ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮೀಸಲಾತಿ ಸದ್ಬಳಕೆ ಆಗಲಿ: ಗೋವಿಂದಗೌಡ ಸಲಹೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಸಲಹೆ
Last Updated 8 ಮಾರ್ಚ್ 2021, 14:42 IST
ಅಕ್ಷರ ಗಾತ್ರ

ಕೋಲಾರ: ‘ಮೀಸಲಾತಿಗಾಗಿ ಹೋರಾಟ ನಡೆಸುವ ಮಹಿಳೆಯರು ಸಿಕ್ಕ ಅಧಿಕಾರದ ಜವಾಬ್ದಾರಿಯನ್ನು ಪುರುಷರಿಗೆ ನೀಡದೆ ಸವಾಲಾಗಿ ಸ್ವೀಕರಿಸಿ ಆಡಳಿತ ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಕಿವಿಮಾತು ಹೇಳಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಡಿಸಿಸಿ ಬ್ಯಾಂಕ್‌ ವತಿಯಿಂದ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅರಿಶಿಣ ಕುಂಕುಮದೊಂದಿಗೆ ‘ಕಿಸಾನ್ ಶ್ರೀಲಕ್ಷ್ಮೀ’ ಠೇವಣಿ ಬಾಂಡ್ ವಿತರಿಸಿ ಮಾತನಾಡಿದರು.

‘ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ 50 ಮೀಸಲಾತಿಯಿದೆ. ವಿಧಾನಸಭೆ, ಲೋಕಸಭೆಯಲ್ಲಿ ಶೇ 33ರಷ್ಟು ಮೀಸಲಾತಿಗೆ ಒತ್ತಾಯ ಕೇಳಿಬರುತ್ತಿದೆ. ಹಲವು ಮಹಿಳೆಯರು ಮೀಸಲಾತಿ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡು ಇಡೀ ಸಮಾಜ ಒಪ್ಪುವಂತಹ ಜನಪರ ಆಡಳಿತ ನೀಡಿರುವ ಉದಾಹರಣೆ ಸಾಕಷ್ಟಿವೆ’ ಎಂದು ತಿಳಿಸಿದರು.

‘ಸಂವಿಧಾನದಡಿ ಮಹಿಳೆಯರಿಗೆ ಪ್ರತಿ ಕ್ಷೇತ್ರದಲ್ಲಿ ಸ್ಥಾನಮಾನ ಕಲ್ಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಪುರುಷರಷ್ಟೇ ಮಹಿಳೆಯರು ಇರುತ್ತಾರೆ. ಮಹಿಳಾ ಮೀಸಲಾತಿ ಸದ್ಬಳಕೆ ಆಗಬೇಕು. ರಾಜಕಾರಣದಲ್ಲಿ ಮಹಿಳೆಯರಿಗೆ ಸಿಕ್ಕಿದ ಅಧಿಕಾರವನ್ನು ಪುರುಷರಿಗೆ ನೀಡಿ ಸಂವಿಧಾನಕ್ಕೆ ದ್ರೋಹ ಬಗೆಯಬಾರದು. ಮಹಿಳೆಯರು ತಮ್ಮ ಅಧಿಕಾರ ಚಲಾಯಿಸಿದಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದರು.

‘ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇಂದು ಮಹಿಳೆಯರು ಎಂದರೆ ನಂಬಿಕೆ ಎಂಬ ಪರ್ಯಾಯ ಅರ್ಥ ಎನ್ನುವಂತಾಗಿದೆ. ಡಿಸಿಸಿ ಬ್ಯಾಂಕ್ ಎತ್ತರಕ್ಕೆ ಬೆಳೆಯಲು ಮಹಿಳೆಯರೇ ಕಾರಣ. ಸಾಲ ಮರುಪಾವತಿಯ ಪ್ರಾಮಾಣಿಕತೆ ನಂಬಿ ಬ್ಯಾಂಕ್ ಧೈರ್ಯದಿಂದ ಸಾವಿರಾರು ಕೋಟಿ ಸಾಲ ನೀಡಿದೆ’ ಎಂದು ಹೇಳಿದರು.

ತ್ಯಾಗಮಯಿ ಸ್ವರೂಪಿ: ‘ದೇಶದಲ್ಲಿ ಹೆಣ್ಣನ್ನು ಆದಿಪರಾಶಕ್ತಿ ಎನ್ನುತ್ತಾರೆ. ಅಕ್ಕ, ತಂಗಿ, ತಾಯಿಯಾಗಿ ಕುಟುಂಬವನ್ನು ಕಾಪಾಡುವ ಹೆಣ್ಣಿಗೆ ಬದುಕು ರೂಪಿಸಿಕೊಳ್ಳುವ ಶಕ್ತಿ ಇದೆ. ಪುರುಷನ ನೆರಳಾಗಿ ಸೇವೆ ಸಲ್ಲಿಸುವ ತ್ಯಾಗಮಯಿ ಸ್ವರೂಪಿ ಹೆಣ್ಣು ಪುರುಷನ ಸಾಧನೆಯ ಹಿಂದಿನ ಶಕ್ತಿ’ ಎಂದು ಬ್ಯಾಂಕ್‌ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ಅಭಿಪ್ರಾಯಪಟ್ಟರು.

‘ಮಹಿಳೆಯರಿಗೆ ಜವಾಬ್ದಾರಿ ವಹಿಸಿದರೆ ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಮಹಿಳೆಯರು ಬ್ಯಾಂಕ್‌ನಿಂದ ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಮಾದರಿಯಾಗಿದ್ದಾರೆ’ ಎಂದು ಬ್ಯಾಂಕ್ ನಿರ್ದೇಶಕ ಸೋಮಣ್ಣ ಬಣ್ಣಿಸಿದರು.

ಸ್ವಾವಲಂಬಿ ಬದುಕು: ‘ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸಾಧಕ ಮಹಿಳೆಯರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು’ ಎಂದು ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಕಿವಿಮಾತು ಹೇಳಿದರು.

ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಮುದುವಾಡಿ ಗ್ರಾ.ಪಂ ಮಾಜಿ ಅಧ್ಯಕ್ಷೆ ರಾಜಮ್ಮ, ಬ್ಯಾಂಕ್ ವ್ಯವಸ್ಥಾಪಕ ಅಂಬರೀಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT