ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿಯ ಉತ್ತಮ ಫಲಿತಾಂಶಕ್ಕೆ ಬದ್ಧತೆಯಿಂದ ಕೆಲಸ ಮಾಡಿ: ವೆಂಕಟೇಶ್

ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ
Last Updated 26 ಫೆಬ್ರುವರಿ 2020, 12:07 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ 1 ಅಥವಾ 2ನೇ ಸ್ಥಾನಕ್ಕೇರಿಸಲು  ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಿ. ಕರ್ತವ್ಯ ನಿರ್ಲಕ್ಷ್ಯ ತೋರಿದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಎಚ್ಚರಿಕೆ ನೀಡಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 29 ದಿನ ಬಾಕಿಯಿದೆ. ಹಿಂದಿನ ಬಾರಿ ಫಲಿತಾಂಶ ಸಾಧನೆಯಲ್ಲಿ 6ನೇ ಸ್ಥಾನ ತಂದು ಕೊಟ್ಟು ಜಿಲ್ಲೆಯ ಘನತೆ ಹೆಚ್ಚಿಸಿದ್ದೀರಿ. ಈ ಬಾರಿ ಜಿಲ್ಲೆಯು ಮೊದಲ 2 ಸ್ಥಾನದೊಳಗೆ ಇರಬೇಕು’ ಎಂದರು.

‘ಎಸ್ಸೆಸ್ಸೆಲ್ಸಿ ಗುಣಾತ್ಮಕ ಫಲಿತಾಂಶದಲ್ಲಿ ಶ್ರೀನಿವಾಸಪುರ ತಾಲ್ಲೂಕು ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿದೆ. ಉಳಿದ ತಾಲ್ಲೂಕುಗಳಿಂದ ಈ ಸಾಧನೆ ಏಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಇರುವ ಅವಧಿಯಲ್ಲಿ ಶಾಲೆ ಆರಂಭಕ್ಕೆ ಮೊದಲು ಮತ್ತು ನಂತರ ವಿಶೇಷ ತರಗತಿ ಮೂಲಕ ಉತ್ತಮ ಫಲಿತಾಂಶಕ್ಕೆ ಒತ್ತು ನೀಡಿ’ ಎಂದು ಕಿವಿಮಾತು ಹೇಳಿದರು.

‘ಶಿಕ್ಷಣ ಮತ್ತು ಆರೋಗ್ಯ ಇಲಾಖೆಯು 2 ಕಣ್ಣುಗಳಿದ್ದಂತೆ. ಈ ಇಲಾಖೆಗಳಲ್ಲಿ ಲೋಪವಾದರೆ ಸಹಿಸುವುದಿಲ್ಲ. ಇತ್ತೀಚೆಗೆ ಬಂಗಾರಪೇಟೆ ತಾಲ್ಲೂಕಿನ ಗಡಿ ಭಾಗದ ಕೆಲ ಶಾಲೆಗಳಿಗೆ ಭೇಟಿ ನೀಡಿದ್ದಾಗ ಶಿಕ್ಷಕರು ಶಾಲೆಯಲ್ಲಿ ಇರುವುದೇ ಇಲ್ಲ ಎಂಬ ದೂರು ಬಂದವು. ಈ ಬಗ್ಗೆ ಗಮನ ಹರಿಸುವಂತೆ ಅಲ್ಲಿನ ಬಿಇಒಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 19,726 ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಜೂನಿಯರ್ ಕಾಲೇಜುಗಳ ಫಲಿತಾಂಶದಲ್ಲಿ ಇಳಿಮುಖವಾಗಲು ಕಾರಣ ಏನೆಂದು ಪತ್ತೆ ಮಾಡಿ ಸಿಬ್ಬಂದಿಗೆ ಮಾರ್ಗದರ್ಶನ ನೀಡಿ. ಅಲ್ಲಿನ ಶಿಕ್ಷಕರಿಂದ ಸರಿಯಾಗಿ ಕೆಲಸ ಮಾಡಿಸಿ’ ಎಂದು ತಾಕೀತು ಮಾಡಿದರು.

ಬೇಧ ಮಾಡಬೇಡಿ: ‘ಶಾಲೆಗೆ ಬೇಗ ಹೋಗುವ ಆತುರದಲ್ಲಿ ಹೆಣ್ಣು ಮಕ್ಕಳು ದಾರಿಯಲ್ಲಿ ಸಾಗುವ ಅಪರಿಚಿತರ ವಾಹನಗಳಿಗೆ ಹತ್ತದಂತೆ ಅರಿವು ಮೂಡಿಸಿ. ಮಕ್ಕಳಲ್ಲಿ ಬೇಧ ಮಾಡಬೇಡಿ. ಎಲ್ಲಾ ಮಕ್ಕಳನ್ನು ಸ್ವಂತ ಮಕ್ಕಳಂತೆ ಭಾವಿಸಿ, ಮಾರ್ಗದರ್ಶನ ನೀಡಿ. ಕೂಲಿ ಮಾಡಿಯಾದರೂ ಶಾಲೆಗೆ ಕಳುಹಿಸುವ ಪೋಷಕರ ಆಶಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಿ’ ಎಂದು ಜಿ.ಪಂ ಉಪಾಧ್ಯಕ್ಷೆ ಯಶೋದಾ ಸಲಹೆ ನೀಡಿದರು.

‘ಸುಗಮ ಪರೀಕ್ಷೆಗೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಆರೋಗ್ಯಕ್ಕೆ ಹಾನಿಯಾಗುವ ಕಾರ್ಯಗಳಿಂದ ದೂರವಿರುವಂತೆ ಶಿಕ್ಷಕರು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಜತೆಗೆ ಓದಿನಲ್ಲಿ ಏಕಾಗ್ರತೆ ಬರಲು ಮಾರ್ಗದರ್ಶನ ನೀಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ತಿಳಿಸಿದರು.

ನಿರ್ಣಾಯಕ ಹಂತ: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದು, ನಿರ್ಣಾಯಕ ಹಂತದಲ್ಲಿದ್ದೇವೆ. ಗುಣಾತ್ಮಕ ಫಲಿತಾಂಶಕ್ಕೆ ಶಿಕ್ಷಕರೇ ಹೊಣೆಗಾರರು’ ಎಂದು ಡಯಟ್ ಪ್ರಾಂಶುಪಾಲ ಕೆ.ಎಂ.ಜಯರಾಮರೆಡ್ಡಿ ಎಚ್ಚರಿಸಿದರು.

‘ಗುಣಾತ್ಮಕ ಫಲಿತಾಂಶಕ್ಕೆ ಒತ್ತು ನೀಡುವ ಅಗತ್ಯವಿದೆ. ಹಿಂದಿನ ಬಾರಿ ಒಟ್ಟು ಫಲಿತಾಂಶದ ಶೇ 80ರಷ್ಟು ವಿದ್ಯಾರ್ಥಿಗಳು ಶೇ 60ಕ್ಕಿಂತ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾಗಿದ್ದಾರೆ. 102 ಶಾಲೆಗಳು ಶೇ 100ರಷ್ಟು ಫಲಿತಾಂಶ ಸಾಧನೆ ಮಾಡಿದ್ದು, 80 ಶಾಲೆಗಳು ಶೇ 90ರಿಂದ 100ರ ನಡುವಿನ ಫಲಿತಾಂಶ ಪಡೆದಿವೆ. ಈ ಬಾರಿ ಇನ್ನೂ 50 ಶಾಲೆಗಳು ಶೇ 100ರ ಫಲಿತಾಂಶ ಸಾಧನೆ ಮಾಡುವ ವಿಶ್ವಾಸವಿದೆ’ ಎಂದು ವಿವರಿಸಿದರು.

ಪ್ರಭಾರ ಜಿಲ್ಲಾಧಿಕಾರಿ ಎಚ್.ವಿ.ದರ್ಶನ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಶಂಕರೇಗೌಡ, ಬಿಇಒಗಳಾದ ಮಾಧವರೆಡ್ಡಿ, ಉಮಾದೇವಿ, ಕೆಂಪಯ್ಯ, ಸೋಮೇಶ್, ಸಿದ್ದರಾಜು, ಬಿಆರ್‌ಸಿ ರಾಮಕೃಷ್ಣಪ್ಪ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT