ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಿಂಗಳಲ್ಲಿ ಯರಗೋಳ್‌ ನೀರು ಪೂರೈಕೆ

ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು
Last Updated 8 ಆಗಸ್ಟ್ 2022, 4:44 IST
ಅಕ್ಷರ ಗಾತ್ರ

ಬಂಗಾರಪೇಟೆ: ‘ನಾಲ್ಕು ತಿಂಗಳಲ್ಲಿ ಕೋಲಾರ, ಬಂಗಾರಪೇಟೆ, ಮಾಲೂರು ತಾಲ್ಲೂಕುಗಳಿಗೆ ನೀರು ಹರಿಸುವ ಕೆಲಸ ಮಾಡುತ್ತೇನೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಭರವಸೆ ನೀಡಿದರು.

ತಾಲ್ಲೂಕಿನ ಯರಗೋಳ್ ಜಲಾಶಯ ಬಳಿ ಬಿಜೆಪಿ ಏರ್ಪಡಿಸಿದ್ದ ‘ಯರಗೋಳ್ ಡ್ಯಾಂಗೆ ಬಾಗಿನ ಅರ್ಪಣೆ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ತಡ ಮಾಡದೆ ನಾಲ್ಕು ತಿಂಗಳ ಒಳಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

‘ರಾಜ್ಯ ಹಲವೆಡೆ ನಗರಾಭಿವೃದ್ಧಿಗಾಗಿ ಸರ್ಕಾರ ₹9,300 ಕೋಟಿ ವ್ಯಯ ಮಾಡುತ್ತಿದೆ. ಯರಗೋಳ್ ಯೋಜನೆಗೆ ₹160 ಕೋಟಿ ಬಿಡುಗಡೆ ಮಾಡಿದ್ದು, ಅದನ್ನು ಪರಿಷ್ಕರಿಸಿ ₹185 ಕೋಟಿಗೆ ಹೆಚ್ಚಿಸಲಾಗಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ವೈ.ಎ ನಾರಾಯಣಸ್ವಾಮಿ ಮಾತನಾಡಿ, ‘ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮತ್ತು ಬಿ.ಪಿ.ವೆಂಕಟಮುನಿಯಪ್ಪ ಅವರ ಶ್ರಮದಿಂದಲೇ ಡ್ಯಾಂ ನಿರ್ಮಾಣ ಕಾಮಗಾರಿ ನಡೆಯಿತು. ಆದರೆ ಇಲ್ಲಿನ ಶಾಸಕರು ಎಲ್ಲ ನಾನೇ ಮಾಡಿಸಿದ್ದು ಎಂದು ಭಾಷಣ ಬಿಗಿದಿದ್ದಾರೆ. ಮದುವೆಯಾಗಲಿ, ತಿಥಿಯಾಗಲಿ ನನ್ನಿಂದಲೇ ಎಂದು ಹೇಳುತ್ತಾರೆ. ಮದುವೆಗೂ ತಿಥಿಗೂ ವ್ಯತ್ಯಾಸ ಗೊತ್ತಿಲ್ಲದ ಎಷ್ಟೋ ರಾಜಕಾರಣಿಗಳು ಜಿಲ್ಲೆಯಲ್ಲಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘2013ರಿಂದ 2018ರ ತನಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ನೀವೇ ಶಾಸಕರಾಗಿದ್ರಿ. ನಿಮ್ಮದೇ ಸರ್ಕಾರವಿತ್ತು. ಆದರೆ ಆ ಸಂದರ್ಭ ಏನು ಪ್ರಗತಿ ತೋರಿಸಿದ್ದೀರಿ. ವಿಧಾನ ಸಭೆಯಲ್ಲಿ ಎಂದಾದರೂ ಡ್ಯಾಂ ಬಗ್ಗೆ ಮಾತನಾಡಿದಿರಾ ಎಂದು ಶಾಸಕರನ್ನು ಕುಟುಕಿದರು.

ಸಿದ್ದರಾಮಯ್ಯ–ಡಿಕೆಶಿ ಅಪ್ಪುಗೆಗೆ ಮುನಿರತ್ನ ಲೇವಡಿ:‘ದಾವಣಗೆರೆಯಲ್ಲಿ ಈಚೆಗೆ ಕಾಂಗ್ರೆಸ್‌ನಿಂದ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅಪ್ಪುಗೆಯು ಅನೈತಿಕ ಸಂಬಂಧದಂತೆ ಇದೆ. ರಾಹುಲ್‌ ಗಾಂಧಿ ಹೇಳಿದ್ದರಿಂದ ಇಬ್ಬರು ಅಪ್ಪಿಕೊಂಡಿದ್ದಾರೆ. ಇದು ಅಕ್ರಮ ಅಲ್ಲದೆ ಮತ್ತಿನ್ನೇನು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಲೇವಡಿ ಮಾಡಿದರು.

ಬಿಜೆಪಿಯಲ್ಲಿ ಇರುವವರು ಅಭಿವೃದ್ಧಿ ಮಾಡುವವರು. ಕಾಂಗ್ರೆಸ್ ಬೃಹನ್ನಳೆ ಇದ್ದಂತೆ. ಅವರಿಗೆ ಅಭಿವೃದ್ಧಿ ಬೇಕಿಲ್ಲ. ರಸ್ತೆಗಳಲ್ಲಿ ಎರಡೆರಡು ಅಡಿ ಗುಂಡಿಗಳಿದ್ದರೂ ಟಿ.ವಿ ಮುಂದೆ ಚೆನ್ನಾಗಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಬಿ.ಪಿ.ವೆಂಕಟಮುನಿಯಪ್ಪ, ಮಾಲೂರು ಮಾಜಿ ಶಾಸಕ ಮಂಜುನಾಥ್, ಕೆಜಿಎಫ್ ಮಾಜಿ ಶಾಸಕ ವೈ.ಸಂಪಗಿ ಮಾತನಾಡಿದರು. ವೈ.ಸಂಪಂಗಿ, ಕಮಲ್, ಬುಜ್ಜಿ ಅವರು ಯರಗೋಳ್ ಯೋಜನೆ ನೀರನ್ನು ಕೆಜಿಎಫ್‌ಗೆ ವಿಸ್ತರಿಸುವಂತೆ ಒತ್ತಾಯಿಸಿ ಮುನಿರತ್ನ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ವೇಣುಗೋಪಾಲ್, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಾಸುದೇವ್, ಜಿಲ್ಲಾಧಿಕಾರಿ ವೆಂಕಟರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಕೇಶ್‌ಕುಮಾರ್, ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಪ್ರಧಾನ ವ್ಯವಸ್ಥಾಪಕ ಮೋಹನ್, ಕಾರ್ಯಪಾಲಕ ಎಂಜಿನಿಯರ್ ರವೀಂದ್ರ, ಎಸ್‌.ಪಿ ಡಾ.ಧರಣೀದೇವಿ, ತಹಶೀಲ್ದಾರ್ ಎಂ.ದಯಾನಂದ, ಮುಖಂಡ ಬಿ.ವಿ.ಮಹೇಶ್, ಕೆ.ಚಂದ್ರಾರೆಡ್ಡಿ ವಿಜಿಕುಮಾರ್, ನಾಗೇಶ್, ಶೇಷು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT