ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಪರೀಕ್ಷೆಗೆ 13 ಸಾವಿರ ವಿದ್ಯಾರ್ಥಿಗಳು

ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮ
Last Updated 18 ಜೂನ್ 2020, 2:59 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಒಟ್ಟು 16 ಪರೀಕ್ಷಾ ಕೇಂದ್ರದಲ್ಲಿ ಗುರುವಾರ ದ್ವಿತೀಯ ಪಿಯು ಇಂಗ್ಲೀಷ್‌ ಪರೀಕ್ಷೆ ನಡೆಯಲಿದೆ. ಒಟ್ಟು 13,582 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅದಕ್ಕಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯು ಸಕಲ ಸಿದ್ಧತೆ ಮಾಡಿಕೊಂಡಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಪೂರಕವಾಗಿ ಹಲವಾರು ಸುರಕ್ಷತಾ ಕ್ರಮಗಳನ್ನು ಇಲಾಖೆ ಕೈಗೊಂಡಿದೆ.

‘ಎಲ್ಲ ಕೇಂದ್ರಗಳ ಒಳ ಮತ್ತು ಹೊರ ಆವರಣದಲ್ಲಿ ದಿನಗಳಿಂದ ಸ್ಯಾನಿಟೈಸ್‌ ಮಾಡಲಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತದ ಸಹಕಾರ ಪಡೆದುಕೊಳ್ಳಲಾಗಿದೆ.ಪರೀಕ್ಷಾ ಕೇಂದ್ರದ ಕೊಠಡಿ ‍ಪ್ರವೇಶಿಸುವ ಮುನ್ನ ಮಕ್ಕಳನ್ನು ಸ್ಕ್ರೀನಿಂಗ್‌ ಟೆಸ್ಟ್‌ ಮಾಡಲಾಗುವುದು. ಆರೋಗ್ಯ ಇಲಾಖೆ ಸಿಬ್ಬಂದಿ ಈ ಕಾರ್ಯ ಮಾಡಲಿದ್ದು, ಕೆಲವು ಉಪನ್ಯಾಸಕರಿಗೂ ಕೂಡ ಈ ಬಗ್ಗೆ ತರಬೇತಿ ನೀಡಲಾಗಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಬಿ.ಗಡೇದ್‌ ತಿಳಿಸಿದರು.

‘ವ್ಯತರಿಕ್ತ ದೇಹದ ಉಷ್ಣಾಂಶ ಕಂಡು ಬರುವ ಮಕ್ಕಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಲಾಗುವುದು. ಇದಕ್ಕಾಗಿ ಪ್ರತಿ ಕೇಂದ್ರದಲ್ಲಿ 2 ಹೆಚ್ಚುವರಿ ಕೊಠಡಿಗಳನ್ನು ನೀಡಲಾಗಿದೆ. ಕೊಠಡಿ ಪ್ರವೇಶಿಸುವ ಮಕ್ಕಳಿಗೆ ಕೈತೊಳೆದುಕೊಳ್ಳಲು ಸಾಬೂನು ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅವುಗಳಿಲ್ಲದವರಿಗೆ ಮಾಸ್ಕ್‌ ನೀಡುವಂತೆ ಕೇಂದ್ರಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದರು.

‘ಯಾವುದೇ ಕಾರಣಕ್ಕೂ ಮುಖಕ್ಕೆ ಕರ್ಚಿಫ್‌ ಕಟ್ಟಿಕೊಂಡು ಪರೀಕ್ಷೆ ಬರೆಯುವಂತಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಲು ಪ್ರತಿ ಕೊಠಡಿಗೆ 24 ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳ ನಡುವೆ 3 ಅಡಿ ಅಂತರ ಕಾಯ್ದುಕೊಳ್ಳಬಹುದು. ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲು ಇಲಾಖೆ ದೃಢ ನಿರ್ಧಾರ ಕೈಗೊಂಡಿದೆ. ಸರ್ಕಾರ ಕೂಡ ಇಲಾಖೆಯ ಬೆಂಗಾವಲಿಗೆ ನಿಂತಿರುವುದು ಕೆಲಸ ಮಾಡುವ ಉತ್ಸಾಹ ಹೆಚ್ಚಿಸಿದೆ ಎಂದು ವಿವರಿಸಿದರು.

ಈ ಹಿಂದೆ ಮಾರ್ಚ್‌ 4 ರಂದು ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದವು. ಮಾ.23 ರಂದು ಕೊನೆಯ ಇಂಗ್ಲೀಷ್‌ ವಿಷಯದ ಪರೀಕ್ಷೆ ನಡೆಯಬೇಕಿತ್ತು. ಆದರೆ ಕೊರೊನಾ ಸೋಂಕು ಹರಡುವಿಕೆಯಿಂದ ಇಂಗ್ಲೀಷ್‌ ಪರೀಕ್ಷೆ ರದ್ದುಗೊಂಡಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ಜೂ18ರಂದು ಬೆಳಿಗ್ಗೆ 10.15 ರಿಂದ 1.30ರವರೆಗೆ ಇಂಗ್ಲೀಷ್‌ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT