ನೀರಿನ ಸಮಸ್ಯೆ: ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ನಗರಸಭೆಗೆ ಮುತ್ತಿಗೆ

ಗುರುವಾರ , ಜೂನ್ 27, 2019
23 °C
ಮಾಜಿ ಸದಸ್ಯರ ಆಕ್ರೋಶ

ನೀರಿನ ಸಮಸ್ಯೆ: ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ನಗರಸಭೆಗೆ ಮುತ್ತಿಗೆ

Published:
Updated:
Prajavani

ಕೋಲಾರ: ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಒತ್ತಾಯಿಸಿ ನಗರಸಭೆ ಮಾಜಿ ಸದಸ್ಯರು ಇಲ್ಲಿ ಸೋಮವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

‘ನಗರದ ಬಹುತೇಕ ಬಡಾವಣೆಗಳಲ್ಲಿ ಬೇಸಿಗೆ ಕಾರಣಕ್ಕೆ ನೀರಿನ ಸಮಸ್ಯೆ ಗಂಭೀರವಾಗಿದೆ. ನಗರಸಭೆಯಿಂದ ಸಮರ್ಪಕವಾಗಿ ಟ್ಯಾಂಕರ್‌ ನೀರು ಪೂರೈಸುತ್ತಿಲ್ಲ. ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದರೂ ಪಂಪ್‌ ಮೋಟರ್‌ ಕೆಟ್ಟಿರುವುದರಿಂದ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನ ಮೂರ್ನಾಲ್ಕು ಕಿಲೋ ಮೀಟರ್‌ ದೂರದಿಂದ ನೀರು ತರುವ ಪರಿಸ್ಥಿತಿ ಇದೆ. ನೀರು ಲಭ್ಯವಿರುವ ಕೊಳವೆ ಬಾವಿಗಳ ಪಂಪ್‌ ಮೋಟರ್‌ ರಿಪೇರಿ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಮಾಜಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ದೂರಿದರು.

‘ನಗರಸಭೆಯಿಂದ ಪಂಪ್ ಮೋಟರ್‌ ನಿರ್ವಹಣೆಗೆ ಟೆಂಡರ್ ಕರೆದಿಲ್ಲ. ಹಳೆ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಿಲ್ಲ. ಹೀಗಾಗಿ ಪಂಪ್ ಮೋಟರ್‌ ನಿರ್ವಹಣೆ ಪ್ರಕ್ರಿಯೆ ಹಳ್ಳ ಹಿಡಿದಿದೆ. ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿದಿದ್ದು, ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಮರೆಮಾಚುತ್ತಿದ್ದಾರೆ: ‘ಸರ್ಕಾರವು ಜಿಲ್ಲಾಧಿಕಾರಿಯನ್ನು ನಗರಸಭೆಗೆ ಆಡಳಿತಾಧಿಕಾರಿಯಾಗಿ ನೇಮಿಸಿದೆ. ಲೋಕಸಭಾ ಚುನಾವಣಾ ಕರ್ತವ್ಯದ ಒತ್ತಡದಲ್ಲಿರುವ ಜಿಲ್ಲಾಧಿಕಾರಿ ಅವರಿಗೆ ನಗರಸಭೆಯ ದೈನಂದಿನ ಕಾರ್ಯ ಚಟುವಟಿಕೆ ಹಾಗೂ ನೀರಿನ ಸಮಸ್ಯೆ ಬಗ್ಗೆ ಗಮನಹರಿಸಲು ಕಾಲಾವಕಾಶ ಇಲ್ಲವಾಗಿದೆ. ನಗರಸಭೆ ಅಧಿಕಾರಿಗಳು ನೀರಿನ ವಿಚಾರವಾಗಿ ಜಿಲ್ಲಾಧಿಕಾರಿಗೆ ಸುಳ್ಳು ಮಾಹಿತಿ ನೀಡಿ ಸಮಸ್ಯೆ ಮರೆಮಾಚುತ್ತಿದ್ದಾರೆ’ ಎಂದು ಮಾಜಿ ಸದಸ್ಯ ಎಸ್‌.ಆರ್‌.ಮುರಳಿಗೌಡ ಆರೋಪಿಸಿದರು.

ಕೃತಕ ಅಭಾವ: ‘ಬಡಾವಣೆಗಳ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಮತ್ತೊಂದೆಡೆ ನಗರಸಭೆಯ ಟ್ಯಾಂಕರ್ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ದೂರು ನೀಡಲು ನಗರಸಭೆ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಅಧಿಕಾರಿಗಳೇ ನೀರಿನ ಕೃತಕ ಅಭಾವ ಸೃಷ್ಟಿಸಿದ್ದಾರೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಹೊಸದಾಗಿ ಪಂಪ್‌, ಮೋಟರ್‌ ಅಳವಡಿಸಬೇಕು. ದುರಸ್ತಿ ಹಂತದಲ್ಲಿರುವ ಕೊಳವೆ ಬಾವಿಗಳನ್ನು ಶೀಘ್ರವೇ ರಿಪೇರಿ ಮಾಡಬೇಕು. ಹಿಂದಿನಂತೆಯೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು. ಇಲ್ಲದಿದ್ದರೆ ನಗರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸದಸ್ಯರಾದ ಸೋಮಶೇಖರ್‌, ಮಂಜುನಾಥ್‌, ಅಫ್ರೋಜ್‌ ಪಾಷಾ, ವೆಂಕಟೇಶ್‌, ಷಂಷೀರ್‌, ಚಾಂದ್‌ ಪಾಷಾ, ಅಸ್ಲಂ ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !