ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಮೇಳಕ್ಕೆ ಸಕಲ ಸಿದ್ಧತೆ, ಜಿಲ್ಲಾ ಕ್ರೀಡಾಂಗಣದಲ್ಲಿ ಫೆ.6.7ರಂದು ಆಯೋಜನೆ

Last Updated 2 ಫೆಬ್ರುವರಿ 2019, 14:20 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ. 6ಮತ್ತು 7ರಂದು ನಡೆಯುವ ಮಿನಿ ಉದ್ಯೋಗ ಮೇಳಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಅತ್ಯಂತ ಆಸಕ್ತಿ ವಹಿಸಿ ಸರ್ಕಾರದ ನಿರ್ದೇಶನದ ಮೇರೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಯಾವುದೇ ಶಿಕ್ಷಣವನ್ನು ಪಡೆಯದ ಯುವಕರಿಗೂಉದ್ಯೋಗ ಮೇಳದಲ್ಲಿ ಅವಕಾಶ ನೀಡುವ ಹೊಸ ಪರಿಕಲ್ಪನೆಯೊಂದಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ ಸ್ಥಳೀಯ 12 ಮತ್ತು ರಾಜ್ಯದ ವಿವಿಧ ಭಾಗಗಳ40ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಇನ್ನೂ ಹೆಚ್ಚಿನ ಕಂಪೆನಿಗಳು ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಈಗಾಗಲೇ 1300ಕ್ಕೂ ಹೆಚ್ಚು ಯುವಕರು ಆನ್‌ಲೈನ್ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ನಡೆಯುತ್ತಿದ್ದು, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಪ್ರಚಾರ ಕೂಡಾ ಮಾಡಲಾಗಿದೆ ಎಂದು ಹೇಳಿದರು.

18ರಿಂದ 35 ವರ್ಷದ ವಯೋಮಿತಿಯ ಇರುವ ಅವಿದ್ಯಾವಂತರು, ವಿದ್ಯಾವಂತರೂ, ಎಸ್‌ಎಸ್ಎಲ್‌ಸಿಯಿಂದ ಎಂಟೆಕ್ ಪದವಿ ಪಡೆದವರು ಮೇಳದಲ್ಲಿ ಭಾಗವಹಿಸಬಹುದು. ಸುಮಾರು 3 ಸಾವಿರ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಜಿಲ್ಲೆಯ ಜನರಿಗೆ ಪ್ರಥಮ ಆದ್ಯತೆ. ಬೇರೆ ಜಿಲ್ಲೆಗಳ ಯುವಕರು ಪಾಲ್ಗೊಳ್ಳಬಹುದು ಎಂದು ಹೇಳಿದರು.

ಉದ್ಯೋಗ ಮೇಳಕ್ಕೆ ಬರುವವರಿಗೆ ಕೇಂದ್ರ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್, ಕುಡಿಯಲು ಶುದ್ಧ ನೀರು, ಮಜ್ಜಿಗೆ, ರಿಯಾಯಿತಿ ದರದಲ್ಲಿ ಉಪಹಾರ ನೀಡಲು ಸೂಚಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಕೌಶಲಾಭಿವೃದ್ಧಿ, ಉದ್ಮಶೀಲತೆ, ಜೀವನೋಪಾಯ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ಸಹಯೋಗದಲ್ಲಿ ಈ ಮೇಳವನ್ನು ಯಶಸ್ವಿಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣ https://koppal.ni.c.in/ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ 08539-220859ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಹಿಂದುಳಿದ ಈ ಭಾಗದ ಜನತೆಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದೆ. ಇದೊಂದು ಸುವರ್ಣಾವಕಾಶವಾಗಿದ್ದು, ಉದ್ಯೋಗಾಕಾಂಕ್ಷಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಹುದ್ದೆಗೆ ಆಯ್ಕೆಯಾದವರನ್ನು ಗುರುತಿಸಿ ಅವರಿಗೆ ತರಬೇತಿ ನೀಡುವ ಮೂಲಕ ಉದ್ಯೋಗ ನೀಡುವ ಗುರಿಯನ್ನು ಹೊಂದಲಾಗಿದೆ. ಕನಿಷ್ಠ 2500 ಹುದ್ದೆ ದೊರೆಯಬಹುದು ಎಂಬ ನಿರೀಕ್ಷೆ ಇದೆ. ಈ ಮೇಳದ ಯಶಸ್ಸನ್ನು ನೋಡಿ, ಸ್ಥಳೀಯಮಟ್ಟದಲ್ಲಿಯೇ ಮೆಗಾ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮೇಳದ ವಿಶೇಷ

ತಾಂತ್ರಿಕ, ಬ್ಯಾಂಕಿಂಗ್, ಶೈಕ್ಷಣಿಕ, ಡಿ ದರ್ಜೆ, ಪ್ಲಂಬಿಂಗ್, ಸಣ್ಣಪುಟ್ಟ ದುರಸ್ತಿ ಮಾಡುವ ಕುಶಲಕರ್ಮಿಗಳು ಈ ಮೇಳದಲ್ಲಿ ಭಾಗವಹಿಸುವ ಅವಕಾಶ ಇದೆ.

ಉದ್ಯೋಗಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳನ್ನು ಗುರುತಿಸಿ ಅವರಿಗೆ ಇಲಾಖೆಯಿಂದ ಮರುದಿನ ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುವುದು. ಅಲ್ಲದೆ ಫೆ.7ರಂದು ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಕಾರ್ಖಾನೆಗಳಲ್ಲಿ ಉದ್ಯೋಗ ನೀಡುವ ಎಲ್ಲ ಅವಕಾಶವಿದೆ. ಆದರೆ ಹೊರಗುತ್ತಿಗೆ ಕಂಪೆನಿಗಳು ಅನ್ಯರಾಜ್ಯದವರನ್ನು ನೇಮಕ ಮಾಡಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಕಂಪೆನಿ ಮಾಲೀಕರಿಗೆ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

* ಕೌಶಲ ಕೊರತೆಯಿಂದ ಯುವಕರಿಗೆ ಉದ್ಯೋಗಾವಕಾಶ ಕಡಿಮೆಯಾಗುತ್ತಿದ್ದು, ಅವರಲ್ಲಿ ಕೌಶಲ ತುಂಬುವ ಮೂಲಕ ಸ್ಪರ್ಧೆಗೆ ಅಣಿಮಾಡುವ ಯೋಜನೆ ಹಮ್ಮಿಕೊಂಡಿದ್ದೇವೆ

–ಪಿ.ಸುನೀಲ್‌ ಕುಮಾರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT