ವರ್ಕ್‌ಸ್ಲಿಫ್ ಹೆಸರಿನಲ್ಲಿ ಭ್ರಷ್ಟಾಚಾರ: ಭವಾನಿರಾವ್ ಮುಕುಂದಮಠ ಆರೋಪ

7
ಸಣ್ಣ ನೀರಾವರಿ ಇಲಾಖೆಯಲ್ಲಿ ಕಳಪೆ ಕಾಮಗಾರಿ: ತನಿಖೆಗೆ ಒತ್ತಾಯ

ವರ್ಕ್‌ಸ್ಲಿಫ್ ಹೆಸರಿನಲ್ಲಿ ಭ್ರಷ್ಟಾಚಾರ: ಭವಾನಿರಾವ್ ಮುಕುಂದಮಠ ಆರೋಪ

Published:
Updated:
Deccan Herald

ಕೊಪ್ಪಳ: ಜಿಲ್ಲೆಯ ವಿವಿಧೆಡೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಲ್ಲಿ ವರ್ಕ್‌ಸ್ಲಿಫ್ ಹೆಸರಿನಲ್ಲಿ ಹೆಚ್ಚಿನ ಹಣ ಪಡೆದುಕೊಳ್ಳುವ ಮೂಲಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಭವಾನಿರಾವ್ ಮುಕುಂದಮಠ ಆರೋಪಿಸಿದರು.

ಅವರು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಲಾಖೆಯಲ್ಲಿ ತುಂಡು ಗುತ್ತಿಗೆ ಹಗರಣ ಬಯಲಿಗೆ ಬಂದು 26 ಅಧಿಕಾರಿಗಳನ್ನು ಅಮಾನತು ಮಾಡಿ, ಸಿಒಡಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಲ್ಲಿ ನಡೆದ ಹಗರಣಗಳ ಕುರಿತು ರಾಜ್ಯ ಅನುಸೂಚಿತ ಜಾತಿ ಮತ್ತು ಪಂಗಡಗಳ ಆಯೋಗದ ನ್ಯಾಯಾಲಯದಲ್ಲಿ ವಿಚಾರಣೆ ಕೂಡಾ ನಡೆಯುತ್ತಿದೆ ಎಂದು ಹೇಳಿದರು.

ಇಷ್ಟೆಲ್ಲ ಹಗರಣಗಳಲ್ಲಿ ಮುಳು ಗಿರುವ ಈ ಇಲಾಖೆ ಅಧಿಕಾರಿಗಳು ಈಗ ಕಾಮಗಾರಿಗೆ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ನಮೂದಿಸಿ ವರ್ಕ್‌ಸ್ಲೀಫ್/ಇಐಆರ್‌ಎಲ್ ಹೆಸರಿನಲ್ಲಿ ಹಗಲುದರೋಡೆ ಮಾಡುತ್ತಿದ್ದಾರೆ. ಇವ ರೊಂದಿಗೆ ಗುತ್ತಿಗೆದಾರರು ಶಾಮೀಲಾಗಿ ₹ 50 ಕೋಟಿಗೂ ಹೆಚ್ಚು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ಪ್ರತಿಕ್ರಿಯೆ ನೀಡದ ಅಧಿಕಾರಿಗಳು: ಇಲಾಖೆಗೆ ಯಾವುದೇ ಮಾಹಿತಿ ಕೇಳಲು ಹೋದರೆ ಅಲ್ಲಿ ಅಧಿಕಾರಿಗಳೇ ಇರುವುದಿಲ್ಲ. ಮಾಹಿತಿ ಹಕ್ಕಿನಲ್ಲಿ ಪಡೆದುಕೊಂಡು ಸಂಬಂಧಿಸಿದ ಎಲ್ಲ ರಿಗೂ ತಲುಪಿಸುವುದಾಗಿ ಹೇಳಿದ ಅವರು, ಇಲ್ಲಿನ ನೀರಾವರಿ ಇಲಾಖೆ ಅಧಿಕಾರಿಗಳು ಸರ್ಕಾರದ ಸಂಬಳ ತೆಗೆದುಕೊಂಡು ಕನಿಷ್ಠ ಸಾರ್ವಜನಿಕರ ಕೆಲಸ ಮಾಡಬೇಕು ಎಂಬ ಪ್ರಜ್ಞೆಯೂ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ತಾಲ್ಲೂಕಿನ ಡೊಂಬರಹಳ್ಳಿ-ಗೊಂಡಬಾಳ ಗ್ರಾಮ ಮಧ್ಯೆದ ಬಾಂದಾರ ನಿರ್ಮಾಣದಲ್ಲಿ ₹ 38 ಲಕ್ಷ, ಹನವಾಳ ಬಾಂದಾರ ನಿರ್ಮಾಣದಲ್ಲಿ ₹ 56 ಲಕ್ಷ ಸೇರಿದಂತೆ ಅನೇಕ ಕಾಮಗಾರಿಗಳಲ್ಲಿ ಶೇ 19ರಿಂದ ಶೇ 38.29ರಷ್ಟು ನಕಲಿ ಬಿಲ್ ಸೃಷ್ಟಿಸಿ ಹಣ ಪಡೆದಿದ್ದಾರೆ ಎಂದು ಉದಾಹರಣೆ ಸಮೇತ ವಿವರಿಸಿದರು. ಇಂತಹ ಅನೇಕ ಕಾಮಗಾರಿ ಜಿಲ್ಲೆಯಲ್ಲಿ ನಡೆಯುತ್ತವೆ ಎಂದು ತಿಳಿಸಿದರು.

ಈ ಇಲಾಖೆಯಲ್ಲಿ ಯಾವುದಾದರೂ ಹಗರಣ ನಡೆದರೆ ಅದು ಅಧಿಕಾರಿಗಳಿಗೆ ಹಬ್ಬ. ಆ ಹಗರಣ ಮುಚ್ಚಲು ತನಿಖಾಧಿಕಾರಿಗಳಿಗೆ ಹಣ ನೀಡಬೇಕು ಎಂದು ಗುತ್ತಿಗೆದಾರರ ಮೇಲೆ ಒತ್ತಡ ಹೇರಿ, ಭ್ರಷ್ಟಾಚಾರ ಎಸಗುತ್ತಿದ್ದಾರೆ. ಪ್ರಾಮಾಣಿಕ ತನಿಖಾಧಿಕಾರಿಗಳನ್ನು ನೇಮಕ ಮಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಿದರೆ ಬುದ್ಧಿ ಬರುತ್ತದೆ ಎಂದು ಒತ್ತಾಯಿಸಿದರು.

ಅಧಿಕಾರಿಗಳ ಬೇಜವಾಬ್ದಾರಿಯಿಂದ ಗ್ರಾಮೀಣ ಭಾಗದಲ್ಲಿ ಯಾವುದೇ ಮೂಲಸೌಕರ್ಯಗಳು ಅನುಷ್ಠಾನ ಗೊಳ್ಳದೆ ತೊಂದರೆಯಾಗಿದೆ. ನೀರಾವರಿ ಇಲಾಖೆಗೆ ಸುಮಾರು ₹100 ಕೋಟಿಯಷ್ಟು ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಗುತ್ತಿಗೆದಾರ, ಅಧಿಕಾರಿಗಳ ಅವಾಂತರ

ಗಂಗಾವತಿ ತಾಲ್ಲೂಕಿನ ನವಲಿ ಸಂಕನಾಳ ಗ್ರಾಮದ ಹತ್ತಿರ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ₹ 6 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಟೆಂಡರ್ ಗುತ್ತಿಗೆ ಮೊತ್ತ ₹ 6,23,78,082 ನಿಗದಿ ಪಡಿಸಿ ಶೇ 4ರಷ್ಟು ವರ್ಕ್ ಸ್ಲಿಫ್ ಹೆಸರಿನ ಮೇಲೆ ಬಿಲ್ ಸೃಷ್ಟಿಸಿ ಹಣ ಪಡೆದುಕೊಂಡಿದ್ದಾರೆ.

ಅಲ್ಲದೆ ₹ 4 ಕೋಟಿ ಮೊತ್ತದ ಬಿಲ್ ಪಡೆದುಕೊಂಡಿದ್ದಾರೆ. ಆದರೆ ಕಾಮಗಾರಿ ಇನ್ನೂ ಅಪೂರ್ಣ ಹಂತದಲ್ಲಿಯೇ ಇದೆ. ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ ಎಂದು ₹ 91 ಲಕ್ಷದ ನಕಲಿ ಬಿಲ್ ಸೃಷ್ಟಿಸಿ ಗುತ್ತಿಗೆದಾರರು, ಅಧಿಕಾರಿಗಳು ಶಾಮೀಲಾಗಿ ಹಣ ಪಡೆದುಕೊಂಡಿದ್ದಾರೆ ಎಂದು ಮುಕುಂದರಾವ್ ಆರೋಪಿಸಿ ದಾಖಲೆಗಳನ್ನು ಪ್ರದರ್ಶಿಸಿದರು.

ಈ ಕುರಿತು ಲೋಕಾಯುಕ್ತ, ಎಸಿಬಿ, ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಅವರು ತಿಳಿಸಿದರು.

* ತನಿಖಾಧಿಕಾರಿಗಳಿಗೂ ಲಂಚ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಇಲ್ಲಿನ ನೀರಾವರಿ ಇಲಾಖೆ ಅಧಿಕಾರಿಗಳು ಅಡ್ಡಿಯಾಗಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳಿಂದ ತನಿಖೆ ನಡೆಯಲಿ

ಮುಕುಂದರಾವ್ ಭವಾನಿಮಠ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !