ಮಹಿಳೆಯರ ರಕ್ಷಣೆ: ಶ್ವೇತಪತ್ರ ಹೊರಡಿಸಲಿ-ಪುಷ್ಪಾ ಅಮರನಾಥ್ ಸವಾಲು

ಗುರುವಾರ , ಏಪ್ರಿಲ್ 25, 2019
31 °C

ಮಹಿಳೆಯರ ರಕ್ಷಣೆ: ಶ್ವೇತಪತ್ರ ಹೊರಡಿಸಲಿ-ಪುಷ್ಪಾ ಅಮರನಾಥ್ ಸವಾಲು

Published:
Updated:

ಕೋಲಾರ: ‘ಬಿಜೆಪಿಯು 2014ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರ ರಕ್ಷಣೆ ವಿಚಾರ ಪ್ರಸ್ತಾಪಿಸಿತ್ತು. 5 ವರ್ಷದಲ್ಲಿ ಕೇಂದ್ರವು ಮಹಿಳೆಯರ ರಕ್ಷಣೆಗೆ ಏನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಪ್ರಧಾನಿ ಮೋದಿ ಶ್ವೇತಪತ್ರ ಹೊರಡಿಸಲಿ’ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಸವಾಲು ಹಾಕಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಹಿಳೆಯರಿಗೆ ಮೀಸಲಾತಿ ನೀಡುತ್ತೇವೆ, ರಕ್ಷಣೆ ನೀಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ, ಈ ಭರವಸೆ ಈಡೇರಿಸಿಲ್ಲ. ಬದಲಿಗೆ ಮಹಿಳೆಯರ ಸ್ವಾತಂತ್ರ್ಯ ಕಸಿದುಕೊಳ್ಳುವ ಯತ್ನಕ್ಕೆ ಮುಂದಾಗಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿಯಲ್ಲಿರುವ ಮಹಿಳೆಯರು ಸೇರಿದಂತೆ ಯಾರೊಬ್ಬರೂ ಕೋಮುವಾದಿ, ಮನು ಸಂಸ್ಕೃತಿಯ ಬಿಜೆಪಿಗೆ ಮತ ಹಾಕಬಾರದು. ಮಹಿಳೆಯರಿಗೆ ಸ್ವಾತಂತ್ರ್ಯ ಯಾಕೆ ಬೇಕು ಎಂದು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷರು ಕೇಳುತ್ತಾರೆ. ಹಾಗಾದರೆ ಅವರೂ ಮನೆಯಲ್ಲೇ ಇರಬೇಕಿತ್ತು. ಬಿಜೆಪಿ ಆಡಳಿತಾವಧಿಯಲ್ಲೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇಷ್ಟಾದರೂ ಮಹಿಳೆಯರ ರಕ್ಷಣೆಗೆ ಕ್ರಮ ಕೈಗೊಂಡಿಲ್ಲ’ ಎಂದು ಕಿಡಿಕಾರಿದರು.

‘ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಅಡುಗೆ ಅನಿಲ ಬೆಲೆ ಸ್ವಲ್ಪ ಏರಿಕೆಯಾದಾಗ ಬಿಜೆಪಿ ಮುಖಂಡರು. ಬೀದಿಗಿಳಿದು ಹೋರಾಟ ಮಾಡಿದ್ದರು. ಈಗ ಗ್ಯಾಸ್‌ ಸಿಲಿಂಡರ್‌ ಬೆಲೆ ₹ 1 ಸಾವಿರದ ಗಡಿ ದಾಟಿದ್ದರೂ ಬಿಜೆಪಿ ಮುಖಂಡರು ತುಟಿ ಬಿಚ್ಚುತ್ತಿಲ್ಲ. ಅವರು ಮನೆಗಳಲ್ಲಿ ಅಡುಗೆ ಮಾಡುತ್ತಿಲ್ಲವೇ, ಪ್ರತಿನಿತ್ಯ ಪಂಚತಾರಾ ಹೋಟೆಲ್‌ನಲ್ಲಿ ತಿನ್ನುತ್ತಿದ್ದಾರೆಯೇ’ ಎಂದು ಲೇವಡಿ ಮಾಡಿದರು.

ದೊಡ್ಡ ದುರಂತ: ‘ಬಿಜೆಪಿಯವರು ಬೇಟಿ ಬಚಾವೋ ಬೇಟಿ ಪಡಾವೋ ಎನ್ನುತ್ತಾರೆ. ಆದರೆ, ಅವರಿಂದ ಯಾವ ಹೆಣ್ಣು ಮಕ್ಕಳಿಗೂ ಶಿಕ್ಷಣ ಸಿಗಲಿಲ್ಲ. ಅನುದಾನ ಹಂಚಿಕೆ ಮಾಡಿದರೆ ಪ್ರತಿ ಮಗುವಿಗೆ 15 ಪೈಸೆಯೂ ಸೇರುವುದಿಲ್ಲ. ಉಪಯೋಗವಿಲ್ಲದ ಯೋಜನೆ ಜಾರಿಗೆ ತಂದಿರುವುದೇ ಮೋದಿಯ ಸಾಧನೆ. ಕೇಂದ್ರದ ಕೆಲಸಕ್ಕೆ ಬಾರದ ಯೋಜನೆಗಳನ್ನು ಪ್ರಸ್ತಾಪಿಸಲಾಗದೆ ಮೋದಿ ಸೈನಿಕರ ಸಾಧನೆ ರಾಜಕೀಯಕ್ಕೆ ಬಳಸಿಕೊಂಡು ಮತ ಯಾಚಿಸುತ್ತಿರುವುದು ದೊಡ್ಡ ದುರಂತ’ ಎಂದು ಟೀಕಿಸಿದರು.

‘ಕಾಂಗ್ರೆಸ್ 70 ವರ್ಷದಲ್ಲಿ ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಸೈನಿಕರು ಪ್ರಾಮಾಣಿಕವಾಗಿ ತಮ್ಮ ಕೆಲಸ ಮಾಡುತ್ತಿದ್ದಾರೆ. ಕೇಂದ್ರವು ಅವರಿಗೆ ಸೌಲಭ್ಯ ಕಲ್ಪಿಸದ ಬಗ್ಗೆ ಆರೋಪಗಳಿವೆ. ಪ್ರಧಾನಿ ವಿರುದ್ಧವೇ ನಿವೃತ್ತ ಯೋಧರೊಬ್ಬರು ಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದಾರೆ’ ಎಂದು ಹೇಳಿದರು.

ಉತ್ತರ ನೀಡುತ್ತಾರೆ: ‘ಕಾಂಗ್ರೆಸ್ ಅವಧಿಯಲ್ಲಿ ಸಾಕಷ್ಟು ಜನಪರ ಯೋಜನೆ ಜಾರಿಗೆ ತಂದಿದ್ದು, ಇಂತಹ ಒಂದೇ ಒಂದು ಯೋಜನೆಯನ್ನು ಜಾರಿಗೆ ತರಲು ಬಿಜೆಪಿಯಿಂದ ಸಾಧ್ಯವಾಗಿಲ್ಲ. ಬಾಯಿ ಬಿಟ್ಟರೆ ಸುಳ್ಳು ಹೇಳುವುದೇ ಬಿಜೆಪಿಯವರ ಜಾಯಾಮಾನ. ಪುಲ್ವಾಮಾ ಪ್ರಕರಣವನ್ನು ಚುನಾವಣಾ ಪ್ರಚಾರದ ಸರಕಾಗಿ ಬಳಸಿಕೊಂಡಿದ್ದಾರೆ. ಇಂತಹ ಕೀಳು ರಾಜಕಾರಣಕ್ಕೆ ಜನರೇ ಉತ್ತರ ನೀಡುತ್ತಾರೆ’ ಎಂದರು.

ಬಿಜೆಪಿ ಕೈವಾಡ: ‘ಕೆಜಿಎಫ್‌ನಲ್ಲಿ ಶಾಸಕಿ ರೂಪಕಲಾ ಅವರು ಭಾಷಣ ಮಾಡುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿರುವುದು ಖಂಡನೀಯ. ಇದರ ಹಿಂದೆ ಬಿಜೆಪಿಯವರ ಕೈವಾಡವಿದೆ. ಬಿಜೆಪಿ ಮುಖಂಡರು ಮಾತ್ರ ಇಂತಹ ನೀಚ ಕೃತ್ಯ ಮಾಡಲು ಸಾಧ್ಯ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಮೇಲೆ ಹೀಗೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ’ ಎಂದು ಪಕ್ಷದ ಮುಳಬಾಗಿಲು ಉಸ್ತುವಾರಿ ವಸಂತ ಕವಿತಾ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !