ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ 370 | ಕೇಂದ್ರದ ಕ್ರಮಕ್ಕೆ ಸ್ವಾಗತ: ವಿವಿಧೆಡೆ ವಿಜಯೋತ್ಸವ

ಪ್ರಧಾನಿ ಮೋದಿ– ಅಮಿತ್‌ ಷಾಗೆ ಜೈಕಾರ: ಪಟಾಕಿ ಸಿಡಿಸಿ ಸಂಭ್ರಮ
Last Updated 5 ಆಗಸ್ಟ್ 2019, 14:51 IST
ಅಕ್ಷರ ಗಾತ್ರ

ಕೋಲಾರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿ ಸೋಮವಾರ ವಿಜಯೋತ್ಸವ ಆಚರಿಸಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಹಾಗೂ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಪರ ಜೈಕಾರ ಕೂಗಿ ಸಂತಸ ವ್ಯಕ್ತಪಡಿಸಿದರು.

‘ದೇಶದಲ್ಲಿ ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದುಗೊಳಿಸುವ ಧೈರ್ಯ ಮಾಡಲಿಲ್ಲ. ಆದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ವಿಧಿ ರದ್ದುಗೊಳಿಸಿ ದಿಟ್ಟತನ ಪ್ರದರ್ಶಿಸಿದೆ’ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

‘ಜಮ್ಮು ಮತ್ತು ಕಾಶ್ಮೀರವು ಭಾರತದಲ್ಲಿ ಉಳಿಯಲು ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಾಬಾಯಿ ಪಟೇಲ್ ಕಾರಣರು. ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ ಸಮಸ್ಯೆಗೆ ಅಂತ್ಯವಾಡಲು ಮೋದಿ ಮತ್ತು ಷಾ ದೃಢ ಸಂಕಲ್ಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮೋದಿಯವರು 370ನೇ ವಿಧಿ ರದ್ದುಗೊಳಿಸಿ ಉಕ್ಕಿನ ಮನುಷ್ಯರಾಗಿ ಮೆರೆದಿದ್ದಾರೆ’ ಎಂದು ಬಣ್ಣಿಸಿದರು.

‘ಕೇಂದ್ರದ ದಿಟ್ಟ ಕ್ರಮದಿಂದ ದೇಶ ಮತ್ತಷ್ಟು ಉತ್ತಮ ಸ್ಥಿತಿಗೆ ತಲುಪಲಿದ್ದು, ಶಾಂತಿ ಸುವ್ಯವಸ್ಥೆ ನೆಲೆಗೊಳ್ಳುತ್ತದೆ. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಮತ್ತು ಪ್ರತ್ಯೇಕತಾವಾದಿಗಳಿಗೆ ಕಡಿವಾಣ ಬೀಳಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ವಿಜಯ್‌ಕುಮಾರ್‌, ವೆಂಕಟೇಶ್, ನಾರಾಯಣಸ್ವಾಮಿ, ಸಂಪತ್, ಅರುಣಮ್ಮ, ಸುರೇಶ್, ರಾಮಚಂದ್ರ, ಮಹೇಶ್, ಶಿವು, ಸುನಿತಾ ಪಾಲ್ಗೊಂಡಿದ್ದರು.

ಭಯೋತ್ಪಾದನೆ ದಮನ: ಚಂಪಕ್‌ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದ ಬಜರಂಗದಳ ಕಾರ್ಯಕರ್ತರು, ‘ಮೋದಿ ಮತ್ತು ಷಾ ಅವರು 370ನೇ ವಿಧಿ ರದ್ದುಗೊಳಿಸಿ ಭಯೋತ್ಪಾದನೆ ದಮನಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕೇಂದ್ರವು ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ತೋರಿಸಿಕೊಟ್ಟಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಕಾಶ್ಮೀರದ ವಿಷಯದಲ್ಲಿ ಸದಾ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನಕ್ಕೆ ಕೇಂದ್ರವು ಎಚ್ಚರಿಕೆಯ ಸಂದೇಶ ರವಾನಿಸಿದೆ. ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಪ್ರಧಾನಿ ಮೋದಿಯವರು ಭಾರತದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ’ ಎಂದು ಬಜರಂಗದಳ ಸದಸ್ಯ ಬಾಲಾಜಿ ಹೇಳಿದರು.

‘ಸರ್ದಾರ್‌ ವಲ್ಲಭಾಬಾಯಿ ಪಟೇಲ್ ಇಲ್ಲವಾಗಿದ್ದಲ್ಲಿ ಕಾಶ್ಮೀರ ನಮ್ಮದಾಗಿರುತ್ತಿರಲಿಲ್ಲ ಎಂಬ ಸತ್ಯ ಅರಿಯಬೇಕು. ಜಮ್ಮು ಕಾಶ್ಮೀರ ಉಳಿಸಿಕೊಳ್ಳಲು ಭಾರತ ಸಶಕ್ತವಾಗಿದೆ. 370ನೇ ವಿಧಿ ರದ್ದುಗೊಳಿಸಿರುವ ಕೇಂದ್ರದ ಕ್ರಮವನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾಗತಿಸಬೇಕು’ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಬಾಬು ತಿಳಿಸಿದರು.

ಬಜರಂಗದಳ ಮುಖಂಡರಾದ ಡಿ.ಆರ್.ನಾಗರಾಜ್, ವಿಜಯ್‌ಕುಮಾರ್, ಮಂಜುನಾಥ್, ವಿನಯ್, ಶ್ರೀಧರ್, ಗೋವಿಂದ್, ಉಜ್ವಲ್ ಪಾಲ್ಗೊಂಡಿದ್ದರು.

ಸಮಗ್ರ ಅಭಿವೃದ್ಧಿ: ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಶ್ರೀರಾಮಸೇನೆ ಕಾರ್ಯಕರ್ತರು, ‘ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ತಿದ್ದುಪಡಿ ಮಸೂದೆಯಿಂದ ಭವಿಷ್ಯದಲ್ಲಿ ಜಮ್ಮು ಮತ್ತು ಕಾಶ್ಮೀರವು ಸಮಗ್ರ ಅಭಿವೃದ್ಧಿಯಾಗಲಿದೆ’ ಎಂದು ಬಣ್ಣಿಸಿದರು,

‘ಜವಾಹರಲಾಲ್‌ ನೆಹರೂ ಅವರು ತೆಗೆದುಕೊಂಡ ಅವೈಜ್ಞಾನಿಕ ನಿರ್ಧಾರಗಳಿಂದ ಜಮ್ಮು- ಕಾಶ್ಮೀರಕ್ಕೆ ದುಸ್ಥಿತಿ ಬಂದಿತ್ತು. ಇದೀಗ ಬಿಜೆಪಿ ಸರ್ಕಾರವು ಈ ಸಮಸ್ಯೆ ನಿವಾರಿಸಿ ಸ್ಥಳೀಯರ ಸ್ವಾವಲಂಬಿ ಬದುಕಿಗೆ ಆಸರೆ ನೀಡಿದೆ’ ಎಂದು ಶ್ರೀರಾಮಸೇನೆ ನಗರ ಘಟಕದ ಅಧ್ಯಕ್ಷ ಪ್ರಭಾಕರ್‌ ಯಾದವ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ವಿವಿಧೆಡೆ ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT