ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ಆಚರಿಸಿದರೆ ಕ್ರಮ: ಎಚ್ಚರಿಕೆ

ತಾಲ್ಲೂಕು, ನಾಡಕಚೇರಿಗಳಲ್ಲಿ ದೂರು ಪೆಟ್ಟಿಗೆ ಅಳವಡಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸೂಚನೆ
Last Updated 25 ಸೆಪ್ಟೆಂಬರ್ 2021, 12:38 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕೊಪ್ಪಳ: ‘ಅಸ್ಪೃಶ್ಯತೆಯಿಂದ ತೊಂದರೆಗೆ ಒಳಗಾದ ಅಥವಾ ಆಚರಣೆಯ ಬಗ್ಗೆ ಗಮನಕ್ಕೆ ಬಂದವರು ಅನಾಮಧೇಯವಾಗಿ ದೂರು ಸಲ್ಲಿಸಲು ಅನುಕೂಲವಾಗುವಂತೆ ತಹಶೀಲ್ದಾರ್ಹಾಗೂ ನಾಡಕಚೇರಿಗಳಲ್ಲಿ ದೂರು ಪೆಟ್ಟಿಗೆ ಅಳವಡಿಸಬೇಕು‘ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಅಸ್ಪೃಶ್ಯತಾ ನಿವಾರಣೆಗೆ ಅರಿವು ಮೂಡಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಅಸ್ಪೃಶ್ಯತೆಗೆ ಒಳಗಾದವರು ಅಥವಾ ಅಂತಹ ಆಚರಣೆಗೆ ಸಾಕ್ಷಿಯಾದವರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲು ಹೆದರುತ್ತಾರೆ. ಮುಂದೆ ಕಾನೂನು ತೊಡಕುಗಳು ಉಂಟಾಗಬಹುದು ಎಂಬಭೀತಿಯಿಂದ ದೂರು ನೀಡಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಇಂತಹ ಪ್ರಕರಣ ಕಂಡುಬಂದಲ್ಲಿ ಆ ಬಗ್ಗೆ ದೂರುದಾರ ತನ್ನ ವೈಯಕ್ತಿಕ ಮಾಹಿತಿ ನೀಡದೆಯೂ ನಿರ್ದಿಷ್ಟ ಗ್ರಾಮ ಮತ್ತು ವಿಷಯದ ಬಗ್ಗೆ ದೂರು ನೀಡಬಹುದು‘ ಎಂದರು.

‘ತಹಶೀಲ್ದಾರರು, ಇಒ, ಕ್ಷೇತ್ರ ಶಿಕ್ಷಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಹೋಟೆಲ್, ದೇವಸ್ಥಾನ, ಕ್ಷೌರದಂಗಡಿ, ಸಾರ್ವಜನಿಕ ಕುಡಿಯುವ ನೀರು ಪಡೆಯುವ ಸ್ಥಳಗಳಲ್ಲಿ ಸಂಚರಿಸಿ, ಸೂಕ್ಷ್ಮವಾಗಿ ಗಮನಿಸಬೇಕು. ಆಚರಣೆ ಕಂಡುಬಂದಲ್ಲಿ ಸ್ಥಳದಲ್ಲಿಯೇ ಅವರಿಗೆ ಸೂಕ್ತ ತಿಳಿವಳಿಕೆ ನೀಡಬೇಕು. ಆದಾಗ್ಯೂ ಆಚರಣೆ ನಿಲ್ಲದಿದ್ದರೆ ಸ್ವಯಂ ಪ್ರೇರಿತವಾಗಿ ದೂರು ನೀಡಬೇಕು‘ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾತನಾಡಿ, ‘ಅಸ್ಪೃಶ್ಯತೆ ನಿವಾರಣೆ ಮತ್ತು ನಾಗರಿಕ ಹಕ್ಕುಗಳ ರಕ್ಷಣೆ ಸರ್ಕಾರಿ ನೌಕರರಾಗಿರುವ ನಮ್ಮೆಲ್ಲರ ಜವಾಬ್ದಾರಿ. ಇದರಲ್ಲಿ ಸಮಾಜ ಕಲ್ಯಾಣ ಇಲಾಖೆ ಅಥವಾ ತಹಶೀಲ್ದಾರರೇ ಇಂತಹ ಪ್ರಕರಣಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ನೀಡಬೇಕು ಎಂಬ ನಿಯಮವಿಲ್ಲ. ಯಾವುದೇ ಇಲಾಖೆಯ ಯಾವುದೇ ಹಂತದ ನೌಕರರು ಸಹ ಅಸ್ಪೃಶ್ಯತೆ ಆಚರಣೆಯ ವಿರುದ್ಧ ಪೊಲೀಸರಿಗೆ ದೂರು ನೀಡಬಹುದು‘ ಎಂದರು.

ಪ್ರೊಬೇಷನರಿ ಐಎಎಸ್ ಅಧಿಕಾರಿ ಎನ್.ಹೇಮಂತ್‌ಕುಮಾರ್, ಜಿ.ಪಂ. ಉಪಕಾರ್ಯದರ್ಶಿ ಶರಣಬಸವರಾಜ, ಕೊಪ್ಪಳ ಡಿವೈಎಸ್‌ಪಿ ಗೀತಾ ಬೇನಾಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಶಿಂತ್ರೆ,ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ, ನೆಹರೂ ಯುವ ಕೇಂದ್ರದ ಮೋಂಟು ಪತ್ತಾರ, ಯುನಿಸೆಫ್‌ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್, ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು.

ನಾಮಫಲಕ ಹಾಕಲು ಸೂಚನೆ

ದೇವಸ್ಥಾನದೊಳಗೆ ಎಲ್ಲರಿಗೂ ಪ್ರವೇಶವಿರುವ ಬಗ್ಗೆ ನಾಮಫಲಕ ಹಾಕಬೇಕು. ದೇವಸ್ಥಾನದೊಳಗೆ ಪ್ರವೇಶ ನೀಡದಿದ್ದರೆ ಆ ಬಗ್ಗೆ ದೂರು ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನೂ ಆಯಾ ನಾಮಫಲಕಗಳಲ್ಲಿ ಮುದ್ರಿಸಬೇಕು. ಒಂದು ವೇಳೆ ಅಸ್ಪೃಶ್ಯತೆ ಕಂಡುಬಂದಲ್ಲಿ ಅಥವಾ ನಿರ್ದಿಷ್ಟ ಸಮುದಾಯದವರನ್ನು ದೇವಸ್ಥಾನದೊಳಗೆ ಪ್ರವೇಶ ಮಾಡಲು ಬಿಡದಿದ್ದರೆ ಆ ದೇವಸ್ಥಾನದ ಅರ್ಚಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕುಷ್ಟಗಿ ತಾಲ್ಲೂಕಿನಲ್ಲಿ ನಡೆದ ಅಸ್ಪೃಶ್ಯತೆ ಆಚರಣೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದರೆ ಇಂತಹ ಆಚರಣೆಗಳಿಂದ ಮಗುವಿನ ಮನಸ್ಸಿನ ಮೇಲಾಗುವ ಪರಿಣಾಮಗಳ ಬಗ್ಗೆ ಗಂಭೀರ ದುಷ್ಪರಿಣಾಮ ಬೀರುತ್ತದೆ
ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT