ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಭೀತಿಯಿಂದಾಗಿ ರೈತರ ಅಹೋರಾತ್ರಿ ಧರಣಿ ಅಂತ್ಯ

Last Updated 17 ಮಾರ್ಚ್ 2020, 15:31 IST
ಅಕ್ಷರ ಗಾತ್ರ

ಕೊಲ್ಹಾರ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ರೈಲ್ವೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಒತ್ತಡ ಹಾಗೂ ಭರವಸೆ ಮೇರೆಗೆ ಕೂಡಗಿಯಲ್ಲಿ ಕಾಲುವೆಗೆ ಬಾಕ್ಸ್ ಪುಸ್ಸಿಂಗ್ ಕಾಮಗಾರಿ ವಿಳಂಬ ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ಸದಸ್ಯರು ಆರು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಮಂಗಳವಾರ ತಾತ್ಕಾಲಿಕವಾಗಿ ಹಿಂಪಡೆದರು.

‘ಈಗಾಗಲೇ ಕಾಮಗಾರಿ ವೇಗದಿಂದ ನಡೆದಿದ್ದು, ಅಧಿಕಾರಿಗಳ ಒತ್ತಡ, ಮಠಾಧೀಶರ ಸಲಹೆ ಮೇರೆಗೆ ರೈತರೊಂದಿಗೆ ಚರ್ಚಿಸಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ’ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಘೋಷಿಸಿದರು.

‘ಮಾರ್ಚ್ 31ರೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ರೈಲ್ವೆ ಅಧಿಕಾರಿಗಳು ರೈತರ ಸಮ್ಮುಖದಲ್ಲಿ ಒಪ್ಪಿಕೊಂಡರು.

‘ನಿಗದಿತ ಸಮಯದಲ್ಲಿ ಕಾಮಗಾರಿ ಮುಕ್ತಾಯಗೊಳಿಸದಿದ್ದರೆ ಇದೇ ಸ್ಥಳದಲ್ಲಿ ನೇರವಾಗಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು’ ಎಂದು ಅರವಿಂದ ಕುಲಕರ್ಣಿ ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಎಲ್.ಅರಸಿದ್ಧಿ ಮಾತನಾಡಿ, ‘ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಧರಣಿ ಹಿಂಪಡೆಯುವಂತೆ ಸೂಚಿಸಲಾಗಿದೆಯೇ ಹೊರೆತು ಬೇರೆ ಯಾವುದೇ ಉದ್ದೇಶವಿಲ್ಲ. ಕಾಮಗಾರಿ ಶೀಘ್ರವಾಗಿ ಮುಗಿಸಲು ರೈಲ್ವೆ ಇಲಾಖೆಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಬಸವನಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ರೈತರು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಧರಣಿ ಹಿಂಪಡೆಯುವಂತೆ ಸಲಹೆ ನೀಡಿದ್ದೇವೆ. ಕಾಮಗಾರಿ ಶೀಘ್ರ ಮುಗಿಸಬೇಕು. ಇಲ್ಲದಿದ್ದರೆ ರೈತರ ಮುಂದಿನ ಧರಣಿಯಲ್ಲಿ ನಾಡಿನ ಮಠಾಧೀಶರು ಬಂದು ರೈತರೊಂದಿಗೆ ಧರಣಿ ಕುಳಿತುಕೊಳ್ಳಬೇಕಾಗುವುದು’ ಎಂದು ಹೇಳಿದರು.

ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾ ಭೋಸ್ಲೆ ಮಾತನಾಡಿ, ‘ರೈತರ ಸಮಸ್ಯೆ ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಕಾಮಗಾರಿ ಮುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ಹಮ್ಮಿಕೊಳ್ಳುವ ಹೋರಾಟಕ್ಕೆ ನಮ್ಮ ಸಂಘಟನೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿ, ಧರಣಿಯಲ್ಲಿ ಪಾಲ್ಗೊಳ್ಳಲಿದೆ’ ಎಂದರು.

ಉಪ ವಿಭಾಗಾಧಿಕಾರಿ ಸೋಮನಿಂಗ ಗೆಣ್ಣೂರ, ರೈಲ್ವೆ ಇಲಾಖೆಯ ಅಧಿಕಾರಿ ಲಲನ್ ಕುಮಾರ, ಡಿವೈಎಸ್ಪಿ ಇ.ಶಾಂತವೀರ ಇದ್ದರು.

ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಲ್.ಪಾಟೀಲ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ರಾಮ ಅಂಗಡಗೇರಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT