ಗದಗ-ವಾಡಿ ರೈಲು ಮಾರ್ಗಕ್ಕೆ ಚಾಲನೆ

7
ಕುಷ್ಟಗಿ ರೈಲು ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ

ಗದಗ-ವಾಡಿ ರೈಲು ಮಾರ್ಗಕ್ಕೆ ಚಾಲನೆ

Published:
Updated:

ಕೊಪ್ಪಳ: ಜಿಲ್ಲೆಯ ತಳಕಲ್‌ ಮಾರ್ಗದಿಂದ ವಾಡಿವರೆಗೆ ರೈಲು ಮಾರ್ಗ ನಿರ್ಮಾಣಕ್ಕೆ ಅಧಿಕೃತ ಚಾಲನೆ ದೊರೆತಿದ್ದು, 2025ರ ವೇಳೆಗೆ ಕಾಮಗಾರಿ ಮುಗಿಸುವ ಗುರಿ ನೀಡಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಅವರು ಕುಷ್ಟಗಿ ಪಟ್ಟಣದಲ್ಲಿ ಶುಕ್ರವಾರ ರೈಲ್ವೆ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು. ಗದಗ-ವಾಡಿ ರೈಲು ಮಾರ್ಗ 257.26 ಕಿ.ಮೀ ಇದ್ದು, ಒಟ್ಟು ₹ 2841.84 ಕೋಟಿ ವೆಚ್ಚ ನಿಗದಿ ಪಡಿಸಲಾಗಿದೆ.  ತಳಕಲ್‌ದಿಂದ ಕುಷ್ಟಗಿವರೆಗೆ 57 ಕಿ.ಮೀ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಶೇ 50:50ರ ಅನುಪಾತದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಕುಷ್ಟಗಿಯಲ್ಲಿ ₹ 2.02 ಕೋಟಿ ವೆಚ್ಚದಲ್ಲಿ ನಿಲ್ದಾಣ ನಿರ್ಮಿಸಲಾಗುವುದು. ಈ ಯೋಜನೆ ಕಳೆದ 18 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿ ಮತ್ತು ತಮ್ಮ ಪ್ರಯತ್ನದಿಂದ ವೇಗ ದೊರೆತಿದೆ. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ದೂರದೃಷ್ಟಿಯಿಂದ ಶೀಘ್ರ ರೈಲ್ವೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

ಈ ಮಾರ್ಗ ನಿರ್ಮಾಣದಿಂದ ಸಿಕಂದರಾಬಾದ್ ತಲುಪಲು 150 ಕಿ.ಮೀ. ಮಾರ್ಗ ಕಡಿಮೆಯಾಗುವುದರ ಜೊತೆಗೆ ಇಂಧನ, ಸಮಯ ಉಳಿತಾಯವಾಗಲಿದೆ. ಕುಷ್ಟಗಿ ರೈಲು ನಿಲ್ದಾಣವನ್ನು ಮಾದರಿ ಮತ್ತು ಗುಣಮಟ್ಟದಿಂದ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಯಾವುದೇ ರೈಲ್ವೆ ಕ್ರಾಸಿಂಗ್ ಇಲ್ಲದ ವಿಶಿಷ್ಟ ಮಾರ್ಗವಾಗಲಿದೆ ಎಂದು ಹೇಳಿದರು.

ಈ ಮಾರ್ಗ ಮಧ್ಯೆ ಕೆಲವು ಭೂವಿವಾದದಿಂದ ಯೋಜನೆ ವಿಳಂಬವಾಗಬಾರದು. ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಹಕಾರ ನೀಡುವ ಮೂಲಕ ನಿಗದಿತ ಸಮಯದಲ್ಲಿಯೇ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಅಂದಿನ ಸಂಸದ ರಾಯರಡ್ಡಿ ಅವರು ಯೋಜನೆಯನ್ನು ರಾಜ್ಯಕ್ಕೆ ತಂದಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಕಾರ್ಯಗತಗೊಂಡಿರಲಿಲ್ಲ. ಸಂಸದ ಸಂಗಣ್ಣ ಕರಡಿ ಅವರ ಅವಿರತ ಪ್ರಯತ್ನದಿಂದ ಯೋಜನೆ ಸಾಕಾರಗೊಳ್ಳುತ್ತಿದೆ ಎಂದರು.

ರೈತರು ಈ ಕಾರ್ಯಕ್ಕೆ ಸಹಕಾರ ನೀಡಬೇಕು. ಅನಗತ್ಯ ಭೂಮಿ ವಿವಾದವನ್ನು ತಂದು ತಡೆಯೊಡ್ಡಬಾರದು. ಸರ್ಕಾರ ಮೂಲಸೌಕರ್ಯಗಳನ್ನು ಕಲ್ಪಿಸುವಾಗ ಕೆಲವು ತ್ಯಾಗವನ್ನು ರೈತರು ಮಾಡಬೇಕಾಗುತ್ತದೆ. ಪರಿಹಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಎಲ್ಲ ಅನುಕೂಲವನ್ನು ಕಲ್ಪಿಸಲಾಗುವುದು. ರೈಲ್ವೆ ಯೋಜನೆಯಿಂದ ತಾಲ್ಲೂಕು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ನೈರುತ್ಯ ರೈಲ್ವೆ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿ, ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲ. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಈ ಭಾಗದ ಸಂಸದರಿಂದ ಜಿಲ್ಲೆಯ ರೈಲ್ವೆ ಯೋಜನೆಗಳು ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನಗೊಂಡು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರಡ್ಡಿ ಹೊಸಮನಿ, ಸದಸ್ಯ ಕೆ.ಮಹೇಶ ಮಾತನಾಡಿದರು. ನೈರುತ್ಯ ರೈಲ್ವೆ ಉಪ ಪ್ರಧಾನ ವ್ಯವಸ್ಥಾಪಕಿ ಇ.ವಿಜಯಾ, ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್‌, ಮುಖ್ಯ ಎಂಜಿನಿಯರ್‌ ರಾಮಗೋಪಾಲ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನೇಮಣ್ಣ ಮೇಲಸಕ್ರಿ, ಹನುಮಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ಸದಸ್ಯರಾದ ಮಹಾಂತೇಶ ಬದಾಮಿ, ನಾಗಪ್ಪ, ವಿರುಪಾಕ್ಷಪ್ಪ ಸಿಂಗನಾಳ ಇದ್ದರು. ಹುಬ್ಬಳ್ಳಿ ವಿಭಾಗೀಯ ಅಧಿಕಾರಿ ಅನಿಶ್ ಹೆಗಡೆ ನಿರೂಪಿಸಿದರು, ಎಜಿಎಂ ರಾಜೇಶ್ ಮೋಹನ್‌ ವಂದಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !