ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂತು ಹುಳು ನಿವಾರಣೆ ಮಾತ್ರೆ ವಿತರಿಸಿ

ಮಕ್ಕಳು ಆರೋಗ್ಯವಂತರಾಗಿದ್ದರೆ ಶೈಕ್ಷಣಿಕ ಪ್ರಗತಿ: ಜಿಲ್ಲಾಧಿಕಾರಿ ಹೇಳಿಕೆ
Last Updated 23 ಜನವರಿ 2019, 14:22 IST
ಅಕ್ಷರ ಗಾತ್ರ

ಕೋಲಾರ: ‘ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಫೆ.10ರಂದು 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ಜಂತು ಹುಳು ನಿವಾರಣೆಯ ಅಲ್ಬೆಂಡಝೋಲ್ ಮಾತ್ರೆ ವಿತರಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆ ಸಂಬಂಧ ಇಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಮಕ್ಕಳಲ್ಲಿನ ರಕ್ತಹೀನತೆ ಸಮಸ್ಯೆ ನಿವಾರಣೆಗಾಗಿ ಸರ್ಕಾರ 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೆ 2 ಬಾರಿ ಜಂತು ಹುಳು ನಿವಾರಣೆ ಮಾತ್ರೆಯನ್ನು ಉಚಿತವಾಗಿ ನೀಡುತ್ತಿದೆ’ ಎಂದರು.

‘ಮಕ್ಕಳು ಆರೋಗ್ಯವಂತರಾಗಿದ್ದರೆ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ. ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಉಚಿತವಾಗಿ ಮಾತ್ರೆ ವಿತರಿಸಬೇಕು. ಅಂದು ಮಾತ್ರೆ ಪಡೆಯದ ಮಕ್ಕಳಿಗೆ ಇನ್ನೊಂದು ದಿನ ನೀಡಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಮಾತ್ರೆ ಪಡೆಯುವಂತೆ ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡಿ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

‘ಜಂತು ಹುಳುವಿನಿಂದ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ಹಸಿವು ಅಗದಿರುವುದು. ನಿಶಕ್ತಿ, ಹೊಟ್ಟೆ ನೋವು, ವಾಂತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಮಾತ್ರೆ ನುಂಗುವುದರಿಂದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ’ ಎಂದು ವಿವರಿಸಿದರು.

ಪ್ರತಿ ವರ್ಷ ಆಚರಣೆ: ‘ಪ್ರತಿ ವರ್ಷ ಫೆ.10ರಂದು ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನ ಆಚರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಈ ಬಾರಿ 4,94,732 ಮಕ್ಕಳಿಗೆ ಜಂತು ಹುಳು ನಿವಾರಣೆ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌ ಮಾಹಿತಿ ನೀಡಿದರು.

‘ಪೌಷ್ಠಿಕ ಆಹಾರ ಸೇವಿಸಿದರೂ ಜಂತು ಹುಳು ಬಾಧೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಸಮಸ್ಯೆ ಉಂಟಾಗಿ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳಲಿದೆ. ಆದ್ದರಿಂದ 1 ವರ್ಷದಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಮಾತ್ರೆ ನೀಡಲಾಗುವುದು’ ಎಂದು ಹೇಳಿದರು.

‘1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ, 2 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆ ಕೊಡಬೇಕು. ಎಲ್ಲಾ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಮಾತ್ರೆ ದೊರೆಯುತ್ತದೆ’ ಎಂದು ತಿಳಿಸಿದರು.

ಸ್ವಚ್ಛತೆಗೆ ಒತ್ತು ಕೊಡಿ: ‘ಕೇಂದ್ರ ಸರ್ಕಾರವು 2015ರ ಫೆಬ್ರುವರಿಯಲ್ಲಿ ದೇಶದ 11 ರಾಜ್ಯಗಳಲ್ಲಿ ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆ ಆರಂಭಿಸಿತು. ಉಳಿದ ರಾಜ್ಯಗಳಲ್ಲಿ 2016ರ ಫೆಬ್ರುವರಿಯಲ್ಲಿ ಆರಂಭವಾಯಿತು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌ ಮಾಹಿತಿ ನೀಡಿದರು.

‘ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ ಪ್ರಕಾರ ಭಾರತದಲ್ಲಿ 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳ ಪೈಕಿ ಶೇ 68ರಷ್ಟು ಮಂದಿ ಜಂತು ಹುಳು ಸೋಂಕಿನಿಂದ ನರಳುತ್ತಿದ್ದಾರೆ. ಬಯಲು ಬಹಿರ್ದೆಸೆಯಿಂದ ಜಂತು ಹುಳುಗಳು ದೇಹ ಸೇರುತ್ತವೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ರಕ್ತಹೀನತೆ ಸಮಸ್ಯೆ ಎದುರಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಗೆ ಒತ್ತು ಕೊಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT