ಶುಕ್ರವಾರ, ಮಾರ್ಚ್ 5, 2021
18 °C
ಜಿಲ್ಲೆಯ ವಿವಿಧೆಡೆ ಜಿಲ್ಲಾ ಉಸ್ತುವಾರಿ ಸಚಿವ ಪ್ರವಾಸ: ಬರ ಪರಿಶೀಲನೆ

₹ 100 ಕೋಟಿ ನೆರವಿಗೆ ಕೇಂದ್ರಕ್ಕೆ ಮನವಿ: ಆರ್.ಶಂಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರ ₹ 100 ಕೋಟಿ ಪರಿಹಾರಧನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪರಿಸರ, ಅರಣ್ಯ ಸಚಿವ ಆರ್.ಶಂಕರ ಹೇಳಿದರು.

ಜಿಲ್ಲೆಗೆ ಎರಡನೇ ಬಾರಿಗೆ ಅವರು ಭೇಟಿ ನೀಡಿ, ಕೂಕನಪಲ್ಲಿ, ಮೆತಗಲ್, ಹೊಸೂರು ಗ್ರಾಮಕ್ಕೆ ತೆರಳಿ ಬರ ವೀಕ್ಷಿಸಿ ಮಾತನಾಡಿದರು.

ಈ ಭಾಗದಲ್ಲಿ ಎರಡು ತಿಂಗಳಿಂದ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ರೈತರಿಗೆ ನೆರವಿಗೆ ರಾಜ್ಯ ಸರ್ಕಾರ ಸದಾ ಸಿದ್ಧವಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅವರ ಗಮನಕ್ಕೆ ತರಲಾಗಿದೆ. ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಹಾವೇರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೊಡಗಿದ್ದರಿಂದ ಬರಲು ವಿಳಂಬವಾಯಿತು. ತಿಂಗಳಿಗೆ ಎರಡು ಸಾರಿ ಭೇಟಿ ನೀಡಿ, ಜನರ ಸಮಸ್ಯೆಗಳತ್ತ ಗಮನ ಹರಿಸಲಾಗುವುದು. ಸದ್ಯದಲ್ಲಿಯೇ ಜಿಲ್ಲಾಡಳಿತ ಭವನದಲ್ಲಿ ಕಚೇರಿಯನ್ನು ತೆರೆಯುವುದಾಗಿ ಹೇಳಿದರು.

ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಚಿವರು, ಅಲ್ಲಿನ ರೈತರೊಂದಿಗೆ ಚರ್ಚೆ ನಡೆಸಿದರು.

ಈ ಭಾಗದಲ್ಲಿ ಪರಿಸರದ ಬಗ್ಗೆ ಕಾಳಜಿ ಇಲ್ಲದೇ ಇರುವುದರಿಂದ ಮಳೆ ಕೊರತೆ, ಬರ ಉಂಟಾಗುತ್ತಿದೆ. ಟ್ರೀ ಪಾರ್ಕ್, ಹೊಲದ ಬದುಗಳಲ್ಲಿ ಹೆಚ್ಚು, ಹೆಚ್ಚು ಸಸಿಗಳನ್ನು ನೆಡಬೇಕು. ನಿಮಗೆ ಬೇಕಾಗುವ ಎಲ್ಲ ಸಸಿಗಳನ್ನು ಅರಣ್ಯ ಇಲಾಖೆಯಿಂದ ಉಚಿತವಾಗಿ ನೀಡಲಾಗುತ್ತಿದ್ದು, ರೈತರು ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕರಡಿ ಮತ್ತು ಜಿಂಕೆಧಾಮ ಸ್ಥಾಪನೆಗೆ ಪ್ರಸ್ತಾವ ಬಂದಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು. ಕಳ್ಳಬೇಟೆ ತಡೆಗೆ ಹಾಗೂ ವನ್ಯಮೃಗಗಳ ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ಸನ್ನದ್ಧವಾಗಿದ್ದು, ರೈತರಿಗೆ, ಜನರಿಗೆ ತೊಂದರೆ ಆದರೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಭಾಗದಲ್ಲಿ ಸಂಪ್ರದಾಯದ ಹೆಸರಿನಲ್ಲಿ ನರಿ ಬೇಟೆಯಾಡುತ್ತಿದ್ದಾರೆ ಎಂದು ಕೆಲವರು ಸಚಿವರ ಗಮನಕ್ಕೆ ತಂದಾಗ ಜಿಲ್ಲಾ ಅರಣ್ಯ ಅಧಿಕಾರಿಗಳನ್ನು ಕರೆಯಿಸಿ, ಈ ರೀತಿ ನಡೆಯಬಾರದು ನಿಗಾ ವಹಿಸಬೇಕು. ಇಂತಹ ಕೃತ್ಯ ನಡೆದರೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಎಫ್‌ಒ ಯಶಪಾಲ್ ಕ್ಷೀರಸಾಗರ್, ಈಗಾಗಲೇ 10 ಜನರನ್ನು ಬಂಧಿಸಿದ್ದೇವೆ ಎಂದು ಹೇಳಿದರು.

ಹಾರ-ತುರಾಯಿ ಬೇಡ: ದಾರಿಯುದ್ದಕ್ಕೂ ಸಚಿವರನ್ನು ಸ್ವಾಗತಿಸಲು ವಿವಿಧ ಗ್ರಾಮಗಳ ಮುಖಂಡರು ಹಾರ, ತುರಾಯಿ ಹಿಡಿದುಕೊಂಡು ನಿಂತಿದ್ದರು. ಇದನ್ನು ಕಂಡ ಸಚಿವರು, ಜಿಲ್ಲೆಯಲ್ಲಿ ಬರಗಾಲದ ಛಾಯೆ ಇದೆ. ಹಾರ ತರಬೇಡಿ ಎಂದು ಮನವಿ ಮಾಡಿದರು.

ಕನಕಗಿರಿ ಶಾಸಕ ಬಸವರಾಜ ಧಡೇಸೂಗುರ, 'ನಮ್ಮ ಭಾಗದಲ್ಲಿ ಹನಿ ಮಳೆ ಇಲ್ಲದೇ ಬಿತ್ತಿದ ಖರ್ಚು ಕೂಡಾ ಬರುತ್ತಿಲ್ಲ. ರೈತರ ಸ್ಥಿತಿ ಶೋಚನೀಯವಾಗಿದೆ. ತಕ್ಷಣಕ್ಕೆ ಪರಿಹಾರ ನೀಡಬೇಕು' ಎಂದು ಮನವಿ ಮಾಡಿದರು. 

ಸಂಸದ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯ್ತಿ ಸದಸ್ಯ ರಾಮಣ್ಣ ಚೌಡ್ಕಿ, ಗವಿಸಿದ್ಧಪ್ಪ ಕರಡಿ ಅವರು ಸಚಿವರ ಎದುರು ಜಿಲ್ಲೆಯ ಬರ ಪರಿಸ್ಥಿತಿ ಕುರಿತು ವಿವರಿಸಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ವೆಂಕಟ್ ರಾಜಾ, ತಹಶೀಲ್ದಾರ್ ಗುರುಬಸವರಾಜ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

ರೈತರು ತಮ್ಮ ಹೊಲದಲ್ಲಿ ಬಿತ್ತಿದ್ದ ಗೋವಿನಜೋಳ, ಸಜ್ಜೆ, ತೊಗರಿ, ಹತ್ತಿ, ಮುಂಗಾರು ಜೋಳ ಒಣಗುತ್ತಿದ್ದು ಅವುಗಳನ್ನು ರಸ್ತೆಯ ಮೇಲೆ ಇಟ್ಟು ಪ್ರದರ್ಶಿಸಿದರು. 

‘ಕಾಟಾಚಾರಕ್ಕೆ ಬರಪರಿಶೀಲನೆ’

 ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲೆಯಲ್ಲಿ ಬರ ಸಮೀಕ್ಷೆ ನಡೆಸಿ ಆಗಸ್ಟ್‌ 20ರೊಳಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ತಿಂಗಳು ಅಂತ್ಯವಾದರೂ ಸಮೀಕ್ಷೆ ನಡೆಸಿಲ್ಲ. ಪರಿಹಾರ ಹೇಗೆ ನೀಡುತ್ತಾರೆ ಎಂದು ಸಂಸದ ಸಂಗಣ್ಣ ಕರಡಿ ಪ್ರಶ್ನಿಸಿದರು.

ಸಚಿವರು ಕಾಟಾಚಾರಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ. ಯಾವುದೇ ಅಂಕಿ-ಅಂಶ ಕೂಡಾ ಗೊತ್ತಿಲ್ಲ. ಅಲ್ಲದೇ ಸರ್ಕಾರ ಹಾಗೂ ಸಚಿವರಲ್ಲಿ ಸಮನ್ವಯತೆಯೇ ಇಲ್ಲ. ಬರಿ ಪ್ರವಾಸ ಮಾಡುತ್ತಾರೆ ಎಂದು ಟೀಕಿಸಿದರು.

ಮಳೆ, ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದು, ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಅನೇಕ ಸಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಲಿದ್ದು, ಸಮಗ್ರವಾಗಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೈತರಿಗೆ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು.
ಆರ್.ಶಂಕರ್, ಅರಣ್ಯ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು