ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಂಘದ ಚುನಾವಣೆ: ಯಲುವಳ್ಳಿ ರಮೇಶ್ ಮರು ಆಯ್ಕೆ

ಒಕ್ಕಲಿಗರ ಸಂಘದ ಚುನಾವಣೆ: ಮತ ಎಣಿಕೆ ಮುಕ್ತಾಯ
Last Updated 15 ಡಿಸೆಂಬರ್ 2021, 14:36 IST
ಅಕ್ಷರ ಗಾತ್ರ

ಕೋಲಾರ: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಚಿಕ್ಕಬಳ್ಳಾಪುರದ ಯಲುವಳ್ಳಿ ರಮೇಶ್ಸತತ 4ನೇ ಬಾರಿಗೆ ಆಯ್ಕೆಯಾಗಿದ್ದಾರೆ. ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ಹಾಗೂ ಕೋಲಾರದ ಡಾ.ಡಿ.ಕೆ.ರಮೇಶ್ ಸಹ ಜಯಭೇರಿ ಬಾರಿಸಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯ ಮತ ಎಣಿಕೆಯು ನಗರದ ಗೋಕುಲ ಕಾಲೇಜಿನಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆವರೆಗೆ ನಡೆಯಿತು. ಸಾರ್ವತ್ರಿಕ ಚುನಾವಣೆಯನ್ನು ಮೀರಿಸುವ ಮಟ್ಟಿಗೆ ಚುನಾವಣೆ ನಡೆದಿತ್ತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಅಂತಿಮವಾಗಿ 12 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

ಪ್ರತಿ ತಾಲ್ಲೂಕಿನ ಮತಗಳನ್ನು ಪ್ರತ್ಯೇಕವಾಗಿ ಎಣಿಕೆ ಮಾಡಲಾಯಿತು. ಹಿಂದಿನ ಬಾರಿ ಚುನಾವಣೆಗೆ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದ ಡಾ.ಡಿ.ಕೆ.ರಮೇಶ್ ಅವರು ದಾಖಲೆಯ 40,435 ಮತ ಗಳಿಸಿದರು. ಅವರ ಸಿಂಡಿಕೇಟ್‌ನ ಕೋನಪ್ಪರೆಡ್ಡಿ 32,451 ಮತ ಪಡೆದರು. ಆದರೆ, ಅವರ ಸಿಂಡಿಕೇಟ್‌ನಲ್ಲಿದ್ದ ಮತ್ತೊಬ್ಬ ಅಭ್ಯರ್ಥಿ ಚಿಕ್ಕಬಳ್ಳಾಪುರ ನಗರಸಭೆ ಮಾಜಿ ಅಧ್ಯಕ್ಷ ಎಂ.ಪ್ರಕಾಶ್ 16,069 ಮತ ಪಡೆದು ಹಿನ್ನಡೆ ಅನುಭವಿಸಿದರು.

ಗೆಲುವಿನ ಓಟ ಮುಂದುವರಿಸುವ ಉಮೇದಿನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಯಲುವಳ್ಳಿ ರಮೇಶ್ ಅವರನ್ನು ಸೋಲಿಸಲು ಎದುರಾಳಿಗಳು ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಅಂತಿಮವಾಗಿ ರಮೇಶ್‌ ಅವರು 24,676 ಮತ ಪಡೆದು ಗೆಲುವಿನ ನಗೆ ಬೀರಿದರು.

ಸಚಿವರ ಪ್ರಚಾರ: ಕೋನಪ್ಪರೆಡ್ಡಿ, ಡಾ.ಡಿ.ಕೆ.ರಮೇಶ್ ಹಾಗೂ ಚಿಕ್ಕಬಳ್ಳಾಪುರದ ಪ್ರಕಾಶ್ ಅವರು ಸಿಂಡಿಕೇಟ್‌ ಮಾಡಿಕೊಂಡು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು. ಈ ಮೂವರು ಒಕ್ಕಲಿಗ ಸಮುದಾಯಕ್ಕೆ ಹಲವು ಭರವಸೆ ನೀಡಿದ್ದರು.ಕೋನಪ್ಪರೆಡ್ಡಿ ಮತ್ತು ಯಲುವಳ್ಳಿ ರಮೇಶ್ ಸಿಂಡಿಕೇಟ್‌ ನಡುವೆ ನೇರ ಹಣಾಹಣಿಯಿತ್ತು. ಕೋನಪ್ಪರೆಡ್ಡಿ ಸಿಂಡಿಕೇಟ್ ಪರ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಖಾಡಕ್ಕಿಳಿದು ಪ್ರಚಾರ ನಡೆಸಿದ್ದರು.

ಅಭಿವೃದ್ಧಿಗೆ ಶ್ರಮಿಸುತ್ತೇನೆ: ಫಲಿತಾಂಶ ಘೋಷಣೆ ಬಳಿಕ ಮಾತನಾಡಿದ ಯಲುವಳ್ಳಿ ರಮೇಶ್, ‘ನಾನು ಭರವಸೆ ನೀಡಿದಂತೆ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಾನು ಹೇಳಿದ್ದನ್ನೇ ಮಾಡುತ್ತೇನೆ. ನನಗೆ ಮತ ನೀಡಿದ ಕುಲಭಾಂದವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.

ಪರಾಜಿತ ಅಭ್ಯರ್ಥಿ ಪ್ರಕಾಶ್ ಮಾತನಾಡಿ, ‘ಚುನಾವಣೆಯಲ್ಲಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಸೋಲಾಯಿತು. ಸೋಲಿಗೆ ಧೃತಿಗೆಡದೆ ಸಮುದಾಯದ ಸೇವೆ ಮುಂದುವರಿಸುತ್ತೇನೆ’ ಎಂದು ಭರವಸೆ ನೀಡಿದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿಜೇತ ಅಭ್ಯರ್ಥಿಗಳು ಬೆಂಬಲಿಗರ ಜತೆ ವಿಜಯೋತ್ಸವ ಆಚರಿಸಿದರು. ಬೆಂಬಲಿಗರು ಗೆದ್ದ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT