ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹32.61 ಲಕ್ಷ ಉಳಿತಾಯ ಬಜೆಟ್‍

Last Updated 24 ಫೆಬ್ರುವರಿ 2018, 7:09 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ನಗರಸಭೆಯಲ್ಲಿ ಶುಕ್ರವಾರ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಅವರು 2018-19ನೇ ಸಾಲಿನ ₹63.94 ಕೋಟಿ ಮೊತ್ತದ ಆಯವ್ಯಯ ಮಂಡಿಸಿದರು. ನಗರಸಭೆಯ ಸಭಾಂಗಣದಲ್ಲಿ ಬಜೆಟ್ ಸಭೆಯಲ್ಲಿ ವರ್ಷದ ಖರ್ಚು-ವೆಚ್ಚಗಳ ಅಂದಾಜು ಪಟ್ಟಿಯನ್ನು ಸದಸ್ಯರ ಮುಂದಿಟ್ಟರು.

ಸಭೆ ಆರಂಭವಾಗುತ್ತಿದ್ದಂತೆ ನಗರಸಭೆ ಸದಸ್ಯ ಅಪ್ಪಣ್ಣ ಪದಕಿ ಸಭೆಗೆ ಬರುವಂತೆ ಮಾಹಿತಿ ನೀಡಿಲ್ಲ. ಬಜೆಟ್ ಪ್ರತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಅಧ್ಯ‍ಕ್ಷ ಛೋಪ್ರಾ ಪ್ರತಿಕ್ರಿಯಿಸಿ, 'ಪೌರಾಯುಕ್ತರು ವರ್ಗಾವಣೆ ಆದ ಕಾರಣ ಬಜೆಟ್‍ ಪ್ರತಿ ವಿತರಣೆಯಲ್ಲಿ ಸಮಸ್ಯೆ ಆಗಿದೆ. ಆದರೆ, 7 ದಿನ ಸಭೆಯ ಮೊದಲೇ ಮಾಹಿತಿ ನೀಡಬೇಕಾಗಿತ್ತು. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ತರಾಟೆಗೆ ತೆಗೆದುಕೊಂಡರು.

‘ಕಳೆದ ಬಾರಿಯೂ ಬಜೆಟ್‍ ಮಂಡನೆ ಮಾಡಲಾಗಿದೆ. ಆದರೆ, ಅಂದು ಘೋಷಿಸಿದ 24x7 ಕುಡಿಯುವ ನೀರಿನ ಯೋಜನೆ, ವಸತಿ ಯೋಜನೆ ಸೇರಿದಂತೆ 24 ಯೋಜನೆಗಳು ಅಭಿವೃದ್ಧಿಯಾಗಿಲ್ಲ’ ಎಂದು ಅಪ್ಪಣ್ಣ ಪದಕಿ ದೂರಿದರು.

‘ನಗರಸಭೆಗೆ ನಗರೋತ್ಥಾನ ಯೋಜನೆಯಲ್ಲಿ ₹35 ಕೋಟಿ, ಪೈಪ್‍ಲೈನ್‍ ಕಾಮಗಾರಿಗೆ ₹5 ಕೋಟಿ ಅನುದಾನ ಬಂದಿದೆ. ₹19 ಕೋಟಿ ವೆಚ್ಚದಲ್ಲಿ ನಗರದ ವಿವಿಧ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶೀರ್ಘವಾಗಿ ಅನುಮೋದನೆ ಸಿಗಲಿದೆ. 17,625 ವಸತಿ, 2,310 ವಾಣಿಜ್ಯ ಕಟ್ಟಡಗಳು, 14, 220 ಖಾಲಿ ನಿವೇಶನ ಸೇರಿದಂತೆ ಒಟ್ಟು ನಗರಸಭೆ 34,230 ಆಸ್ತಿ ಹೊಂದಿದೆ’ ಎಂದು ಛೋಪ್ರಾ ತಿಳಿಸಿದರು.

‘ನಗರದ ಮಾಂಸದ ಅಂಗಡಿಗಳನ್ನು ಒಂದೇ ಸೂರಿನಡಿ ನಿರ್ಮಿಸಲು 2 ಎಕರೆ ಜಮೀನು ಖರೀದಿಸಲಾಗುವುದು. ಜಿಲ್ಲಾಡಳಿತ ಭವನದ ಬಳಿ ಇರುವ ₹1 ಕೋಟಿ ಮೌಲ್ಯದ ಬೆಲೆಬಾಳುವ ಜಮೀನನ್ನು ನಗರಸಭೆ ವ್ಯಾಪ್ತಿಗೆ ಪಡೆದಿಲ್ಲ. ಅಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಬಹುದಾಗಿದೆ. ಇದನ್ನು ಶೇ 60ರಷ್ಟು ಕಡಿಮೆ ಮೊತ್ತಕ್ಕೆ ಜಿಲ್ಲಾಡಳಿತ ನೀಡಲು ಮುಂದಾಗಿದೆ. ಹಾಗಾಗಿ ನಗರಸಭೆಯಿಂದ ₹15ರಿಂದ ₹20 ಲಕ್ಷ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮುಂಗಡವಾಗಿ ಪಾವತಿಸಲಾಗುವುದು. ಇದಕ್ಕೆ ಸದಸ್ಯರು ಸಹಕಾರ ನೀಡಬೇಕು’ ಎಂದರು.

‘ಕಳೆದ ವರ್ಷದ ಬಜೆಟ್‍ನಲ್ಲಿ ಸಿಬ್ಬಂದಿಯ ವೇತನಕ್ಕೆ ₹2.40 ಕೋಟಿ, ವಿವಿಧ ಮಹನೀಯರ ಜಯಂತಿ ಆಚರಣೆಗೆ ₹10 ಲಕ್ಷ, ಮರ್ದಾನ ಗೈಬ್‍ ದರ್ಗಾದ ಉರುಸ್‍ ಹಾಗೂ ಗವಿಸಿದ್ದೇಶ್ವರ ಜಾತ್ರೆಗೆ ₹10 ಲಕ್ಷ ನೀಡಲಾಗಿತ್ತು’ ಎಂದು ಸಭೆಗೆ ಮಾಹಿತಿ ನೀಡಿದರು.

‘ನೀರು ಸರಬರಾಜು, ವಿದ್ಯುತ್‍ ಪೂರೈಕೆ ಹಾಗೂ ವಿವಿಧ ಮೂಲ ಸೌಕರ್ಯಕ್ಕೆ ಬಹಳಷ್ಟು ಹಣ ವ್ಯಯಿಸಲಾಗಿದೆ. ಬೀದಿಬದಿ ವ್ಯಾಪಾರಿಗಳು ಹರಾಜು ಪ್ರಕ್ರಿಯೆ ನಡೆಸು ವವರಿಂದ ಕಿರುಕುಳ ಅನುಭವಿಸುತ್ತಾರೆ. ಇದೇ ಕಾರಣಕ್ಕೆ ಹರಾಜು ಪ್ರಕ್ರಿಯೆ ನಡೆ ಸಲಿಲ್ಲ. ಇದರಿಂದಾಗಿ ಕಳೆದ ಬಜೆಟ್‍ನಲ್ಲಿ ಆದಾಯ ಕಡಿಮೆ ಬಂದಿದೆ’ ಎಂದರು.

ಆರ್‌ಟಿಐ ದುರ್ಬಳಕೆ: ‘ಮಾಹಿತಿ ಹಕ್ಕು ಕಾಯ್ದೆಯನ್ನು ಸರ್ಕಾರ ಉತ್ತಮ ಉದ್ದೇಶಕ್ಕಾಗಿ ಸರ್ಕಾರ ಜಾರಿಗೆ ತಂದಿದೆ. ಜನರ ಹಿತಕ್ಕಾಗಿ ಇದನ್ನು ಬಳಸಿದರೆ ಒಳ್ಳೆಯದು. ಆದರೆ, ನಗರದಲ್ಲಿ ಕೆಲವರು ಸರ್ಕಾರಿ ಇಲಾಖೆಗಳಿಂದ ಮಾಹಿತಿ ಕೋರುವುದನ್ನೇ ವೃತ್ತಿಯಾಗಿ ಮಾಡಿ ಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ ಬನ್ನಿಕೊಪ್ಪ, ಸ್ಥಾಯಿ ಸಮಿತಿಯ ಅಧ್ಯಕ್ಷ ಮೌಲಾಹುಸೇನ್‍ ಜಮೇದಾರ, ಪೌರಾಯುಕ್ತ ಸುನೀಲ್‍ ಪಾಟೀಲ ಇದ್ದರು.

ವಿಷದ ಬಾಟಲಿಯೊಂದಿಗೆ ಪ್ರತಿಭಟನೆ

ನಗರದ ತರಕಾರಿ ವ್ಯಾಪಾರಿಗಳು ಶಾಶ್ವತ ಸೂರು ಕಲ್ಪಿಸುವಂತೆ ಆಗ್ರಹಿಸಿ ನಗರಸಭೆಯ ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸಿದರು. ಕೈಯಲ್ಲಿ ವಿಷದ ಬಾಟಲಿ ಹಿಡಿದು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

'ಜೆ.ಪಿ.ಮಾರ್ಕೆಟ್‍ಗೆ ಸಾರ್ವಜನಿಕ ಮೈದಾನದಲ್ಲಿನ ತರಕಾರಿ ವ್ಯಾಪಾರಿಗಳನ್ನು ನಗರಸಭೆಯವರು ಸ್ಥಳಾಂತರಗೊಳಿಸಿದ್ದರು. ಅವರಿಗೆ ಮಾರ್ಕೆಟ್‍ನಲ್ಲಿ ಮಳಿಗೆಗಳನ್ನು ನೀಡುವ ಭರವಸೆ ನೀಡಿದ್ದರು. ಆದರೆ, ಮಳಿಗೆ ನೀಡಿಲ್ಲ. ಈ ನಿಟ್ಟಿನಲ್ಲಿ ನಮಗೆ ವ್ಯಾಪಾರಕ್ಕೆ ಕೂಡಲೇ ಅನುಕೂಲ ಕಲ್ಪಿಸಬೇಕು' ಎಂದು ಒತ್ತಾಯಿಸಿದರು. ಬಜೆಟ್‍ ಸಭೆ ಮುಕ್ತಾಯವಾಗುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.

* * 

ಕೇಂದ್ರ ಸರ್ಕಾರದ ಅಮೃತ್‍ ಯೋಜನೆಯಲ್ಲಿ ಜಿಲ್ಲೆಯನ್ನು ಸೇರ್ಪಡೆ ಮಾಡುವಂತೆ ಸಂಸದ ಸಂಗಣ್ಣ ಕರಡಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ
ಮಹೇಂದ್ರ ಛೋಪ್ರಾ ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT