ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಕಲುಷಿತವಾಗಬಾರದು: ಡಿ.ಸಿ ಸೂಚನೆ

Last Updated 22 ಏಪ್ರಿಲ್ 2019, 15:13 IST
ಅಕ್ಷರ ಗಾತ್ರ

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆ ನೀರು ಹರಿಯುವ ಕೆರೆಗಳ ಸಮೀಪದ ಕೊಳವೆ ಬಾವಿಗಳಿಗೆ ಬಂಡು ನಿರ್ಮಿಸುವ ಮೂಲಕ ಕೊಳವೆ ಬಾವಿ ನೀರು ಕಲುಷಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಸೋಮವಾರ ನಡೆದ ಬರ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಕೊಳವೆ ಬಾವಿಗಳಿಗೆ ಕಡ್ಡಾಯವಾಗಿ ಮುಚ್ಚಳ ಹಾಕಿ. ಅಂತರ್ಜಲ ಬತ್ತಿರುವ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಗುರುತಿಸಿ ಪಂಪ್‌ ಮೋಟರ್‌ ಅಳವಡಿಸಬೇಕು’ ಎಂದು ತಿಳಿಸಿದರು.

‘ಕೆ.ಸಿ ವ್ಯಾಲಿ ನೀರು ಹರಿದಿರುವ ಕೆರೆಗಳ ಸುತ್ತಮುತ್ತ ಬತ್ತಿ ಹೋಗಿದ್ದ ಬಹುತೇಕ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಈ ಕೊಳವೆ ಬಾವಿಗಳನ್ನು ಪರಿಶೀಲಿಸಿ ನೀರು ಲಭ್ಯವಿದ್ದರೆ ಪಂಪ್‌ ಮೋಟರ್‌ ಅಳವಡಿಸಬೇಕು. ಇಲ್ಲವಾದರೆ ಸಂಪೂರ್ಣವಾಗಿ ಮುಚ್ಚಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನೀರಿನ 84 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದ್ದು, ಈ ಪೈಕಿ 52 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 32 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದು ನೀರು ಪೂರೈಸಲಾಗುತ್ತಿದೆ’ ಎಂದು ವಿವರಿಸಿದರು.

‘ಬರ ಕಾಮಗಾರಿಗಳ ನಿರ್ವಹಣೆಗೆ ನೇಮಿಸಿರುವ ನೋಡಲ್ ಅಧಿಕಾರಿಗಳು ಕ್ಷೇತ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಸಮಸ್ಯೆ ಅರಿತು ಬಗೆಹರಿಸಬೇಕು. ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಮಾತ್ರ ಪ್ರಾಕೃತಿಕ ವಿಕೋಪ ನಿಧಿ (ಸಿಆರ್ಎಫ್) ಅನುದಾನದಲ್ಲಿ ಹಣ ಒದಗಿಸಲಾಗುವುದು. ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ನೀರು ಪೂರೈಸಲು ಅನುಮತಿ ಕೇಳಿದರೆ ತಕ್ಷಣ ನೀಡಲಾಗುವುದು’ ಎಂದರು.

ವಿಲೇವಾರಿ ಮಾಡಿ: ‘ಹಳೆಯ ಪಂಪ್‌ ಮತ್ತು ಮೋಟರ್‌ಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಮರು ಬಳಕೆ ಮಾಡಿಕೊಳ್ಳಿ. ಮರು ಬಳಕೆಯಾಗದ ಹಾಗೂ ಕಡಿಮೆ ಸಾಮರ್ಥ್ಯದ (ಎಚ್‌ಪಿ) ಪಂಪ್ ಮೋಟರ್‌ಗಳನ್ನು ನಿಯಾಮಾನುಸಾರ ವಿಲೇವಾರಿ ಮಾಡಿ. ಜಿಲ್ಲೆಯಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಬೆಳೆ ನಷ್ಟ ಹಾಗೂ ಮನೆ ಕುಸಿತ ಕಂಡುಬಂದರೆ ಶೀಘ್ರವೇ ಕ್ರಮ ಕೈಗೊಳ್ಳಿ’ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಿ.ಜಗದೀಶ್, ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT