ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಸ್ವಾಭಿಮಾನದಿಂದ ಬದುಕಿ: ಜಿ.ಪಂ ಸಿಇಒ ನಾಗರಾಜ್

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಜಿ.ಪಂ ಸಿಇಒ ನಾಗರಾಜ್‌ ಹೇಳಿಕೆ
Last Updated 8 ಮಾರ್ಚ್ 2021, 15:28 IST
ಅಕ್ಷರ ಗಾತ್ರ

ಕೋಲಾರ: ‘ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಮಹಿಳೆ ಸಬಲೆಯೇ ಹೊರತು ಅಬಲೆಯಲ್ಲ. ಮಹಿಳೆಯರು ಯಾವುದೇ ಕಾರಣಕ್ಕೂ ಅಸ್ತಿತ್ವ ಕಳೆದುಕೊಳ್ಳದೆ ಸ್ವಾಭಿಮಾನದಿಂದ ಬದುಕಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್‌.ಎಂ.ನಾಗರಾಜ್‌ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ‘ಮಹಿಳೆಯು ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದೆ. ಮಹಿಳೆಯರು ಈಗ ಪುರುಷರಿಗೆ ಸರಿ ಸಮಾನ’ ಎಂದು ಅಭಿಪ್ರಾಯಪಟ್ಟರು.

‘ಮಹಿಳಾ ಸಬಲೀಕರಣ ಎಂದರೆ ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವುದಾಗಿದೆ. ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಿ ಧೈರ್ಯ ತುಂಬಿ ಸ್ವಾವಲಂಬಿಗಳಾಗಿಸಬೇಕು. ವೇದಗಳ ಕಾಲದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳಿದ್ದವು. ಮಹಿಳೆಯರನ್ನು ಕುಟುಂಬಕ್ಕೆ ಸೀಮಿತಗೊಳಿಸದೆ ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸುವಂತೆ ಅವಕಾಶ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

‘ಸಮಾಜ ಸುಧಾರಕರು, ಮಹನೀಯರ ಹೋರಾಟ, ತ್ಯಾಗ ಬಲಿದಾನದಿಂದ ಮಹಿಳೆಯರಿಗೆ ಇಂದು ಸಮಾಜದಲ್ಲಿ ಪುರುಷರಷ್ಟೇ ಸಮಾನ ಅವಕಾಶ ದೊರೆತಿವೆ. ಮಹಿಳೆಯರು ಎಲ್ಲಾ ಅಡೆತಡೆ ಮೀರಿ ಎಲ್ಲಾ ರಂಗದಲ್ಲೂ ಸ್ಪರ್ಧೆ ನೀಡುತ್ತಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು’ ಎಂದು ಆಶಿಸಿದರು.

‘ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು. ಉನ್ನತ ಸ್ಥಾನ ಅಲಂಕರಿಸಿ ಪುರುಷರಿಗೆ ಸಮನಾಗಿ ಬೆಳೆಯಬೇಕು’ ಎಂದು ಹೇಳಿದರು.

ಅವಿಭಾಜ್ಯ ಅಂಗ: ‘ಜೀವನದಲ್ಲಿ ಮಹಿಳೆ ಮತ್ತು ಪುರುಷ ಸಮಾಜದ ಅವಿಭಾಜ್ಯ ಅಂಗ. ಹಲವು ಮಹಿಳೆಯರು ಕುಟುಂಬದಲ್ಲಿನ ಪುರುಷರ ಬೆಂಬಲದಿಂದ ಸಾಧನೆ ಮಾಡಿರುವುದನ್ನು ಮರೆಯಬಾರದು. ಮನೆಯಿಂದಲೇ ಆರಂಭವಾಗುವ ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಸಮಾನತೆ ಬೆಳೆಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ತಿಳಿಸಿದರು.

‘ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಇದೆ. ಮಹಿಳೆಯರು ರಬ್ಬರ್‌ ಸ್ಟಾಂಪ್‌ ಆಗಬಾರದು. ಸ್ವಂತ ನಿರ್ಧಾರ ತೆಗೆದುಕೊಂಡು ಸಮಾಜದ ಒಳಿತಿಗೆ ಶ್ರಮಿಸಬೇಕು. ತಮ್ಮ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕು’ ಎಂದರು.

ಧ್ವನಿ ಎತ್ತಬೇಕು: ‘ಮಹಿಳಾ ದಿನಾಚರಣೆ ಭಾಷಣಕ್ಕೆ ಸೀಮಿತವಾಗಬಾರದು. ಸಾಧಕಿಯರು ಸ್ತ್ರೀ ಸಮುದಾಯಕ್ಕೆ ಆದರ್ಶವಾಗಬೇಕು. ಸಾಧನೆಯ ಛಲ ಮೈಗೂಡಿಸಿಕೊಳ್ಳಬೇಕು. ಮಹಿಳೆಯರ ಮೇಲಿನ ಶೋಷಣೆ, ಅತ್ಯಾಚಾರ ಪ್ರಕರಣಗಳ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಅಭಿಪ್ರಾಯಪಟ್ಟರು.

ಅಸಾಧಾರಣ ಸಾಧನೆ ಮಾಡಿದ ಬಾಲಕಿಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿ.ಪಂ ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಿರ್ಮಲಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೋಸ್‌ಲಿನ್‌, ರಮೇಶ್, ಮಹೇಶ್‌ಕುಮಾರ್‌, ರಮ್ಯಾ, ಹಿರಿಯ ನಾಗರೀಕರ ಮತ್ತು ಅಂಗವಿಕಲರ ಸಬಲೀಕರಣಾಧಿಕಾರಿ ಮುನಿರಾಜು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT