ಸೋಮವಾರ, ಏಪ್ರಿಲ್ 19, 2021
32 °C
ಹನಕುಂಟಿ ಕ್ರಾಸ್: ಅಳವಂಡಿ‍–ಬೆಟಗೇರಿ ಯೋಜನಾ ಪ್ರದೇಶಕ್ಕೆ ಭೇಟಿ, ಪರಿಶೀಲನೆ

ಏತ ನೀರಾವರಿ ಯೋಜನೆ ಕಾಮಗಾರಿ ಉದ್ಘಾಟನೆ ಶೀಘ್ರ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಅಳವಂಡಿ–ಬೆಟಗೇರಿ ಏತ ನೀರಾವರಿ ಯೋಜನೆಯೂ ಸುಮಾರು ಒಂದು ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲ ಆಗಲಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ಹೇಳಿದರು.

ತಾಲ್ಲೂಕಿನ ಹನಕುಂಟಿ ಗ್ರಾಮದಲ್ಲಿರುವ ಅಳವಂಡಿ–ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಅಳವಂಡಿ–ಬೆಟಗೇರಿ ಏತ ನೀರಾವರಿ ಯೋಜನೆಯಿಂದಾಗಿ ತಾಲ್ಲೂಕಿನ 6 ಸಾವಿರ ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದ್ದು, ತಾಲ್ಲೂಕಿನ ಬೆಟಗೇರಿ, ಮೈನಳ್ಳಿ, ಹಂದ್ರಳ್ಳಿ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕನಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲ ಆಗಲಿದೆ ಎಂದರು.

₹ 8,883 ಲಕ್ಷ ವೆಚ್ಚದ ಈ ಯೋಜನೆ ಇದಾಗಿದೆ. ಕಾಮಗಾರಿ ಶೇ 90ರಷ್ಟು ಮುಗಿದಿದ್ದು, ಕೇವಲ ಇನ್ನೂ ಶೇ 10ರಷ್ಟು ಕೆಲಸ ಮಾತ್ರ ಬಾಕಿ ಇದೆ. ಇದು ಕೂಡಾ ಒಂದು ತಿಂಗಳಲ್ಲಿ ಮುಕ್ತಾಯಗೊಳಿಸಿ, ಬಳಿಕ ಕಾಮಗಾರಿಯನ್ನು ಉದ್ಘಾಟಿಸುತ್ತೇನೆ ಎಂದರು.

ಭೂಮಿಯನ್ನು ಖರೀದಿಸಲಾಗಿದ್ದು, ಅವರಿಗೆ ಇನ್ನೂ ಒಂದು ತಿಂಗಳಲ್ಲಿ ಪರಿಹಾರ ಧನ ನೀಡಲಾಗುವುದು. ಈಗಾಗಲೇ 41–61 ಮಾಡಿಸಲಾಗಿದೆ. ಹಾಗಾಗಿ ರೈತರಿಗೆ ಇನ್ನೂ ಕೆಲವೇ ದಿನಗಳಲ್ಲಿ ಸರ್ಕಾರದ ನಿಗದಿತ ಬೆಲೆಯ ಪ್ರಕಾರ ಪರಿಹಾರ ಧನ ನೀಡಲಾಗುತ್ತದೆ ಎಂದರು.

ಬಳಿಕ ಯೋಜನೆಯ ಕುರಿತು ಅಧಿಕಾರಿಗಳಿಂದ ಸಮಗ್ರವಾಗಿ ಮಾಹಿತಿ ಪಡೆದರು. ಎಲ್ಲ ಯಂತ್ರೋಪಕರಣ ವೀಕ್ಷಿಸಿ, ರೈತರೊಂದಿಗೂ ಚರ್ಚಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್.ಬಿ.ನಾಗರಳ್ಳಿ, ರಾಜಶೇಖರ ಹಿಟ್ನಾಳ, ಎಪಿಎಂಸಿ ಮಾಜಿ ಅಧ್ಯಕ್ಷರಾದ ವೆಂಕನಗೌಡ ಹಿರೇಗೌಡ್ರ, ಹನುಮರಡ್ಡಿ ಹಂಗನಕಟ್ಟಿ, ಮುಖಂಡ ಕೃಷ್ಣರೆಡ್ಡಿ ಗಲಿಬಿ ಇದ್ದರು.

ಮಹತ್ವದ ಯೋಜನೆ:

ಕೊಪ್ಪಳ ಏತ ನೀರಾವರಿ ಯೋಜನೆ ತಾಲ್ಲೂಕಿನ ಮಹತ್ವದ ಯೋಜನೆ ಆಗಿದೆ. ಈ ಯೋಜನೆ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಚುನಾವಣೆಯಲ್ಲಿ ಕೂಡಾ ಈ ವಿಷಯ ಮೇಲಿಂದ ಮೇಲೆ ಪ್ರಸ್ತಾಪವಾಗುತ್ತಿದೆ. ಯೋಜನೆ ಪೂರ್ಣಗೊಂಡು ಈ ಬರಗಾಲದ ತಾಲ್ಲೂಕಿಗೆ ನೀರು ಬಂದರೆ ಸಾಕು ಎಂದು ಜನ ಚಾತಕ ಪಕ್ಷಿಯಂತೆ ಕಾಯ್ದು ಕುಳಿತಿದ್ದಾರೆ.

ಗುಣಮಟ್ಟದ ಕಾಮಗಾರಿ ಮೂಲಕ ಕಾಲುವೆ ನಿರ್ಮಿಸಬೇಕು ಎಂಬುವುದು ಈ ಭಾಗದ ಜನರ ಅಭಿಪ್ರಾಯ ಕೂಡಾ ಆಗಿದೆ. ಇಂದು ಶಾಸಕರು ಭೇಟಿ ನೀಡಿದ ಪ್ರದೇಶದಲ್ಲಿ ರೈತರು ಪರಿಹಾರದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂತು. 

ರೈತರಿಗೆ ದೊರೆಯದ ಭೂ ಪರಿಹಾರ

‘ಅಳವಂಡಿ–ಬೆಟಗೇರಿ ಏತ ನೀರಾವರಿ ಯೋಜನೆಯೂ ಆರಂಭವಾಗಿ 4 ವರ್ಷ ಕಳೆದರೂ ಜಮೀನು ಖರೀದಿಸಿದ ಪರಿಹಾರಧನ ನೀಡಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗಿದೆ’ ಎಂದು ಭೂಮಿ ಕಳೆದುಕೊಂಡ ರೈತ ಅಶೋಕ ಬೋಚನಹಳ್ಳಿ ಅಳಲು ತೋಡಿಗೊಂಡರು.

ಯೋಜನೆಯಲ್ಲಿ ಸುಮಾರು 45ರಿಂದ 50 ಎಕರೆಯಷ್ಟು ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ 20ರಿಂದ 30 ರೈತರು ಭೂಮಿ ಕಳೆದುಕೊಂಡಿದ್ದಾರೆ. ಈವರೆಗೆ ಯಾವುದೇ ರೀತಿಯಲ್ಲಿ ಪರಿಹಾರಧನ ನೀಡಿಲ್ಲ. ಅಲ್ಲದೇ ಭೂಮಿ ಪಡೆದ ಯಾವುದೇ ಅಧಿಕೃತ ಕಾಗದ ಪತ್ರವನ್ನೂ ನೀಡಿಲ್ಲ. ಈಗಾಗಲೇ 90ರಷ್ಟು ಕಾಮಗಾರಿ ಮುಗಿದಿದ್ದು, ಒಂದು ತಿಂಗಳಲ್ಲಿ ಪೂರ್ಣವಾಗಲಿದೆ. ಆದರೆ ನಮಗೆ ಪರಿಹಾರ ನೀಡುವವರೆಗೂ ಕಾಮಗಾರಿ ಉದ್ಘಾಟನೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಭೂಮಿ ವಶಕ್ಕೆ ಪಡೆಯುವ ಸಂದರ್ಭದಲ್ಲಿ ಬೆಳೆ ಹಾನಿ ಪರಿಹಾರವಾಗಿ ₹ 12 ಸಾವಿರ ಮಾತ್ರ ನೀಡಿದ್ದರು. ಅಲ್ಲದೇ ಕಾಮಗಾರಿ ಮಾಡಲು ಬಿಡದಿದ್ದರೆ, ಗುತ್ತಿಗೆದಾರರು ಮನವೊಲಿಕೆ, ದಬ್ಬಾಳಿಕೆ ಮಾಡಿ ಕಾಮಗಾರಿ ನಡೆಸಿದ್ದಾರೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರಧನ ಕೊಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

* ಅಳವಂಡಿ–ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿ ಶೇ 90 ಪೂರ್ಣಗೊಂಡಿದ್ದು, ಒಂದೆರಡು ತಿಂಗಳಲ್ಲಿ ರೈತರಿಗೆ ಭೂ ಪರಿಹಾರ ಸಿಗಲಿದೆ.
ರಾಘವೇಂದ್ರ ಹಿಟ್ನಾಳ, ಶಾಸಕ 

* ಅಳವಂಡಿ–ಬೆಟಗೇರಿ ಏತ ನೀರಾವರಿ ಯೋಜನೆ ಆರಂಭವಾಗಿ ನಾಲ್ಕು ವರ್ಷ ಕಳೆಯಿತು. ಕಾಮಗಾರಿಯೂ 90ರಷ್ಟು ಪೂರ್ಣವಾಗಿದೆ. ಆದರೆ ಈವರೆಗೂ ಭೂಮಿ ನೀಡಿದ ಪರಿಹಾರ ಧನ ಬಂದಿಲ್ಲ.
ಅಶೋಕ ಬೋಚನಹಳ್ಳಿ, ರೈತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು