ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತಿದೆ ಗ್ರಂಥಾಲಯ ಮಾಳಿಗೆ..

Last Updated 17 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕೊಲ್ಹಾರ: ಪಟ್ಟಣದ ಹೃದಯ ಭಾಗದಲ್ಲಿ 16 ವರ್ಷಗಳ ಹಳೆಯ ಗ್ರಂಥಾಲಯವಿದೆ. ಮಳೆಗಾಲದಲ್ಲಿ ಕಟ್ಟಡದ ಮೇಲ್ಚಾವಣಿ ಸೋರುತ್ತಿದ್ದು, ಗೋಡೆಗಳು ಸುಣ್ಣಬಣ್ಣ ಕಾಣದೆ ಅದೆಷ್ಟೋ ವರ್ಷಗಳೇ ಗತಿಸಿವೆ. ಪಟ್ಟಣ ಪಂಚಾಯಿತಿಯ ದಿವ್ಯ ನಿರ್ಲಕ್ಷ್ಯದಿಂದಾಗಿ ಗ್ರಂಥಾಲಯ ಕಟ್ಟಡ ದುಸ್ಥಿತಿಗೆ ತಲುಪಿದೆ.

ಇಲ್ಲಿ ಒಟ್ಟು 6 ಸಾವಿರಕ್ಕೂ ಅಧಿಕ ಪುಸ್ತಕಗಳ ಭಂಡಾರವಿದೆ. ಸುಮಾರು 570 ಕ್ಕೂ ಹೆಚ್ಚು ಓದುಗ ಸದಸ್ಯರನ್ನು ಹೊಂದಿರುವ ಗ್ರಂಥಾಲಯ ಇದಾಗಿದೆ. ಪ್ರತಿದಿನ ಪಟ್ಟಣದ ಸಾಕಷ್ಟು ವಿದ್ಯಾರ್ಥಿಗಳು, ಯುವಕರು ಹಾಗೂ ಉದ್ಯೋಗಾಕಾಂಕ್ಷಿಗಳು ಇಲ್ಲಿಗೆ ಬಂದು ತಮ್ಮ ಜ್ಞಾನಾರ್ಜನೆಯನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಆದರೆ, ಕಟ್ಟಡ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಹಾಗೂ ಮಳೆಗಾಲದಲ್ಲಿ ಸೋರುವುದರಿಂದ ಜ್ಞಾನಾಸಕ್ತರು ಇತ್ತ ಬರಲು ಹಿಂದೇಟು ಹಾಕುವಂತಾಗಿದೆ.

ಮಳೆಗಾಲದಲ್ಲಿ ಪುಸ್ತಕ ವಿಭಾಗದ ಮೇಲ್ಚಾವಣಿಯಲ್ಲಿ ನೀರು ಸೋರುತ್ತಿರುವುದರಿಂದ ಪುಸ್ತಕಗಳು ಹಾಳಾಗುತ್ತಿರುವುದಲ್ಲದೇ ಓದುಗರಿಗೂ ತೀವ್ರ ತೊಂದರೆಯಾಗುತ್ತಿದೆ. ಈಗಾಗಲೇ ಕೆಲವು ಪುಸ್ತಕಗಳು ನೀರಿನಲ್ಲಿ ತೊಯ್ದು ಬಳಸಲಾಗದ ಸ್ಥಿಯಲ್ಲಿವೆ. ಶಿಥಿಲವಾದ ಪುಸ್ತಕ ವಿಭಾಗದ ಕೋಣೆಯಲ್ಲೇ ಗ್ರಂಥಪಾಲಕರು ಕುಳಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಟ್ಟಡ ನಿರ್ಮಾಣವಾಗಿ 16 ವರ್ಷಗಳದರೂ ಕಟ್ಟಡದ ಗೋಡೆಗಳು ಸುಣ್ಣಬಣ್ಣ ಕಂಡಿಲ್ಲ. ಜ್ಞಾನದ ಬೆಳಕನ್ನು ಚೆಲ್ಲುವ ಈ ಗ್ರಂಥಾಲಯದಲ್ಲಿ ವಿದ್ಯುತ್ ಸಂಪರ್ಕವಿದ್ದರೂ ವಿದ್ಯುತ್ ದ್ವೀಪಗಳ ವ್ಯವಸ್ಥೆಯಿಲ್ಲದೇ ಓದುಗರು ಕತ್ತಲಲ್ಲೇ ಪುಸ್ತಕಗಳನ್ನು ಓದುವಂತಾಗಿದೆ. ಕೋಣೆಗಳಲ್ಲಿ ಸರಿಯಾದ ಆಸನಗಳ ವ್ಯವಸ್ಥೆಯಿಲ್ಲ. ಇದೆಲ್ಲವನ್ನೂ ಸರಿಪಡಿಸಬೇಕಾದ ಪಟ್ಟಣ ಪಂಚಾಯಿತಿ ಮೌನಕ್ಕೆ ಶರಣಾಗಿದ್ದು, ಪುಸ್ತಕಾಭಿಮಾನಿಗಳು ಹಾಗೂ ಓದುಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಇದು ತಾಲ್ಲೂಕು ಕೆಂದ್ರದಲ್ಲಿರುವ ಸಾರ್ವಜನಿಕ ಗ್ರಂಥಾಲಯ. ಆದರೆ, ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಇರುವ ಕನಿಷ್ಠ ಸೌಲಭ್ಯಗಳೂ ಇಲ್ಲಿಲ್ಲ. ಪ್ರತಿನಿತ್ಯ ಕನಿಷ್ಠ ಒಂದು ಇಂಗ್ಲಿಷ್ ದಿನಪತ್ರಿಕೆ ಸೇರಿ ನಾಲ್ಕು ಕನ್ನಡ ಪ್ರಮುಖ ದಿನಪತ್ರಿಕೆಗಳು ಓದುಗರಿಗೆ ದೊರೆಯುವಂತಾಗಬೇಕು. ಗ್ರಂಥಾಲಯದ ಆವರಣದಲ್ಲಿ ಶೌಚಾಲಯ ನಿರ್ಮಿಸಬೇಕು. ಗ್ರಂಥಾಲಯ ಆವರಣ ಸೋಮಾರಿಗಳ ಕಟ್ಟೆಯಂತಾಗಿದೆ. ಅಲ್ಲಿ ಓದುಗರನ್ನು ಹೊರತುಪಡಿಸಿ ಅನವಶ್ಯಕ ವ್ಯಕ್ತಿಗಳನ್ನು ನಿಷೇಧಿಸುವ ಕೆಲಸವನ್ನು ಸಂಬಂಧಿಸಿದವರು ಮಾಡಬೇಕು’ ಎಂದು ಪಟ್ಟಣದ ಯುವಕ ಮಲ್ಲು ಗಿಡ್ಡಪ್ಪಗೋಳ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT