ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ಆಚರಣೆ ಪತ್ತೆಗೆ ಗುಪ್ತ ಸಮೀಕ್ಷೆ: ಜಿಲ್ಲಾಧಿಕಾರಿ ವಿಕಾಸ್ ಕಿಶೋರ್

Last Updated 22 ಸೆಪ್ಟೆಂಬರ್ 2021, 13:08 IST
ಅಕ್ಷರ ಗಾತ್ರ

ಕುಷ್ಟಗಿ: ‘ಅಸ್ಪೃಶ್ಯತೆ ಆಚರಣೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಇಂಥ ಪ್ರಕರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಗುಪ್ತ ರೀತಿಯಲ್ಲಿ ಸಮೀಕ್ಷೆ ನಡೆಸಲಾಗುತ್ತದೆ‘ ಎಂದು ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್ ಹೇಳಿದರು.

ಅಸ್ಪೃಶ್ಯತೆ ಆಚರಣೆ ನಡೆದ ಘಟನೆಗೆ ಸಂಬಂಧಿಸಿದಂತೆ ಬುಧವಾರ ತಾಲ್ಲೂಕಿನ ಮಿಯಾಪುರ ಗ್ರಾಮಕ್ಕೆ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದ ಅವರು ನಂತರ ನಡೆದ ಸಾರ್ವಜನಿಕ ಜಾಗೃತಿ ಸಭೆಯ ವೇಳೆ ಈ ಮಾಹಿತಿ ನೀಡಿದರು.

ಯಾರಿಗೂ ಗೊತ್ತಾಗದ ರೀತಿಯಲ್ಲಿ ಸ್ವಯಂ ಸೇವಾ ತಂಡದ ಮೂಲಕ ಅಸ್ಪೃಶ್ಯತೆ ಆಚರಣೆ ಕುರಿತು ಪತ್ತೆ ಹಚ್ಚಲಾಗುತ್ತದೆ. ಅಂಥ ಪ್ರಕರಣಗಳು ಎಲ್ಲಿಯಾದರೂ ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.

ಅಸ್ಪೃಶ್ಯತೆ ಆಚರಣೆ ಸಾಮಾಜಿಕ ಪಿಡುಗು ಆಗಿದ್ದು ಇದನ್ನು ಹೋಗಲಾಡಿಸುವುದಕ್ಕೆ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಯಾರೂ ದೂರು ನೀಡದಿದ್ದರೂ ಸರ್ಕಾರದ ವತಿಯಿಂದಲೇ ಎಫ್‌ಐಆರ್‌ ದಾಖಲಿಸಲಾಗುತ್ತದೆ. ಮಿಯಾಪುರ ಘಟನೆಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ ಪಂಚಾಯ್ತಿ ನಡೆಸಿದವರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಅಲ್ಲದೆ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯವಾಗಿರುತ್ತದೆ ಎಂದರು.

ಭೇಟಿ: ಈ ಮಧ್ಯೆ ನೊಂದ ಕುಟುಂಬದ ಮನೆಗೆ ಸ್ವತಃ ತೆರಳಿ ಜಿಲ್ಲಾಧಿಕಾರಿ, ಮಗುವಿನ ಪಾಲಕರೊಂದಿಗೆ ಮಾತನಾಡಿ, ಘಟನೆ ನಡೆದರೂ ದೂರು ನೀಡದಿರುವುದು ಏಕೆ ಎಂದು ಪ್ರಶ್ನಿಸಿದರು.

ಈ ಕುರಿತು ವಿವರಿಸಿದ ಮಗುವಿನ ತಂದೆ– ತಾಯಿ, 'ಊರಿನವರೊಂದಿಗೆ ಹೊಂದಾಣಿಕೆ ಇದೆ. ಯಾರೋ ಕೆಲವರು ಮಾಡಿದ ತಪ್ಪಿಗೆ ಘಟನೆಯನ್ನು ಮುಂದುವರೆಸದೆ ಎಲ್ಲರೂ ಸೌಹಾರ್ದತೆಯಿಂದ ಇರಬೇಕು. ಶಾಂತಿ ಕದಡಬಾರದು ಎಂಬುದಕ್ಕೆ ದೂರು ನೀಡಲಿಲ್ಲ' ಎಂದರು.

ಇಂಥ ಘಟನೆಗಳು ನಡೆದರೆ ನೊಂದ ವ್ಯಕ್ತಿ ಅಥವಾ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ರಕ್ಷಣೆ ನೀಡಲಾಗುತ್ತದೆ. ಭಯಪಡುವ ಅಗತ್ಯವೇ ಇರುವುದಿಲ್ಲ. ಪ್ರಕರಣ ಮರುಕಳಿಸಿದರೆ ಅದರ ಮಾಹಿತಿಯನ್ನು ಸರ್ಕಾರದ ಯಾವುದೇ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಜನರಿಗೆ ತಿಳಿಸಿದರು.

ತಹಶೀಲ್ದಾರ್ ಎಂ.ಸಿದ್ದೇಶ, ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ, ತಾಲ್ಲೂಕು ಪಂಚಾಯಿತಿ ಇಒ ಡಾ.ಜಯರಾಂ ಚವ್ಹಾಣ, ಸರ್ಕಲ್‌ ಇನ್‌ಸ್ಪೆಕ್ಟರ್ ಎಸ್‌.ಆರ್‌.ನಿಂಗಪ್ಪ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ತಿಮ್ಮಣ್ಣ ನಾಯಕ, ಅಶೋಕ ಬೇವೂರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT