ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 233 ಕೋಟಿ ಕ್ರಿಯಾ ಯೋಜನೆಗೆ ಜಿ.ಪಂ ಸಾಮಾನ್ಯ ಸಭೆ ಒಪ್ಪಿಗೆ

ನೀಲಗಿರಿ ಮರ ತೆರವಿಗೆ ಮನವಿ
Last Updated 21 ಸೆಪ್ಟೆಂಬರ್ 2019, 14:40 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಅಭಿವೃದ್ಧಿ ಸಂಬಂಧ ವಿವಿಧ ಇಲಾಖೆಗಳ ಸುಮಾರು ₹ 233 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಇಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಜಿ.ಪಂ ಅಧ್ಯಕ್ಷೆ ಗೀತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಪ್ರಭಾರ) ಜೆ.ಮಂಜುನಾಥ್‌, ‘33 ಇಲಾಖೆ ಅಧಿಕಾರಿಗಳ ವೇತನಕ್ಕೆ ₹ 64.24 ಕೋಟಿ, ವೇತನೇತರ ವೆಚ್ಚಕ್ಕೆ ₹ 168.95 ಕೋಟಿ ಸೇರಿದಂತೆ ₹ 233.20 ಕೋಟಿ ಹಂಚಿಕೆಯಾಗಿದೆ. ಇದರಲ್ಲಿ ಸಿವಿಲ್ ಕಾಮಗಾರಿಗೆ ₹ 130 ಕೋಟಿ, ಎಸ್‌ಸಿಪಿಗೆ ₹ 12.57 ಕೋಟಿ, ಟಿಎಸ್‌ಪಿ ಅನುದಾನ ₹ 2.37 ಕೋಟಿ ಹಂಚಿಕೆ ಮಾಡಲಾಗಿದೆ’ ಎಂದು ವರದಿ ಮಂಡಿಸಿದರು.

ವೇತನೇತರ ಅನ್ವಯ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನವನ್ನು 6 ತಾಲ್ಲೂಕುಗಳಿಗೆ ಸಮನಾಗಿ ಹಂಚಿಕೆ ಮಾಡಿ ಕ್ಷೇತ್ರದ ಸದಸ್ಯರು ಸೂಚಿಸಿದ ಕಾಮಗಾರಿ ಕೈಗೊಳ್ಳಬೇಕೆಂದು ಷರತ್ತು ವಿಧಿಸಲಾಯಿತು. ಈ ಕ್ರಿಯಾಯೋಜನೆಗೆ ಸರ್ವಾನುಮತದ ಒಪ್ಪಿಗೆ ದೊರೆಯಿತು.

‘ಜಿಲ್ಲೆಯಲ್ಲಿ ನೀಲಗಿರಿ ಮರಗಳನ್ನು ಬುಡಸಮೇತ ತೆರವುಗೊಳಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಸದಸ್ಯ ಸಿ.ಎಸ್‌.ವೆಂಕಟೇಶ್‌, ‘ಮೊದಲು ಸರ್ಕಾರಿ ಜಾಗದಲ್ಲಿನ ನೀಲಗಿರಿ ಮರ ತೆರವುಗೊಳಿಸಿ. ಆಗ ರೈತರೇ ಸ್ವಇಚ್ಛೆಯಿಂದ ನೀಲಗಿರಿ ತೆರವುಗೊಳಿಸುತ್ತಾರೆ’ ಎಂದು ಹೇಳಿದರು.

‘ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 61 ಕಡೆ ಕೆರೆ ಮತ್ತು ಗೋಮಾಳ ಪ್ರದೇಶದಲ್ಲಿನ ನೀಲಗಿರಿ ಮರ ತೆರವು ಮಾಡಿದ್ದರಿಂದ ₹ 13 ಕೋಟಿ ಆದಾಯ ಬಂದಿದೆ. ಇದರಲ್ಲಿ ಶೇ 50ರಷ್ಟು ಹಣವನ್ನು ಗ್ರಾ.ಪಂಗಳಿಗೆ ನೀಡಲಾಗಿದೆ. 10 ಗ್ರಾ.ಪಂಗಳಿಂದ ನೀಲಗಿರಿ ಮರಗಳ ಹರಾಜಿಗೆ ಪ್ರಸ್ತಾವ ಬಂದಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ) ವಿ.ದೇವರಾಜ್ ವಿವರಿಸಿದರು.

‘ಮರ ಹರಾಜಿನ ಆದಾಯದಲ್ಲಿ ₹ 6 ಕೋಟಿಯನ್ನು ಅರಣ್ಯೀಕರಣ ಹಾಗೂ ಸಂಬಂಧಿತ ಚಟುವಟಿಕೆಗಳಿಗೆ ಮೀಸಲಿಡಲಾಗಿದ್ದು, ಗ್ರಾಮೀಣ ಭಾಗಗದಲ್ಲಿ ಟ್ರಿ–ಪಾರ್ಕ್ ಮಾಡಬಹುದು. ಇದಕ್ಕೆ ಅನುಮೋದನೆ ನೀಡಿ’ ಎಂದು ಕೋರಿದರು.

ದೂರು ದಾಖಲಿಸಿ: ‘ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಅರಣ್ಯ ಇಲಾಖೆಯಿಂದ ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್, ಸಿಲಿಂಡರ್ ವಿತರಿಸಲು ಕೇದಾರ್ ಗ್ಯಾಸ್ ಎಜೆನ್ಸಿಗೆ ಹಣ ಮಂಜೂರಾಗಿದೆ. ಆದರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರು ಫಲಾನುಭವಿಗಳನ್ನು ಗುರುತಿಸಿಲ್ಲ. ಆದ ಕಾರಣ ಅವರ ವಿರುದ್ಧ ದೂರು ದಾಖಲಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಜಿ.ಪಂ ಸದಸ್ಯ ಅರುಣ್‌ಪ್ರಸಾದ್, ‘ಚಕ್ರಪಾಣಿ ಯಾರೆಂದು ಯಾರಿಗೂ ಗೊತ್ತಿಲ್ಲ. ಅವರ ಮುಖ ಸಹ ನೋಡಿಲ್ಲ. ಅವರು ಸಭೆಗೂ ಬಂದಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಅನುದಾನ ದುರುಪಯೋಗ ಮಾಡಿರುವ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು’ ಎಂದು ಆಗ್ರಹಿಸಿದರು.

ಡಿಡಿಪಿಐಗೆ ತರಾಟೆ: ‘ಇಲಾಖೆಯಿಂದ ಪ್ರೌಢ ಶಾಲೆಗಳ ಪಿಠೋಪಕರಣಕ್ಕೆ 2017–18 ಮತ್ತು 2018-19ನೇ ಸಾಲಿನಲ್ಲಿ ಮೀಸಲಿಟ್ಟ ಅನುದಾನ ಏನಾಯಿತು ಎಂಬ ಮಾಹಿತಿಯಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಕೆ.ರತ್ನಯ್ಯ ಹೇಳಿದರು. ಇದಕ್ಕೆ ಸಿಡಿಮಿಡಿಗೊಂಡ ಶಾಸಕ ಕೆ.ಶ್ರೀನಿವಾಸಗೌಡ, ‘ಏನು ಮಾತನಾಡುತ್ತಿದ್ದೀರಿ? ಅಧಿಕಾರಿಯಾಗಿ ಹಣ ಏನಾಯಿತು ಎಂಬುದು ಗೊತ್ತಿಲ್ಲ ಎಂದರೆ ಹೇಗೆ’ ಎಂದು ಡಿಡಿಪಿಗೆ ತರಾಟೆ ತೆಗೆದುಕೊಂಡರು.

‘ಇಲಾಖೆ ಹಣ ಆರ್ಥಿಕ ವರ್ಷದಲ್ಲಿ ವಾಪಸ್ ಆಗಬಾರದು ಎಂಬ ಕಾರಣಕ್ಕೆ ಡ್ರಾ ಮಾಡಿ ಭೂ ಸೇನಾ ನಿಗಮಕ್ಕೆ ನೀಡಿದ್ದಾರೆ. ಆ ಹಣ ವಾಪಸ್ ತರಿಸಿ. ಎಸ್‌ಡಿಎಂಸಿ ಮೂಲಕ ಬಳಕೆ ಮಾಡಿ’ ಎಂದು ಸದಸ್ಯ ಮಹೇಶ್ ಸೂಚಿಸಿದರು.

ಕರೆಗೆ ಸ್ಪಂದಿಸಲಿಲ್ಲ: ‘ಜಿಲ್ಲಾ ಕೇಂದ್ರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಗರ್ಭಿಣಿ ಮೃತಪಟ್ಟ ಸಂಬಂಧ ಕೆಲ ಸಂಘಟನೆಗಳ ಸದಸ್ಯರು ಜಿ.ಪಂ ಎದುರು ಧರಣಿ ನಡೆಸಿದಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಕರೆ ಮಾಡಿದರೂ ಸ್ಪಂದಿಸಲಿಲ್ಲ’ ಎಂದು ಜಿ.ಪಂ ಉಪಾಧ್ಯಕ್ಷೆ ಯಶೋದಾ ದೂರಿದರು.

ಇದಕ್ಕೆ ಅಸಮಾಧಾನಗೊಂಡ ಸಿಇಒ ಮಂಜುನಾಥ್, ‘ಮೃತರ ಕುಟುಂಬಕ್ಕೆ ಸಂಬಂಧಪಡದವರು ಪ್ರತಿಭಟನೆ ನಡೆಸಲು ಇದೇನು ಸಂತೆನಾ? ಪ್ರತಿಭಟನೆ ಮಾಡಿದವರು ಮೃತರ ಸಂಬಂಧಿಕರಾ? ಆ ಸಂಘಟನೆಯವರ ಪ್ರತಿಭಟನೆಗೆ 10 ನಿಮಿಷ ಸಮಯಾವಕಾಶ ನೀಡಿದ್ದೆವು. ಪ್ರತಿಭಟನೆ ಮಾಡಿ ಹೋಗಿದ್ದಾರೆ. ನರ್ಸಿಂಗ್‌ ಹೋಂ ವೈದ್ಯರು ತಪ್ಪು ಮಾಡಿದ್ದರೆ ಕೆಪಿಎಂಇ ಕಾಯ್ದೆಯಡಿ ಆಸ್ಪತ್ರೆ ವಿರುದ್ಧ ಶಿಸ್ತುಕ್ರಮ ಆಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT