ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಪ್ರಶ್ನೆಯಿಲ್ಲ: ಸಂಸದ ಮುನಿಸ್ವಾಮಿ

ಶಿಸ್ತುಕ್ರಮ ಜರುಗಿಸುತ್ತೇವೆ
Last Updated 21 ಆಗಸ್ಟ್ 2021, 14:02 IST
ಅಕ್ಷರ ಗಾತ್ರ

ಕೋಲಾರ: ‘ಕಾಮಗಾರಿಗಳ ಗುಣಮಟ್ಟದ ವಿಚಾರದಲ್ಲಿ ರಾಜಿ ಪ್ರಶ್ನೆಯಿಲ್ಲ. ಕಾಮಗಾರಿ ಕಳಪೆಯಾಗಿದ್ದರೆ ಗುತ್ತಿಗೆದಾರರು ಎಷ್ಟೇ ದೊಡ್ಡವರಿದ್ದರೂ ಮತ್ತು ಅವರಿಗೆ ರಾಜಕಾರಣಿಗಳ ಶಿಫಾರಸು ಇದ್ದರೂ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾ ಗ್ರಾಮೀಣ ರಸ್ತೆಗಳ ಕುರಿತು ಇಲ್ಲಿ ಶನಿವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿ, ‘ನನ್ನ ಅಥವಾ ಯಾವುದೇ ಜನಪ್ರತಿನಿಧಿಯ ಹೆಸರು ಹೇಳಿಕೊಂಡು ಕಮಿಷನ್‌ ಕೇಳಿದರೆ ಕೊಡಬೇಡಿ. ಅಧಿಕಾರಿಗಳು ಯಾರಿಗೂ ನಯಾಪೈಸೆ ಕಮಿಷನ್‌ ಕೊಡುವ ಅಗತ್ಯವಿಲ್ಲ’ ಎಂದರು.

‘ಜಿಲ್ಲೆಯ 6 ತಾಲ್ಲೂಕಿನ ವಿವಿಧೆಡೆ 159.67 ಕಿ.ಮೀ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 106.06 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. 2000ದಲ್ಲಿ ಗ್ರಾಮ ಸಡಕ್ ಯೋಜನೆಗೆ ಚಾಲನೆ ನೀಡಿ ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯವೆಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಕೇಂದ್ರವು ಶೇ 60 ಮತ್ತು ರಾಜ್ಯ ಸರ್ಕಾರ ಶೇ 40 ಅನುದಾನ ನೀಡಲಿವೆ’ ಎಂದು ವಿವರಿಸಿದರು.

‘ಕೆಲವೆಡೆ ರಸ್ತೆಗಳ ಅಭಿವೃದ್ಧಿಗೆ ಒತ್ತುವರಿಯಿಂದ ಅಡ್ಡಿಯಾಗಿದೆ. ಯಾವುದೇ ಶಿಫಾರಸು ಇದ್ದರೂ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಬೇಕು. ಜನಪ್ರತಿನಿಧಿಗಳು ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ಕಾಮಗಾರಿ ಪೂರ್ಣಗೊಳಿಸಲು ಹಾಗೂ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಮಕ್ಕಳಿಂದಲೇ ಪರಿಶೀಲನೆ: ‘3 ಹಂತದಲ್ಲಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಪ್ರಮಾಣಿಕರಿಸಲಾಗುತ್ತದೆ. 3ನೇ ಹಂತದಲ್ಲಿ ಕೆಲ ಅಧಿಕಾರಿಗಳ ಮಕ್ಕಳೇ ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಆರೋಪವಿದೆ. ಇದನ್ನು ಸಹಿಸುವುದಿಲ್ಲ. ಅರ್ಹರಾಗಿರುವ ಮೂರನೇ ವ್ಯಕ್ತಿಯಿಂದ ಪ್ರಾಮಾಣಿಕವಾಗಿ ಕಾಮಗಾರಿ ಪರಿಶೀಲನೆ ಮಾಡಿಸಬೇಕು’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ಕಾಮಗಾರಿ ಪೂರ್ಣಗೊಂಡ ನಂತರ ನಿರ್ವಹಣೆಗೆ ಶೇ 25ರಷ್ಟು ಹಣ ಮೀಸಲಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಿಸಿದ ನಂತರ ಬಿಡುಗಡೆ ಮಾಡಬೇಕು. ಸಾಕಷ್ಟು ಕಡೆ ಸಮರ್ಪಕ ನಿರ್ವಾಹಣೆ ಇಲ್ಲದೆ ರಸ್ತೆಗಳು ಹದಗೆಟ್ಟಿವೆ. ಪಾದಚಾರಿ ರಸ್ತೆಗಳು, ಗಿಡ ಮರಗಳು, ಸೂಚನಾ ಫಲಕ ಇಲ್ಲದೆ ರಸ್ತೆಗಳು ಅವೈಜ್ಞಾನಿಕವಾಗಿವೆ. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಬೇಕು’ ಎಂದರು.

‘ಕಾಮಗಾರಿ ಸ್ಥಗಿತಗೊಳ್ಳು ಕಾರಣ ಏನೆಂದು ಪರಿಶೀಲಿಸಿ. ಪ್ರತಿ ತಾಲ್ಲೂಕಿನ ಬಗ್ಗೆ ವರದಿ ನೀಡಬೇಕು. ಅಧಿಕಾರಿಗಳ ಮಟ್ಟದಲ್ಲೇ ಸಮಸ್ಯೆ ಪರಿಹರಿಸಬೇಕು. ಅಮೃತ್‌ ಯೋಜನೆಯಡಿ ಉದ್ಯಾನಗಳಲ್ಲಿ ಗಿಡ ನೆಡದೆ ಬಿಲ್ ನೀಡಲಾಗಿದೆ. ಮುಂದೆ ಇಂತಹ ಅಕ್ರಮ ನಡೆಯಬಾರದು. ಪ್ರತಿ ತಾಲ್ಲೂಕಿನ ಕಾಮಗಾರಿಗಳ ವಿವರಗಳನ್ನು ಪ್ರತ್ಯೇಕವಾಗಿ ಛಾಯಾಚಿತ್ರ ಸಮೇತ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ಅನುದಾನವಿಲ್ಲ: ‘ಗ್ರಾಮ ಸಡಕ್ ಯೋಜನೆಯಲ್ಲಿ ಜಿಲ್ಲೆಯ 6 ತಾಲ್ಲೂಕುಗಳ ಪೈಕಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾತ್ರ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಂಡಿವೆ. 2020–21 ಹಾಗೂ 2021–22ನೇ ಸಾಲಿನಲ್ಲಿ ಜಿಲ್ಲೆಗೆ ಅನುದಾನ ಮಂಜೂರಾಗಿಲ್ಲ. ಈ ಬಗ್ಗೆ ಗಮನಹರಿಸಿ ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಮಂಜೂರು ಮಾಡಿಸಿ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮನವಿ ಮಾಡಿದರು.

ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್‌.ಎಂ.ನಾಗರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಂ.ವೆಂಕಟೇಶಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT