ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ– ಗಾಳಿಗೆ ನೆಲಕಚ್ಚಿದ ಬೆಳೆ: ₹1.31 ಕೋಟಿ ನಷ್ಟ: ಅನ್ನದಾತರಿಗೆ ಸಂಕಷ್ಟ

ಅಧಿಕಾರಿಗಳ ಜಂಟಿ ಸಮೀಕ್ಷೆ
Last Updated 22 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ವಿವಿಧೆಡೆ ಹಿಂದಿನ ವಾರ ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮಾವು ಸೇರಿದಂತೆ ಸುಮಾರು ₹ 1.31 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿವೆ.

ಏ.18 ಹಾಗೂ ಏ.20ರಂದು ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು ತಾಲ್ಲೂಕಿನಲ್ಲಿ ಗುಡುಗು ಸಹಿತ ಮಳೆಯಾಗಿತ್ತು. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಳೆಗಿಂತ ಗಾಳಿಯ ಪ್ರಮಾಣ ಹೆಚ್ಚಿತ್ತು. ಗಾಳಿಯ ತೀವ್ರತೆಗೆ ಮಾವಿನ ಕಾಯಿಗಳು ಉದುರಿವೆ. ಹಲವೆಡೆ ಮಾವಿನ ಮರದ ಕೊಂಬೆಗಳು ತುಂಡಾಗಿ ಬಿದ್ದಿವೆ.

ಪಪ್ಪಾಯ (ಪರಂಗಿ), ಬಾಳೆ ಗಿಡಗಳು ಸಂಪೂರ್ಣ ನೆಲಕಚ್ಚಿವೆ. ಕಲ್ಲಂಗಡಿ, ಕೋಸು, ದಪ್ಪ ಮೆಣಸಿನಕಾಯಿ, ಕ್ಯಾರೆಟ್‌ ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ, ವೈ.ಹೊಸಕೋಟೆ, ಹಾರ ಮಾಕಲಹಳ್ಳಿ, ಚೌಡಹಳ್ಳಿ, ನಂದಿಹಳ್ಳಿ, ಚಲ್ದಿಗಾನಹಳ್ಳಿ, ಮೊಗಲಹಳ್ಳಿ, ಕುರುಬರಹಳ್ಳಿ, ಅಂಚಿಗಾನಹಳ್ಳಿ ಮುಳಬಾಗಿಲು ತಾಲ್ಲೂಕಿನ ಅಂಗೊಂಡಹಳ್ಳಿಯ ರೈತರ ಜಮೀನುಗಳಲ್ಲಿ ಬೆಳೆ ನಾಶವಾಗಿದೆ.

ಮಳೆಯಿಂದ ಒಟ್ಟಾರೆ 302 ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಈ ಪೈಕಿ 269 ಹೆಕ್ಟೇರ್‌ನಷ್ಟು ದೀರ್ಘಕಾಲಿಕ ಬೆಳೆಗಳು ಹಾಗೂ 33.22 ಹೆಕ್ಟೇರ್‌ನಷ್ಟು ವಾರ್ಷಿಕ ಬೆಳೆಗಳು ನಾಶವಾಗಿವೆ. ಮಳೆಯು ಮುಖ್ಯವಾಗಿ ಮಾವಿಗೆ ದೊಡ್ಡ ಪೆಟ್ಟು ಕೊಟ್ಟಿದ್ದು, 270 ಹೆಕ್ಟೇರ್‌ ಮಾವು ಬೆಳೆ ನಾಶವಾಗಿದೆ.

ಬರ ಪರಿಸ್ಥಿತಿ ನಡುವೆಯೂ ರೈತರು ಟ್ಯಾಂಕರ್‌ ಮತ್ತು ಕೃಷಿ ಹೊಂಡದ ನೀರು ಬಳಸಿಕೊಂಡು ಬೆಳೆ ಬೆಳೆದಿದ್ದರು. ಪಪ್ಪಾಯ, ಬಾಳೆ ಹಣ್ಣಿನ ಕೊಯ್ಲು ಆರಂಭವಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ದೊಡ್ಡ ಆಘಾತ ನೀಡಿದೆ. ಬರದಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು ಈಗ ಮಳೆಯಿಂದ ಬೆಳೆ ಕಳೆದುಕೊಂಡಿದ್ದಾರೆ.

ಕೊಯ್ಲಿಗೆ ಬಂದಿದ್ದ ಬೆಳೆಯು ಮಳೆಯಿಂದ ನಾಶವಾಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಾಶವಾಗಿರುವ ಜಮೀನುಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರನ್ನು ಭೇಟಿಯಾದ ಅಧಿಕಾರಿಗಳು ಬೆಳೆಗೆ ಮಾಡಿದ್ದ ಖರ್ಚು ಮತ್ತು ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಿದರು.

ದಿಕ್ಕು ತೋಚುತ್ತಿಲ್ಲ: ‘ಬರ ಪರಿಸ್ಥಿತಿ ನಡುವೆಯೂ ಹಣ ಕೊಟ್ಟು ಟ್ಯಾಂಕರ್‌ ನೀರು ಖರೀದಿಸಿ ಮಾವು ಹಾಗೂ ಬಾಳೆ ಬೆಳೆಗೆ ಹಾಯಿಸಿದ್ದೆ. ಟ್ಯಾಂಕರ್‌ ನೀರಿಗೆ ಸುಮಾರು ₹ 2 ಲಕ್ಷ ಖರ್ಚು ಮಾಡಿದ್ದೆ. ಈ ಬಾರಿ ಮಾವು ಮತ್ತು ಬಾಳೆ ಗಿಡಗಳು ಉತ್ತಮ ಫಸಲು ಬಿಟ್ಟಿದ್ದವು. ಮಳೆಯಿಂದ ಬೆಳೆ ನಾಶವಾಗಿದ್ದು, ದಿಕ್ಕು ತೋಚದಂತಾಗಿದೆ’ ಎಂದು ಅಂಚಿಗಾನಹಳ್ಳಿಯ ರೈತ ಗೋಪಾಲಗೌಡ ಅಳಲು ತೋಡಿಕೊಂಡರು.

‘ಮಳೆ– ಗಾಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಗಾಳಿಯ ತೀವ್ರತೆಗೆ ಬಾಳೆ, ಪರಂಗಿ ಮರಗಳು ನೆಲಕ್ಕುರುಳಿವೆ. ಬಡ್ಡಿ ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ಮಳೆ– ಗಾಳಿಗೆ ಮಣ್ಣು ಪಾಲಾಗಿದೆ’ ಎಂದು ಕುರುಬರಹಳ್ಳಿಯ ರೈತರು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT