ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ದಾಳಿ ಬೆದರಿಕೆ ಭಾರತಕ್ಕೆ ಮೂರನೇ ಸ್ಥಾನ

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸೈಬರ್ ದಾಳಿ ಬೆದರಿಕೆ: ಭಾರತಕ್ಕೆ ಮೂರನೇ ಸ್ಥಾನ

ಜಾಗತಿಕ ಸೈಬರ್ ದಾಳಿ ಬೆದರಿಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿ ಇದೆ ಎಂದು ಸೈಮಂಟಿಕ್‌ ಸಂಸ್ಥೆ ನಡೆಸಿದೆ ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಸಂಸ್ಥೆ ಜಾಗತಿಕವಾಗಿ ಸೈಬರ್ ದಾಳಿ ಮತ್ತು ಇಂಟರ್‌ನೆಟ್‌ ಹ್ಯಾಕಿಂಗ್ ಕುರಿತು ಅಧ್ಯಯನ ನಡೆಸುವ ಸಂಸ್ಥೆಯಾಗಿದೆ.

ಜಾಗತಿಕವಾಗಿ ಸೈಬರ್ ದಾಳಿ ಬೆದರಿಕೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದ್ದರೆ, ಚೀನಾ ಎರಡನೇ ಸ್ಥಾನ ಹಾಗೂ ಭಾರತ ಮೂರನೇ ಸ್ಥಾನದಲ್ಲಿ ಇದೆ ಎಂದು ಸೈಮಂಟಿಕ್ ಸಂಸ್ಥೆಯ ಏಷ್ಯಾ ಪೆಸಿಫಿಕ್‌ ವಿಭಾಗದ ಮಾರುಕಟ್ಟೆ ಮುಖ್ಯಸ್ಥರಾಗಿರುವ ತರುಣ್ ಕೌರ ತಿಳಿಸಿದ್ದಾರೆ.

ಭಾರತದಲ್ಲಿ ವೆಬ್‌ ದಾಳಿ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಪ್ರಮುಖವಾಗಿ ಇ–ಮೇಲ್‌ ಮತ್ತು ವೆಬ್‌ಲಿಂಕ್‌ ದುರುಪಯೋಗ ಪ್ರಕರಣಗಳಲ್ಲಿ ಭಾರತ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಮೊಬೈಲ್‌ಗಳಲ್ಲಿ ನುಸುಳುವ ಮಾಲ್‌ವೇರ್‌ ವೈರಸ್‌ನಲ್ಲೂ ಭಾರತ ಎರಡನೇ ಸ್ಥಾನದಲ್ಲಿದೆ.

ಭಾರತದಲ್ಲಿ ಇಂಟರ್‌ನೆಟ್ ಬಳಕೆ ಹೆಚ್ಚಳವಾಗುತ್ತಿರುವುದರಿಂದ ಹ್ಯಾಕರ್‌ಗಳು ಸೈಬರ್ ದಾಳಿ ನಡೆಸಿ ಹಣ ಕದಿಯುವ ಕೆಲಸ ಮಾಡುತ್ತಿದ್ದಾರೆ. ಕೆಲ ಹ್ಯಾಕರ್‌ಗಳು ಕಂಪನಿಗಳ ವೆಬ್‌ಸೈಟ್‌ ಹ್ಯಾಕ್‌ ಮಾಡಿ  ಮಾಲೀಕರಿಂದ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ. ಒಟ್ಟಾರೆ ಭಾರತ ಸೈಬರ್ ದಾಳಿ ಪ್ರಕರಣಗಳಲ್ಲಿ ಮೊದಲ ಐದು ಸ್ಥಾನಗಳಲ್ಲಿ ಇದೆ.

ಮಲೇಷ್ಯಾದ ಪ್ರವಾಸಿ ಆ್ಯಪ್‌

ಮಲೇಷ್ಯಾ ಸರ್ಕಾರ ವಿದೇಶಿ ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸಿ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಮೈ ಟೂರಿಸ್ಟ್‌ ಅಸಿಸ್ಟ್‌ (ಮೈ ಟಿಎ) ಎಂದು ಹೆಸರಿಡಲಾಗಿದೆ. ವಿದೇಶಿ ಪ್ರವಾಸಿಗರು ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ನಿರಾತಂಕವಾಗಿ ಮಲೇಷ್ಯಾ ಸುತ್ತಬಹುದಾಗಿದೆ.

ಮೈ ಟಿ.ಎ ಆ್ಯಪ್‌ನ ಮತ್ತೊಂದು ವಿಶೇಷ ಏನೆಂದರೆ, ತುರ್ತು ಕರೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರವಾಸಿಗರು ಸಂಕಷ್ಟ ಅಥವಾ ಅಪಾಯದಲ್ಲಿ ಸಿಲುಕಿದ್ದಾಗ ಉಚಿತ ತುರ್ತು ಸಂಖ್ಯೆಗೆ ಕರೆ ಮಾಡಿದರೆ   ಪೊಲೀಸರು ಕ್ಷಣ ಮಾತ್ರದಲ್ಲಿ ಸಹಾಯಕ್ಕೆ ದಾವಿಸುತ್ತಾರೆ ಎಂದು  ಸರ್ಕಾರ ತಿಳಿಸಿದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಮಾದರಿಯಲ್ಲಿ ಈ ಆ್ಯಪ್‌ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮೈ ಟಿ.ಎ ಆ್ಯಪ್‌ನಲ್ಲಿ  ಪ್ರವಾಸಿ ಸ್ಥಳಗಳು, ರಸ್ತೆ, ರೈಲು ಮಾರ್ಗಗಳು, ಹೋಟೆಲ್‌ಗಳು, ದರ ಮಾಹಿತಿ, ಆಸ್ಪತ್ರೆಗಳು, ಮಾಲ್‌ಗಳು ಸೇರಿದಂತೆ ಪ್ರವಾಸಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ದೊರೆಯುತ್ತದೆ. ವಿದೇಶಿ ಪ್ರವಾಸಿಗರು ಸ್ಥಳೀಯರ ನೆರವು ಪಡೆಯದೇ ಈ ಆ್ಯಪ್‌ ಮೂಲಕ ದೇಶ ಸುತ್ತಿ ಬರಬಹುದು.

ಅಂಗವಿಕಲತೆ ಬಿಂಬಿಸುವ ಎಮೋಜಿಗಳು

ಆ್ಯಪಲ್‌ ಕಂಪನಿಯು ಅಂಗವಿಕಲತೆಯನ್ನು ಬಿಂಬಿಸುವಂತಹ ಎಮೋಜಿಗಳನ್ನು ವಿನ್ಯಾಸ ಮಾಡಲು ಮುಂದಾಗಿದೆ. ಅಂಗವಿಕಲರಲ್ಲಿ ಜಾಗೃತಿ ಮೂಡಿಸಿ ಮತ್ತು ಸಮಾನ ಹಕ್ಕುಗಳಿಗಾಗಿ ಈ ಎಮೋಜಿಗಳನ್ನು ವಿನ್ಯಾಸ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಅಂಧರು, ದೈಹಿಕ ಅಂಗವಿಕಲರು, ಕಿವುಡು ಮತ್ತು ಮೂಗರು ಹಾಗೂ ಬಹುಅಂಗಾಂಗ ವೈಕಲ್ಯತೆಯನ್ನು ಪ್ರತಿನಿಧಿಸುವ 13 ಎಮೋಜಿಗಳನ್ನು ವಿನ್ಯಾಸ ಮಾಡಲಾಗುತ್ತಿದೆ. 2019ರ ವೇಳೆಗೆ ಈ ಎಮೋಜಿಗಳು ಆ್ಯಪಲ್‌ ಉತ್ಪನ್ನಗಳಲ್ಲಿ ದೊರೆಯಲಿವೆ.‌

ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರು

ಭಾರತದಲ್ಲಿ 20.5 ಕೋಟಿ ಜನರು ಭಾಷೆಯ ಸಮಸ್ಯೆಯಿಂದಾಗಿ ಇಂಟರ್‌ನೆಟ್ ಬಳಕೆ ಮಾಡುತ್ತಿಲ್ಲ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಇಂಟರ್‌ನೆಟ್ ಬಳಕೆ ಕುರಿತಂತೆ ಅಧ್ಯಯನ ನಡೆಸುವ ಐಎಐಎಎಂ  ಸಂಸ್ಥೆ ಈ ಸಮೀಕ್ಷೆ ನಡೆಸಿತ್ತು. ‘ಇಂಟರ್‌ನೆಟ್‌ ಇನ್ ಇಂಡಿಕ್‌’ ಶೀರ್ಷಿಕೆ ಅಡಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು.

2017ರ ಡಿಸೆಂಬರ್ ಅಂತ್ಯಕ್ಕೆ ಭಾರತದಲ್ಲಿ 48 ಕೋಟಿ ಜನರು ಇಂಟರ್‌ನೆಟ್ ಬಳಕೆದಾರರಿದ್ದಾರೆ. ಸಂಗೀತ ಮತ್ತು ವಿಡಿಯೊಗಳನ್ನು ಹೆಚ್ಚು  ಜನರು ನೋಡುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಇಂಗ್ಲಿಷ್ ಭಾಷೆಯ ಕಾರಣದಿಂದಾಗಿ 20.5 ಕೋಟಿ ಜನರು ಇಂಟರ್‌ನೆಟ್ ಬ್ರೌಸ್ ಮಾಡುವುದಿಲ್ಲ.

ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ

ಭಾರತದಲ್ಲಿ 5 ಜನರಲ್ಲಿ ಮೂವರು ವಾಹನ ಚಾಲನೆ ಮಾಡುವಾಗ ಮೊಬೈಲ್‌ ಬಳಕೆ ಮಾಡುತ್ತಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಜಪಾನ್ ದೇಶದ ವಾಹನ ತಯಾರಿಕ ಕಂಪನಿ ನಿಸ್ಸಾನ್ ಈ ಸಮೀಕ್ಷೆ ನಡೆಸಿದೆ.

ಉತ್ತರ ಭಾರತದಲ್ಲಿ ಶೇ 62 ರಷ್ಟು ಜನರು ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಈ ಪ್ರಮಾಣ ಕಡಿಮೆ ಇದೆ ಎಂದು ಹೇಳಲಾಗಿದೆ. 5 ಜನರಲ್ಲಿ ಒಬ್ಬರು ಮಾತ್ರ ಕಾನೂನು ಉಲ್ಲಂಘಿಸಿ ಮೊಬೈಲ್ ಬಳಕೆ ಮಾಡುತ್ತಾರೆ ಎಂದು ಹೇಳಲಾಗಿದೆ.

ಕೇರಳದಲ್ಲಿ ಅತಿ ವೇಗವಾಗಿ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚು. ಈ ವಿಷಯದಲ್ಲಿ ದೆಹಲಿ ಮತ್ತು ಪಂಜಾಬ್ ರಾಜ್ಯಗಳು ನಂತರದ ಸ್ಥಾನದಲ್ಲಿ ಇವೆ.

ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ 20 ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಿತ್ತು. 2 ಸಾವಿರಕ್ಕೂ ಹೆಚ್ಚು ಜನರನ್ನು ಸಂದರ್ಶನ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT