ಶನಿವಾರ, ಮೇ 21, 2022
23 °C
ಯಲ್ದೂರು ಪಿಡಿಒ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

ನೀರಿನ ಸಮಸ್ಯೆ: ಗ್ರಾ.ಪಂಗೆ ಬೀಗ ಜಡಿದ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಪಿಡಿಒ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮಸ್ಥರು ಪಿಡಿಒರನ್ನು ಹೊರ ಕಳುಹಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಬುಧವಾರ ಬೀಗ ಜಡಿದು ಪ್ರತಿಭಟನೆ ಮಾಡಿದರು.

‘ಯಲ್ದೂರು ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಮೂಲವಾದ ಗ್ರಾಮದ ಸಂತಮ್ಮನ ಕೆರೆಯ ಅಂಗಳದಲ್ಲಿನ ಕೊಳವೆ ಬಾವಿಗೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಹರಿಸಲಾಗುತ್ತಿತ್ತು. ಆದರೆ, ಕೆರೆಯು ಮಳೆಗೆ ಭರ್ತಿಯಾದ ಕಾರಣ ಆಗಾಗ್ಗೆ ವಿದ್ಯುತ್ ತಂತಿಗಳು ತುಂಡಾಗಿ ವಾಟರ್‌ಮನ್‌ಗೆ ವಿದ್ಯುತ್ ಪ್ರವಹಿಸಿ ಸಮಸ್ಯೆಯಾಗಿದ್ದು, ಪಿಡಿಒ ಪರಿಹಾರ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.

‘ವಿದ್ಯುತ್ ಪ್ರವಹಿಸಿದ್ದರಿಂದ ಹೆದರಿರುವ ವಾಟರ್‌ಮನ್ ಜೀವ ಭಯದಿಂದ ವಿದ್ಯುತ್ ಸಂಪರ್ಕ ಸರಿಪಡಿಸುವವರೆಗೂ ಕೊಳವೆ ಬಾವಿಯಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ಪಿಡಿಒ ಲಕ್ಷ್ಮಿಕಾಮತ್ ಅವರಿಗೆ ತಿಳಿಸಿದ್ದಾರೆ. ಆದರೆ, ಪಿಡಿಒ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿರುವುದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದೆ’ ಎಂದು ದೂರಿದರು.

‘ಗ್ರಾ.ಪಂ ಅಧ್ಯಕ್ಷ ಶ್ರೀರಾಮಬಾಬು ಮತ್ತು ಸದಸ್ಯರು ಸಮಸ್ಯೆಯನ್ನು ಪಿಡಿಒ ಗಮನಕ್ಕೆ ತಂದು ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರೂ ಪಿಡಿಒ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಧ್ಯಕ್ಷರು ಸ್ವಂತ ಹಣ ಖರ್ಚು ಮಾಡಿ ವಿದ್ಯುತ್ ಸಂಪರ್ಕ ತಾತ್ಕಾಲಿಕವಾಗಿ ಸರಿಪಡಿಸಿ ಗ್ರಾಮಕ್ಕೆ ನೀರು ಪೂರೈಕೆಯಾಗುವಂತೆ ಮಾಡಿದ್ದರು. ಆದರೆ, ಇದೀಗ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡು ನೀರು ಸರಬರಾಜು ಸ್ಥಗಿತಗೊಂಡಿದೆ’ ಎಂದು ಅಳಲು ತೋಡಿಕೊಂಡರು.

ವರ್ಗಾವಣೆಗೆ ಮನವಿ: ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾ.ಪಂ ಅಧ್ಯಕ್ಷ ಶ್ರೀರಾಮಬಾಬು ಗ್ರಾಮಸ್ಥರನ್ನು ಸಮಾಧಾನಪಡಿಸಿ, ‘ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳದ ಪಿಡಿಒರನ್ನು ವರ್ಗಾವಣೆ ಮಾಡುವಂತೆ ಜಿ.ಪಂ ಸಿಇಒಗೆ ಮನವಿ ಮಾಡುತ್ತೇವೆ. ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಸಲು ವ್ಯವಸ್ಥೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.