ಕೊಪ್ಪಳ: ಕ್ವಿಟ್ ಇಂಡಿಯಾ ಚಳವಳಿ ದಿನದ ಅಂಗವಾಗಿ ಸಂಯುಕ್ತ ಕರ್ನಾಟಕ ಸಂಘಟನೆ ಜಿಲ್ಲಾ ಘಟಕವು ನಗರದಲ್ಲಿ ಶುಕ್ರವಾರ ಕಾರ್ಪೊರೇಟ್ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿತು.
‘ಕಾರ್ಪೊರೇಟ್ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತ ಮತ್ತು ಕಾರ್ಮಿಕರ ವಿರೋಧಿ ನೀತಿಗಳನ್ನು ವಾಪಸ್ ಪಡೆದುಕೊಳ್ಳಬೇಕು, ಕೃಷಿಭೂಮಿ ರೈತರಲ್ಲೇ ಉಳಿಯುವಂತೆ ಸಂರಕ್ಷಿಸಬೇಕು, ರಾಜ್ಯ ಸರ್ಕಾರ ಹೊಸ ಭೂ ಸುಧಾರಣೆ ಕಾಯ್ದೆಯನ್ನು ವಾಪಸ್ ಪಡೆಯಬೇಕು, ಕೈಗಾರಿಕೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿ ಕಬಳಿಕೆ ನಿಲ್ಲಬೇಕು. ಕೃಷಿ ಉತ್ಪಾದನೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಡಬೇಕು’ ಎಂದು ಆಗ್ರಹಿಸಿದರು.
‘ಸ್ವಾಮಿನಾಥನ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ಉತ್ಪಾದನಾ ವೆಚ್ಚ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಿ ಕೃಷಿ ಒಳಸುರಿಗಳ ಮೇಲಿನ ಜಿಎಸ್‌ಟಿ ವಾಪಸ್ ಪಡೆದುಕೊಳ್ಳಬೇಕು. ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್‌ಗಳನ್ನು ಸಹಕಾರಿ ಸಂಘಗಳ ಮೂಲಕ ನಿರ್ಮಿಸಲು ಸಹಾಯಧನ ನೀಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.