ಭಾನುವಾರ, ಜುಲೈ 3, 2022
23 °C
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್ ಹೇಳಿಕೆ

31ಕ್ಕೆ ವಿಶ್ವ ತಂಬಾಕು ರಹಿತ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‌‘ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಮೇ 31ರಂದು ಜಿಲ್ಲಾ ಕೇಂದ್ರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ನಾಗರಾಜ್ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತಂಬಾಕು ಸೇವನೆಯು ಆರೋಗ್ಯಕ್ಕೆ ಹಾನಿಕಾರಕ. ತಂಬಾಕುರಹಿತ ದಿನಾಚರಣೆಯ ಉದ್ದೇಶ ಮತ್ತು ಮಹತ್ವ ತಿಳಿಸಲು ಜಾಥಾ ಹಮ್ಮಿಕೊಂಡಿದ್ದು, ಸಂಘ-ಸಂಸ್ಥೆಗಳು, ಸಮಾಜ ಕಾರ್ಯಕರ್ತರು ಸೇರಿ ಜಾಥಾವನ್ನು ಪರಿಣಾಮಕಾರಿಯಾಗಿ ನಡೆಸಬೇಕು' ಎಂದರು.

‘ದೇಶದ ಸಂವಿಧಾನದ ಅನುಚ್ಛೇದ 21ರಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಜೀವನ ಮತ್ತು ಸ್ವಾತಂತ್ರ್ಯವನ್ನು ಕಾನೂನುರಹಿತವಾಗಿ ಕಿತ್ತುಕೊಳ್ಳುವ ಅಧಿಕಾರವಿಲ್ಲ. ಇದು ಮೂಲಭೂತ ಹಕ್ಕು. ಇದನ್ನು ಮಾನವನ ಹಕ್ಕು ಎಂದು ಸಹ ಪರಿಗಣಿಸಲಾಗಿದೆ. ಅಲ್ಲದೇ, ಸಂವಿಧಾನದ ಅನುಚ್ಛೇದ 47ರಲ್ಲಿ ಪ್ರತಿ ಭಾರತೀಯ ಪ್ರಜೆಯ ಜೀವನ ಮಟ್ಟ ಆರೋಗ್ಯಕರವಾಗಿರಬೇಕು’ ಎಂದು ಹೇಳಿದರು.

‘ಸಂವಿಧಾನದಲ್ಲಿ ಕಾನೂನು ರೂಪಿಸಿಕೊಳ್ಳಲಾಗಿದೆ. ಸಿಗರೇಟು ಮತ್ತು ಇತರೆ ತಂಬಾಕು ವಸ್ತುಗಳ ಬಳಕೆಯನ್ನು ನಿಷೇಧಿಸುವ ಕಾನೂನನ್ನು ಸರ್ಕಾರ ಜಾರಿಗೆ ತಂದಿದೆ. ಈ ಕಾನೂನಿನಡಿ ಸಾರ್ವಜನಿಕ ಸ್ಥಳಗಳಾದ ನ್ಯಾಯಾಲಯ, ಆಸ್ಪತ್ರೆ, ಬಸ್ ನಿಲ್ದಾಣ, ಶಾಲಾ-ಕಾಲೇಜು ಬಳಿ ಧೂಮಪಾನ ಮಾಡುವುದನ್ನು ನಿರ್ಬಂಧಿಸಲಾಗಿದೆ’ ಎಂದು ವಿವರಿಸಿದರು.

ಹೃದಯಾಘಾತಕ್ಕೆ ಕಾರಣ: ‘ವಾಸಿಯಾಗದಂತಹ ಕಾಯಿಲೆಗಳಾದ ಕ್ಯಾನ್ಸರ್, ಹೃದಯಾಘಾತಕ್ಕೆ ಧೂಮಪಾನ ಮೂಲ ಕಾರಣ. ಧೂಮಪಾನ ಮಾಡುವ ವ್ಯಕ್ತಿಗಿಂತಲೂ ಅವನ ಪಕ್ಕದಲ್ಲಿರುವ ವ್ಯಕ್ತಿಗಳ ಆರೋಗ್ಯಕ್ಕೆ ಸಿಗರೇಟು ಹೊಗೆಯಿಂದ ಸಮಸ್ಯೆಯಾಗುತ್ತದೆ. ಜನರು ಉತ್ತಮ ಜೀವನ ನಡೆಸಲು ತಂಬಾಕು ಸೇವನೆ ವಿರುದ್ಧ ನಾವೆಲ್ಲಾ ಒಗ್ಗೂಡಿ ಹೋರಾಡಬೇಕು. ವಿಶ್ವ ತಂಬಾಕು ದಿನಾಚರಣೆ ಜಾಥಾವನ್ನು ಎಲ್ಲರೂ ಬೆಂಬಲಿಸೋಣ’ ಎಂದು ಮನವಿ ಮಾಡಿದರು.

‘ಜೂನ್ 25ಕ್ಕೆ ಬೃಹತ್ ಜನತಾ ನ್ಯಾಯಾಲಯ ಏರ್ಪಡಿಸಲಾಗಿದೆ. ಜನತಾ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಪಡಿಸಲು ವಕೀಲರು ಪ್ರೋತ್ಸಾಹ ನೀಡುತ್ತಿದ್ದಾರೆ. ಇದರ ಉದ್ದೇಶ ಕಾನೂನು ಸಾಕ್ಷರತೆ ಮತ್ತು ಕಾನೂನು ನೆರವು ರೂಪಿಸುವುದು. ಅನೇಕ ರೀತಿಯ ಮೋಟಾರು ವಾಹನ ಪ್ರಕರಣ, ಕ್ರಿಮಿನಲ್ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಗುವುದು, ಜನರು ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

ಶಿಕ್ಷಾರ್ಹ ಅಪರಾಧ: 18 ವರ್ಷದೊಳಗಿನ ವ್ಯಕ್ತಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಜಿಲ್ಲೆಯಲ್ಲಿ ಹೆಚ್ಚಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಿಗರೇಟ್ ಸೇವನೆಯಿಂದ 10 ಜನ ಬದಲಾದರೂ ಮುಂದೆ ಮತ್ತಷ್ಟು ಜನ ಬದಲಾಗುತ್ತಾರೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ರಘುಪತಿಗೌಡ, ಜಿಲ್ಲಾ ತಂಬಾಕು ಘಟಕದ ಸಮಾಲೋಚಕ ಮೊಹಮ್ಮದ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.