ಪತಿರಾಯರಿಗಿಂತ ಪತ್ನಿಯರೇ ಸಿರಿವಂತರು

ಗುರುವಾರ , ಏಪ್ರಿಲ್ 25, 2019
33 °C
ಬಿಜೆಪಿ– ಕಾಂಗ್ರೆಸ್‌ ಅಭ್ಯರ್ಥಿಗಳು ಕೋಟಿ ಒಡೆಯರು: ದಾಖಲೆಪತ್ರದಲ್ಲಿ ಘೋಷಣೆ

ಪತಿರಾಯರಿಗಿಂತ ಪತ್ನಿಯರೇ ಸಿರಿವಂತರು

Published:
Updated:
Prajavani

ಕೋಲಾರ: ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳಿಗಿಂತ ಅವರ ಪತ್ನಿಯರೇ ಆಸ್ತಿ, ಅಂತಸ್ತಿನಲ್ಲಿ ಶ್ರೀಮಂತರಾಗಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹಾಗೂ ಅವರ ಪತ್ನಿ ನಾಗರತ್ನಮ್ಮ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಕಾನೂನು ಪದವೀಧರನಾದ ತಾನು ಮುನಿಯಪ್ಪ ಕೃಷಿ ಮಾಡುತ್ತಿರುವುದಾಗಿ ನಾಮಪತ್ರ ಜತೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಪತ್ರಗಳಲ್ಲಿ ಘೋಷಿಸಿಕೊಂಡಿದ್ದಾರೆ.

ಮುನಿಯಪ್ಪ ವಿರುದ್ಧ ಜಾತಿ ನಿಂದನೆ ಮತ್ತು ದೌರ್ಜನ್ಯ ತಡೆ ಕಾಯ್ದೆಯಡಿ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ರಾಬರ್ಟ್‌ಸನ್‌ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಬಗ್ಗೆ ವಿಚಾರಣೆ ಮುಂದುವರಿದಿದೆ.

ಮುನಿಯಪ್ಪರ ಬಳಿ ₹ 15.75 ಲಕ್ಷ, ಪತ್ನಿ ಬಳಿ ₹ 1.22 ಲಕ್ಷ ಹಣವಿದೆ. ಮುನಿಯಪ್ಪ ವಿವಿಧ ಬ್ಯಾಂಕ್‌ಗಳಲ್ಲಿ ₹ 3.60 ಲಕ್ಷ ಠೇವಣಿ ಇಟ್ಟಿದ್ದಾರೆ. ಪತ್ನಿಯ ಬ್ಯಾಂಕ್‌ ಖಾತೆಗಳಲ್ಲಿ ₹ 3.54 ಲಕ್ಷ ಠೇವಣಿ ಇದೆ. ಮುನಿಯಪ್ಪ ಷೇರು ವಹಿವಾಟಿನಲ್ಲಿ ಮತ್ತು ವಿಮಾ ಕಂಪನಿಗಳಲ್ಲಿ ₹ 53.15 ಲಕ್ಷ ಹೂಡಿಕೆ ಮಾಡಿದ್ದಾರೆ. ನಾಗರತ್ನಮ್ಮ ಷೇರು ಮತ್ತು ವಿಮೆಯಲ್ಲಿ ₹ 3.10 ಕೋಟಿ ಹೂಡಿದ್ದಾರೆ. ಮುನಿಯಪ್ಪರ ಬಳಿ ₹ 3 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ, ₹ 20 ಬೆಲೆ ಬಾಳುವ ಕಾರು ಇದೆ. ಅವರ ಪತ್ನಿ ಬಳಿ ₹ 26.81 ಲಕ್ಷ ಮೌಲ್ಯದ 865 ಗ್ರಾಂ ಚಿನ್ನಾಭರಣ , ₹ 2.50 ಲಕ್ಷ ಬೆಲೆ ಬಾಳುವ 6 ಕೆ.ಜಿ ಬೆಳ್ಳಿ ಆಭರಣಗಳಿವೆ.

ಮುನಿಯಪ್ಪ ಕೃಷಿ ಜಮೀನು, ವಾಣಿಜ್ಯ ಸಂಕೀರ್ಣ, ಮನೆ, ನಿವೇಶನ ಸೇರಿದಂತೆ ₹ 8.50 ಕೋಟಿ ಮತ್ತು ಪತ್ನಿಯು ₹ 14.11 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಮುನಿಯಪ್ಪ ₹ 4.53 ಕೋಟಿ ಸಾಲ ಮತ್ತು ನಾಗರತ್ನಮ್ಮ ₹ 9.84 ಕೋಟಿ ಸಾಲ ಮಾಡಿದ್ದಾರೆ. ಮುನಿಯಪ್ಪ ಪತ್ನಿಯಿಂದ ₹ 9.84 ಕೋಟಿ ಸಾಲ ಪಡೆದಿದ್ದಾರೆ. ನಾಗರತ್ನಮ್ಮ ಸೊಸೆ ಶ್ರುತಿ ಅವರಿಂದ ₹ 3.45 ಕೋಟಿ ಮತ್ತು ಪತಿಯಿಂದ ₹ 30.37 ಲಕ್ಷ ಸಾಲ ಮಾಡಿದ್ದಾರೆ.

ಕೋಟ್ಯಾಧಿಪತಿ ಕೃಷಿಕ: ಪಿಯುಸಿ ಓದಿರುವ ಮುನಿಸ್ವಾಮಿ ವೃತ್ತಿಯಿಂದ ಕೃಷಿಕರು. ಸದ್ಯ ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಡುಗೋಡಿ ವಾರ್ಡ್‌ ಸದಸ್ಯರಾಗಿದ್ದಾರೆ. ತಮ್ಮ ಬಳಿ ₹ 15 ಲಕ್ಷ, ಪತ್ನಿ ಎಂ.ಶೈಲಜಾ ಬಳಿ ₹ 9 ಲಕ್ಷ, ಮಕ್ಕಳಾದ ಎಂ.ವೈಷ್ಣವಿ ಮತ್ತು ಎಂ.ಹರ್ಷಿತಾ ಬಳಿ ₹ 1.60 ಲಕ್ಷ ನಗದು ಇದೆ ಎಂದು ಅವರು ನಾಮಪತ್ರದ ಜತೆ ಸಲ್ಲಿಸಿರುವ ದಾಖಲೆಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ಮುನಿಸ್ವಾಮಿ ಅವರು ಬೆಂಗಳೂರಿನ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ₹ 7 ಲಕ್ಷ ಠೇವಣಿ ಇಟ್ಟಿದ್ದಾರೆ. ಅವರ ಪತ್ನಿಯ ಬ್ಯಾಂಕ್‌ ಖಾತೆಯಲ್ಲಿ ₹ 6 ಲಕ್ಷ ಠೇವಣಿಯಿದೆ. ಮುನಿಸ್ವಾಮಿ ಆರೋಗ್ಯ ವಿಮೆಯಲ್ಲಿ ₹ 5 ಲಕ್ಷ ಹೂಡಿಕೆ ಮಾಡಿದ್ದಾರೆ. ಮಗಳು ವೈಷ್ಣವಿ ಕಾಡುಗೋಡಿ ಅಂಚೆ ಕಚೇರಿಯಲ್ಲಿ ₹ 15 ಸಾವಿರ ಹೂಡಿಕೆ ಮಾಡಿದ್ದಾರೆ. ಮುನಿಸ್ವಾಮಿ ಮತ್ತು ಅವರ ಪತ್ನಿಯು ಜಮೀನು ಖರೀದಿಗಾಗಿ ₹ 15.10 ಲಕ್ಷ ಮುಂಗಡ ಹಣ ಕೊಟ್ಟಿದ್ದಾರೆ.

ಮುನಿಸ್ವಾಮಿಯವರ ಬಳಿ ₹ 9 ಲಕ್ಷದ ಕಾರು ಮತ್ತು ₹ 70 ಸಾವಿರ ಮೌಲ್ಯದ ಬೈಕ್‌, ಪತ್ನಿ ಹೆಸರಿನಲ್ಲಿ ₹ 52 ಲಕ್ಷ ಬೆಲೆ ಬಾಳುವ 2 ಕಾರು, ₹ 5 ಲಕ್ಷ ಮೌಲ್ಯದ ಎರಡು ಟ್ರ್ಯಾಕ್ಟರ್‌ ಹಾಗೂ ₹ 60 ಸಾವಿರ ಮೌಲ್ಯದ ಬೈಕ್‌ ಇದೆ. ಮುನಿಸ್ವಾಮಿ ಹೆಸರಿನಲ್ಲಿ ಒಟ್ಟಾರೆ ₹ 64.20 ಲಕ್ಷ ಮೌಲ್ಯದ ಚರಾಸ್ತಿ, ಪತ್ನಿ ಹೆಸರಿನಲ್ಲಿ ₹ 1.03 ಕೋಟಿ ಮತ್ತು ಮಕ್ಕಳ ಬಳಿ ₹ 15.92 ಲಕ್ಷ ಮೌಲ್ಯದ ಚರಾಸ್ತಿ ಇದೆ.

ಮುನಿಸ್ವಾಮಿಯವರ ಬಳಿ ₹ 18 ಲಕ್ಷ ಬೆಲೆ ಬಾಳುವ 600 ಗ್ರಾಂ ಚಿನ್ನಾಭರಣ ಮತ್ತು ₹ 1.90 ಲಕ್ಷ ಮೌಲ್ಯದ 4 ಕೆ.ಜಿ ಬೆಳ್ಳಿ ಆಭರಣಗಳಿವೆ. ಪತ್ನಿಯ ಬಳಿ ₹ 27 ಲಕ್ಷ ಮೌಲ್ಯದ 900 ಗ್ರಾಂ ಚಿನ್ನಾಭರಣ ಹಾಗೂ ₹ 2.85 ಲಕ್ಷ ಬೆಲೆ ಬಾಳುವ 6 ಕೆ.ಜಿ ಬೆಳ್ಳಿ ಆಭರಣಗಳಿವೆ. ಮಕ್ಕಳ ಬಳಿ ₹ 9 ಲಕ್ಷ ಮೌಲ್ಯದ 300 ಗ್ರಾಮ ಚಿನ್ನಾಭರಣ, ₹ 5 ಲಕ್ಷ ಬೆಲೆ ಬಾಳುವ 250 ಗ್ರಾಂ ತೂಕದ ವಜ್ರಾಭರಣ, ₹ 17,500 ಬೆಲೆ ಬಾಳುವ 250 ಗ್ರಾಂ ಬೆಳ್ಳಿ ಆಭರಣಗಳಿವೆ.

ಮುನಿಸ್ವಾಮಿ ಹೆಸರಿನಲ್ಲಿ ₹ 8.60 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಪತ್ನಿ ಹೆಸರಿನಲ್ಲಿ ₹ 7.01 ಕೋಟಿ ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಜತೆಗೆ ಪತ್ನಿಯು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ₹ 75 ಲಕ್ಷ ಹೂಡಿಕೆ ಮಾಡಿದ್ದಾರೆ. ಮುನಿಸ್ವಾಮಿ ಅವರು ₹ 75 ಲಕ್ಷ ಮತ್ತು ಶೈಲಜಾ ಅವರು ₹ 1.23 ಕೋಟಿ ಸಾಲ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !