ಗುರುವಾರ , ನವೆಂಬರ್ 21, 2019
22 °C

ಐ.ಟಿ ಮುಖ್ಯಸ್ಥರಿಗೆ ದೂರು ಕೊಡುತ್ತೇವೆ

Published:
Updated:

ಕೋಲಾರ: ‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ನೆಪದಲ್ಲಿ ಸಾಕಷ್ಟು ಕಿರುಕುಳ ನೀಡಿದ್ದಾರೆ. ಅವರ ವಿರುದ್ಧ ಇಲಾಖೆ ಮುಖ್ಯಸ್ಥರಿಗೆ ದೂರು ಕೊಡುತ್ತೇವೆ’ ಎಂದು ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ಕಿಡಿಕಾರಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಂಸ್ಥೆಯ ಹಣಕಾಸು ವ್ಯವಹಾರ ಪಾರದರ್ಶಕವಾಗಿದೆ. ನಾವು ತೆರಿಗೆ ವಂಚನೆ ಮಾಡಿಲ್ಲ. ಆದರೂ ಐ.ಟಿ ಅಧಿಕಾರಿಗಳು ಹಣಕಾಸು ವ್ಯವಹಾರದ ಸಂಬಂಧ ಸುಳ್ಳು ಹೇಳಿಕೆ ನೀಡುವಂತೆ ಸಂಸ್ಥೆ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಐ.ಟಿ ಅಧಿಕಾರಿಗಳು ಸಂಸ್ಥೆಯ ಹಿರಿಯ ಸಿಬ್ಬಂದಿ ವಯಸ್ಸಿಗೂ ಗೌರವ ಕೊಡದೆ ಮನಬಂದಂತೆ ಪ್ರಶ್ನೆ ಕೇಳಿ ಶೋಷಿಸಿದ್ದಾರೆ. ಕಾನೂನು ದುರ್ಬಳಕೆ ಮಾಡಿಕೊಂಡು ಸುಳ್ಳನ್ನು ನಿಜವೆಂದು ಬಿಂಬಿಸಲು ಹೊರಟಿದ್ದಾರೆ. ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ರ ಆಪ್ತ ಸಹಾಯಕ ರಮೇಶ್‌ ಅವರ ಸಾವಿಗೆ ಐ.ಟಿ ಅಧಿಕಾರಿಗಳ ಕಿರುಕುಳವೇ ಕಾರಣ’ ಎಂದು ಗುಡುಗಿದರು.

‘ಐ.ಟಿ ಅಧಿಕಾರಿಗಳು ಸಂಸ್ಥೆ ಮೇಲೆ ಈ ಹಿಂದೆಯೂ 3 ಬಾರಿ ದಾಳಿ ನಡೆಸಿದ್ದರು. ಅವರ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಬೆಂಗಳೂರಿನ ಐ.ಟಿ ಕಚೇರಿಯಲ್ಲಿ ವಿಚಾರಣೆಗೂ ಹಾಜರಾಗಿದ್ದೇವೆ. ಈ ಬಾರಿ ದಾಳಿ ವೇಳೆ ಕೇವಲ ₹ 3.75 ಲಕ್ಷ ಸಿಕ್ಕಿದೆ. ಆ ಹಣವನ್ನು ಕಾರ್ಯಕ್ರಮ ಆಯೋಜನೆಗಾಗಿ ಇಟ್ಟುಕೊಳ್ಳಲಾಗಿತ್ತು’ ಎಂದು ವಿವರಿಸಿದರು.

‘ಸಂಸ್ಥೆ ಸಿಬ್ಬಂದಿಯಲ್ಲಿ 2 ಗುಂಪುಗಳಾಗಿದ್ದು. ಈ ಪೈಕಿ ಒಂದು ಗುಂಪು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದೆ. ಆ ಗುಂಪು ಸಂಸ್ಥೆ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ಹಣಕಾಸು ವ್ಯವಹಾರ ಹಾಗೂ ವೈದ್ಯಕೀಯ ಸೀಟು ಹಂಚಿಕೆಯಲ್ಲಿ ನಾವು ಪರಿಶುದ್ಧವಾಗಿದ್ದು, ಯಾರೂ ಕೂಡ ಸಂಸ್ಥೆಯತ್ತ ಬೆಟ್ಟು ತೋರುವಂತಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)