗೆ ಬಳಸಲು ಯೋಗ್ಯವಾಗಿಲ್ಲ. ಹೀಗಾಗಿ ಸಿಬ್ಬಂದಿ ಒಂದೂವರೆ ಕಿ.ಮೀ ದೂರದಲ್ಲಿರುವ ಟಮಕ ಬಡಾವಣೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ₹ 5ಕ್ಕೆ 20 ಲೀಟರ್‌ನಂತೆ ಪ್ರತಿನಿತ್ಯ ನೀರು ಖರೀದಿಸಿಕೊಂಡು ಬಂದು ಕುಡಿಯುವುದಕ್ಕೆ ಮತ್ತು ಅಡುಗೆಗೆ ಬಳಸುತ್ತಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕ ತುಂಬಾ ದೂರ ಇರುವುದರಿಂದ ಕೆಲ ಸಿಬ್ಬಂದಿ ಸಮುಚ್ಚಯದ ಬಳಿಯೇ ಬರುವ ವಾಣಿಜ್ಯ ಉದ್ದೇಶದ ಟ್ಯಾಂಕರ್‌ ಮಾಲೀಕರಿಗೆ ದುಪ್ಪಟ್ಟು ಹಣ ಕೊಟ್ಟು ಶುದ್ಧ ನೀರು ಖರೀದಿಸುತ್ತಿದ್ದಾರೆ. ಸಿಬ್ಬಂದಿಯು ತಮ್ಮ ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !