ಬುಧವಾರ, ಏಪ್ರಿಲ್ 1, 2020
19 °C
ಕುಡಿಯುವ ನೀರಿನ ಸಂಬಂಧ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್.ವಿ.ದರ್ಶನ್ ಸೂಚನೆ

ನೀರಿನ ಸಮಸ್ಯೆ: ಮುಂಜಾಗ್ರತ ಕ್ರಮ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಅಧಿಕಾರಿಗಳು ಮುಂಜಾಗ್ರತ ಕ್ರಮಕೈಗೊಳ್ಳಬೇಕು’ ಎಂದು ಪ್ರಭಾರ ಜಿಲ್ಲಾಧಿಕಾರಿ ಎಚ್.ವಿ.ದರ್ಶನ್ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಕುಡಿಯುವ ನೀರಿನ ಸಂಬಂಧ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಬೇಸಿಗೆ ಕಾಲ ಆರಂಭವಾಗಿದ್ದು, ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿರುವ ಬಗ್ಗೆ ದೂರುಗಳು ಬಂದಿವೆ. ಈ ವಿಚಾರದಲ್ಲಿ ನಿರ್ಲಕ್ಷ ತೋರಿದರೆ ಶಿಸ್ತುಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಮಾರ್ಚ್‌ನಿಂದ ಮೇ ತಿಂಗಳವರೆಗೆ ಸಮಸ್ಯೆ ತೀವ್ರಗೊಳ್ಳುತ್ತದೆ. ನೀರಿನ ಸಮಸ್ಯೆ ಕಂಡುಬರಬಹುದಾದ ಗ್ರಾಮಗಳನ್ನು ಈಗಿನಿಂದಲೇ ಗುರುತಿಸುವ ಮೂಲಕ ಮುಂಜಾಗ್ರತಾ ಕ್ರಮಜರುಗಿಸಬೇಕು. ಪ್ರತಿ ವಾರಕ್ಕೊಮ್ಮೆ ಸಮಸ್ಯೆ ನಿವಾರಣೆ ಕುರಿತು ಎಂಜನಿಯರ್‌ಗಳು ವರದಿ ನೀಡಬೇಕು’ ಎಂದು ತಾಕೀತು ಮಾಡಿದರು.

‘ಟಾಸ್ಕ್‌ ಫೋರ್ಸ್‌ ಹಣ ಕುಡಿಯುವ ನೀರಿಗೆ ವೆಚ್ಚ ಮಾಡಲಾಗುವುದು. ಇದಕ್ಕೆ ಅಧಿಕಾರಿಗಳು 15 ದಿನಗಳೊಳಗೆ ಪ್ರಸ್ತಾವ ಸಲ್ಲಿಸಬೇಕು. ಕ್ರಿಯಾ ಯೋಜನೆ ಇಲ್ಲದೆ ಕೊರೆಸಿರುವ ಕೊಳವೆ ಬಾವಿಗಳಿಗೆ ಘಟನೋತ್ತರ ಮಂಜೂರಾತಿ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಇಲ್ಲಿನವರೆಗೂ ಕ್ರಿಯಾಯೋಜನೆ ಇಲ್ಲದೆ 126 ಬೋರ್‌ವೆಲ್ ಕೊರೆಯಿಸಿದ್ದು, ಮುಳಬಾಗಿಲಿನಲ್ಲಿ 52, ಮಾಲೂರಿನಲ್ಲಿ 86, ಕೆಜಿಎಫ್‌ನಲ್ಲಿ 7, ಬಂಗಾರಪೇಟೆಯಲ್ಲಿ 16, ಶ್ರೀನಿವಾಸಪುರದಲ್ಲಿ 133 ಬೊರ್‌ವೆಲ್‌ಗಳನ್ನು ಕೊರೆಯಿಸಲಾಗಿದೆ’ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಪ್ರಭಾರ ಎಇಇ ಶ್ರೀನಿವಾಸ್ ಮಾಹಿತಿ ನೀಡಿದರು.

ತಾಲ್ಲೂಕುವಾರು ಕುರಿತು ಎಂಜಿನಿಯರ್‌ಗಳು ಮಾಹಿತಿ ನೀಡಿದರು. ಇದಕ್ಕೆ ಅಸಮಾಧಾನಗೊಂಡ ಜಿಲ್ಲಾಧಿಕಾರಿ, ‘ಕ್ರಿಯಾಯೋಜನೆ ಇಲ್ಲದೆ ಕೊಳವೆಬಾವಿ ಕೊರೆಯಿಸದಂತೆ ಹಿಂದೆಯೇ ಸೂಚನೆ ನೀಡಿದ್ದರೂ ಇನ್ನೂ ಕೊರೆಯಿಸುತ್ತಲೇ ಇದ್ದೀರಿ, ಹಣ ಪಾವತಿ ಹೇಗೆ ಮಾಡುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು.

‘ಕೊಳವೆಬಾವಿ ಕೊರೆಸಲು ₹ 1.50 ಲಕ್ಷ ನೀಡಲು ಸಾಧ್ಯವಿಲ್ಲ. 700 ಅಡಿಗಿಂತ ಹೆಚ್ಚು ಕೊರೆಸಿರುವ ಕೊಳವೆಬಾವಿಯನ್ನು ಪುನಃ ಕೊರೆಯಿಸಬಾರದು. ಕೊಳವೆಬಾವಿ ಕೊರೆಸಿದರೂ ನೀರು ಲಭ್ಯವಾಗದಿದ್ದರೆ ಕೊರೆಸಬಾರದು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸಂಬಂಧ ವ್ಯಾಟ್ಸಾಪ್ನಲ್ಲಿ ದಾಖಲು ಮಾಡಬೇಕು’ ಎಂದು ಹೇಳಿದರು.

‘ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಅವಶ್ಯಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬಾರದು. ಪ್ರತಿ 15 ದಿನಗಳಿಗೊಮ್ಮೆ ಟ್ಯಾಂಕರ್ ನೀರು ಸರಬರಾಜಿನ ಬಿಲ್ ನೀಡಬೇಕು. ಇದರಲ್ಲಿ ತಪ್ಪು ಬಿಲ್ ನೀಡಿದರೆ ಬಿಲ್ ತಡೆ ಹಿಡಿಯಲಾಗುವುದು’ ಎಂದು ತಿಳಿಸಿದರು.

‘ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಟ್ಯಾಂಕರ್ ಮೂಲಕ ಸರಬರಾಜು ಮಾಡಲು ನೀರು ಲಭ್ಯವಾಗುತ್ತಿಲ್ಲ’ ಎಂದು ಪೌರಾಯುಕ್ತ ಶ್ರೀಕಾಂತ್ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ತೀವ್ರ ಸಮಸ್ಯೆಗಳು ಇರುವ ವಾರ್ಡ್‌ಗಳಿಗೆ ಮಾತ್ರ ಸರಬರಾಜು ಮಾಡಬೇಕು. ಟ್ಯಾಂಕರ್‌ ನೀರನ್ನು ನೇರವಾಗಿ ಸಂಪ್‌ಗಳಿಗೆ ಬಿಡಬಾರದು’ ಎಂದು ಹೇಳಿದರು.

‘ಗ್ರಾಮೀಣ ಭಾಗದಲ್ಲಿ ಟ್ಯಾಂಕರ್‌ಗೆ ನಿಗದಿಪಡಿಸಿರುವ ಶುಲ್ಕಕ್ಕೆ ನೀರು ಸರಬರಾಜು ಮಾಡಲು ಯಾರು ಮುಂದೆ ಬರುತ್ತಿಲ್ಲ, ದರ ಹೆಚ್ಚಿಸಬೇಕು’ ಎಂದು ಶ್ರೀನಿವಾಸಪುರ ಎಇಇ ಅಪ್ಪಿರೆಡ್ಡಿ ಇತರರು ಮನವಿ ಮಾಡಿದಕ್ಕೆ, ನಿರಾಕರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಜಿ.ಪಂ ಉಪ ಕಾರ್ಯಕ್ರದರ್ಶಿ ಸಂಜೀವಪ್ಪ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು