ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆಗಳ ಆಧುನೀಕರಣಕ್ಕೆ ₹370 ಕೋಟಿ

ಕೊಪ್ಪಳದ ಹುಲಿಗಿಯಲ್ಲಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆ; ಎರಡು ಪ್ಯಾಕೇಜ್‌ಗಳಲ್ಲಿ ಕಾಮಗಾರಿ
Last Updated 27 ಜೂನ್ 2020, 8:07 IST
ಅಕ್ಷರ ಗಾತ್ರ

ಕೊಪ್ಪಳ: ಐತಿಹಾಸಿಕ ವಿಜಯನಗರ ಕಾಲುವೆಗಳ ಆಧುನೀಕರಣಕ್ಕೆ ₹370 ಕೋಟಿ ಹಣವನ್ನು ಮೀಸಲಿಡಲಾಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೋಳಿ ಹೇಳಿದರು.

ತಾಲ್ಲೂಕಿನ ಹುಲಿಗಿಯಲ್ಲಿ ಶುಕ್ರವಾರ ಜಿಲ್ಲಾ ವ್ಯಾಪ್ತಿಯ ಐತಿಹಾಸಿಕ ವಿಜಯನಗರ ಕಾಲುವೆಗಳಾದ ಹುಲಿಗೆ, ಶಿವಪುರ ಹಾಗೂ ಇತರ ಕಾಲುವೆಗಳ ಆಧುನೀಕರಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

350 ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದಲ್ಲಿ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಆಯಾ ಸ್ಥಳಗಳಲ್ಲಿ 11 ಅಣೆಕಟ್ಟೆಗಳನ್ನು ಹಾಗೂ 16 ಕಾಲುವೆಗಳ ಜಾಲ ನಿರ್ಮಿಸಲಾಗಿದೆ. ಒಟ್ಟು ಕಾಲುವೆಗಳ ಉದ್ದ 215 ಕಿ.ಮೀ ಇದ್ದು, ಅಣೆಕಟ್ಟೆ ಪ್ರದೇಶವು 11,154 ಹೆಕ್ಟೇರ್ ಇದೆ. ಜಿಲ್ಲೆಯಲ್ಲಿ ಹುಲಿಗಿ, ಶಿವಪುರ, ಆನೆಗೊಂದಿ, ಗಂಗಾವತಿಯ ಅಪ್ಪರ್ ಮತ್ತು ಲೋವರ್ ಎಡದಂಡೆ ಕಾಲುವೆಗಳು ಹಾಗೂ ಅಣೆಕಟ್ಟೆ ಪ್ರದೇಶವು ಒಟ್ಟು 2,899 ಹೆಕ್ಟೇರ್‌ ಇದೆ ಎಂದರು.

ಕಾಲುವೆಗಳು ಹಾಗೂ ಅಣೆಕಟ್ಟೆಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿತವಾಗಿದ್ದು, ಸದ್ಯ ಇವು ಮೂಲ ಸ್ವರೂಪವನ್ನು ಕಳೆದುಕೊಂಡು ಶಿಥಿಲಾವಸ್ಥೆಯಲ್ಲಿರುವುದರಿಂದ ಆಧುನೀಕರಣಗೊಳಿಸಲು ಎರಡು ಪ್ಯಾಕೇಜ್‌ಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ ಎಂದು ಹೇಳಿದರು.

ಎಂಟು ಅಣೆಕಟ್ಟೆಗಳು ಮತ್ತು ತುರ್ತು ಕಾಲುವೆ ಸುಮಾರು 18.38 ಕಿ.ಮೀ ಗಳಷ್ಟು ಉದ್ದ ಇದ್ದು, ಕಾಮಗಾರಿಗೆ ₹74.38 ಕೋಟಿ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಕಾಮಗಾರಿಯು ರಾಷ್ಟ್ರೀಯ ವನ್ಯ ಜೀವಿ ಪ್ರಾಧಿಕಾರ ಮತ್ತು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಪ್ರಾಧಿಕಾರವು ಕೆಲವು ಷರತ್ತು ಮತ್ತು ನಿಯಮಾವಳಿಗೆ ವಿಧಿಸಿ ಅನುಮತಿ ನೀಡಿದೆ. ರಾಜ್ಯ ವನ್ಯ ಜೀವಿ ಪ್ರಾಧಿಕಾರವು ಈಗಾಗಲೇ ರಾಷ್ಟೀಯ ವನ್ಯ ಜೀವಿ ಮಂಡಳಿಗೆ ಅನುಮತಿಗಾಗಿ ಶಿಫಾರಸು ಮಾಡಿದ್ದು, ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಮುನಿರಾಬಾದ್‌ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ ತುರುವಿಹಾಳ, ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಕೆ.ಹಿಟ್ನಾಳ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ, ಬಸವರಾಜ ದಢೇಸೂಗೂರ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT