ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ತೇವಾಂಶದ ಕಾಟ; ಬೆಳೆ ಕುಂಠಿತದ ಆತಂಕ

ಹೆಚ್ಚು ಬೆಲೆಗೆ ಗೊಬ್ಬರ ಮಾರಾಟಕ್ಕೆ ರೈತರು ಹೈರಾಣ, ಉತ್ತಮ ಫಸಲು ತರಲಿದೆಯೇ ಮುಂಗಾರು?
Last Updated 17 ಜುಲೈ 2022, 19:30 IST
ಅಕ್ಷರ ಗಾತ್ರ

ಕೊಪ್ಪಳ: ಮುಂಗಾರು ಹಂಗಾಮಿನಲ್ಲಿ ನಿರಾಳವಾಗಿ ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ತಡವಾಗಿ ಮುಂಗಾರು ಪ್ರವೇಶ, ರಸಗೊಬ್ಬರ ಹೆಚ್ಚು ಬೆಲೆಗೆ ಮಾರಾಟ ಹಾಗೂ ಅತಿಯಾದ ತೇವಾಂಶದಿಂದ ಬೆಳೆ ಕುಂಠಿತವಾಗುವ ಆತಂಕ ಕಾಡುತ್ತಿವೆ.

ಮುಂಗಾರು ಬೆಳೆಗಳು ಉತ್ತಮವಾಗಿದ್ದರೂ ಅತಿಯಾದ ತೇವಾಂಶದಿಂದ ಬೆಳವಣಿಗೆ ಕುಂಠಿತಗೊಂಡಿವೆ. ಬೀಜೋತ್ಪಾದನೆ ಬೆಳೆಗಳ ಮೇಲೆ ಜಿನುಗು ಮಳೆ ದುಷ್ಪರಿಣಾಮ ಬೀರಿರುವುದು ಕುಷ್ಟಗಿ ತಾಲ್ಲೂಕಿನಲ್ಲಿ ಕಂಡುಬಂದಿರುವ ಸ್ಥಿತಿ.

ಜಿಲ್ಲೆಯಲ್ಲಿ ಪ್ರಮುಖವಾಗಿ ಭತ್ತ, ಜೋಳ, ಮೆಕ್ಕಜೋಳ, ಸಜ್ಜೆ ನವಣೆ, ತೊಗರಿ, ಹುರಳಿ, ಹೆಸರು, ಅಲಸಂದಿ, ಅವರೆ, ಮಡಿಕೆ, ಶೇಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಹತ್ತಿ ಹಾಗೂ ಕಬ್ಬು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಭಾಗದ ರೈತರಿಗೆ ಭತ್ತವೇ ಜೀವನಾಡಿ. ಈ ಭಾಗದ ರೈತರು ನೀರಾವರಿ ಮೇಲೆ ಅವಲಂಬನೆಯಾಗಿದ್ದಾರೆ.

ಕುಷ್ಟಗಿಯಲ್ಲಿ ಮುಳುವಾಗುವ ಆತಂಕ
ಈ ವರ್ಷದ ಮುಂಗಾರಿನಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ಮಳೆ ಈಗ ಬೆಳೆಗಳ ಪಾಲಿಗೆ ಮುಳುವಾಗಿದೆ ಎಂಬ ಅಳಲು ರೈತರದ್ದು.

ಕುಷ್ಟಗಿ ತಾಲ್ಲೂಕಿನ ಮುಂಗಾರು ಹಂಗಾಮಿನ ಬಿತ್ತನೆ ಪ್ರದೇಶದ ಗುರಿ ಸುಮಾರು 79,040 ಹೆಕ್ಟೇರ್‌ ಆಗಿದ್ದು ಸಕಾಲದಲ್ಲಿ ಮಳೆಯಾಗಿದ್ದರಿಂದ ಶೇಕಡ 85ರಷ್ಟು ಬಿತ್ತನೆಯಾಗಿದೆ. ಮೆಕ್ಕೆಜೋಳ, ಸಜ್ಜೆ, ಎಳ್ಳು, ಸೂರ್ಯಕಾಂತಿ, ಶೇಂಗಾ, ಹೆಸರು, ಅಲಸಂದೆ ಹೀಗೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಈಗ ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿರುವುದು, ಬಿಸಿಲು ಇಲ್ಲದ ಕಾರಣ ಬೆಳೆಗಳು ಹಳದಿಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಠಿತಗೊಂಡಿದೆ. ಬೆಳೆ ಚೇತರಿಸಿಕೊಳ್ಳಲಿ ಎಂಬ ಕಾರಣಕ್ಕೆ ರೈತರು ಸಾಮೂಹಿಕವಾಗಿ ಯೂರಿಯಾ ರಾಸಾಯನಿಕ ಗೊಬ್ಬರ ಎರಚುವ ಧಾವಂತದಲ್ಲಿದ್ದುದು ಕಂಡುಬರುತ್ತಿದೆ.

ಹತ್ತು ಹನ್ನೆರಡು ದಿನಗಳವರೆಗೂ ಮಳೆಯಾಗಿದೆ ಆದರೆ ಹೊಲಗದ್ದೆಗಳಲ್ಲಿ ಗುಬ್ಬಿ ಕುಡಿಯುವಷ್ಟು ನೀರಿನಲ್ಲಿ ಮಳೆ ಮಾತ್ರ ನಿಲ್ಲಲಿಲ್ಲ. ಬೆಳೆಗಳೇನೋ ಉತ್ತಮವಾಗಿದ್ದವು ಆದರೆ ಈಗ ಬೆಳೆಗಿಂತ ಕಳೆಗಳೇ ಎದ್ದು ಕಾಣುತ್ತಿವೆ. ಮಳೆ ಬಿಡುವು ನೀಡಿದ್ದರೆ ಅಂತರಬೇಸಾಯ ನಡೆಸಿ ಕಳೆ ನಿಯಂತ್ರಿಸಲು ಸಾಧ್ಯವಾಗುತ್ತಿತ್ತು. ಈಗ ಕಳೆ ತೆಗೆಯಿಸಬೇಕೆಂದರೆ ಖರ್ಚು ಅಧಿಕವಾಗುತ್ತದೆ. ಇದೂ ಒಂದು ರೀತಿಯಲ್ಲಿ ಹಸಿ ಬರ ಎನ್ನುತ್ತಾರೆ ರೈತ ಶರಣಪ್ಪ ಹೊಸೂರು, ಶೇಖರಗೌಡ ಪೊಲೀಸಪಾಟೀಲ.

ನಿರಂತರ ಮಳೆ ಮತ್ತು ಮೋಡಕವಿದ ವಾತಾವರಣದಿಂದ ಹತ್ತಿ ಮತ್ತಿತರೆ ತೋಟಗಾರಿಕೆ ಬೆಳೆಗಳ ಬೀಜೋತ್ಪಾನೆಗೆ ತೊಂದರೆಯಾಗಿದೆ. ಸಕಾಲದಲ್ಲಿ ಪರಾಗಸ್ಪರ್ಶ ಸಾಧ್ಯವಾಗದೆ ಕಾಯಿಕಟ್ಟು ಪ್ರಮಾಣ ಕಡಿಮೆಯಾಗುತ್ತದೆ. ಬೀಜೋತ್ಪಾದನೆಗೆ ಮಾಡಿದ ಖರ್ಚು ಕೈಗೆ ಬಂದರೆ ಸಾಕು ಎನ್ನುತ್ತಾರೆ ರೈತ ತೋಪಲಕಟ್ಟಿ ಗ್ರಾಮದ ಹನುಮಗೌಡ ಪಾಟೀಲ.

ಅಲ್ಪಾವಧಿ ತಳಿ ಹೆಸರು, ಅಲಸಂದಿ ಕಾಯಿಕಟ್ಟು ಹಂತದಲ್ಲಿದ್ದು ಅತ್ಯುತ್ತಮ ರೀತಿಯಲ್ಲಿರುವ ಅಲಸಂದಿಗೆ ರಸಹೀರುವ ಕೀಟದ ಬಾಧೆ ಹೆಚ್ಚಾಗಿದೆ. ಕೀಟನಾಶಕ ಸಿಂಪಡೆಗೆ ಮಳೆ ಅಡ್ಡಿಯಾಗಿ ಇಳುವರಿಯೆ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರಿದೆ. ಈ ವರ್ಷ ಹೆಸರು ಬೆಳೆ ಸದ್ಯ ಉತ್ತಮವಾಗಿದೆ. ಎರೆ ಜಮೀನಿನಲ್ಲಿ ಇಲ್ಲದ ಹಳದಿ ರೋಗ ಬಾಧೆ ಕೇವಲ ಮಸಾರಿ (ಕೆಂಪು) ಭೂಮಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎನ್ನುತ್ತವೆ ಕೃಷಿ ಇಲಾಖೆಯ ಮೂಲಗಳು.

ಮಳೆ ಕೊರತೆ, ಬಾಡಿದ ಮೊಗ
ಕನಕಗಿರಿಯಲ್ಲಿ ಬಹುತೇಕ ರೈತರು ಬಿತ್ತನೆ ಪೂರ್ಣಗೊಳಿಸಿದ್ದರೂ ವಾಡಿಕೆಯಷ್ಟು ಮಳೆ ಬಿದ್ದಿಲ್ಲ. ಜಿಟಿಜಿಟಿಮ ಮಳೆ ಬಂದರೂ ಪ್ರಯೋಜನವಿಲ್ಲದಂತಾಗಿದೆ.

ಜಿಟಿ‌ ಜಿಟಿ ಮಳೆಯಿಂದ ರೈತರು ಮಾತ್ರವಲ್ಲ ಕೃಷಿ ಉಪಕರಣ ತಯಾರು ಮಾಡುವ ಬಡಿಗೇರ, ಕಮ್ಮಾರರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಕಲಕೇರಿ, ಗೊರವಿ ಹಂಚಿನಾಳ ಗ್ರಾಮದ ಪಂಪ್‌ಸೆಟ್ ಹೊಂದಿದ ರೈತರು ನಾಟಿಸಿದ ಸೂರ್ಯಕಾಂತಿ ಬೆಳೆ ಕೈ ಕೊಟ್ಟಿದೆ. ಹುಳುಗಳ ಕಾಟದಿಂದಾಗಿ ಕಾಳು ಕಟ್ಟಿಲ್ಲ, ತೆನೆ ಮುದುಡಿ ಹೋಗಿದೆ ಎಂದು ರೈತ ಕೃಷ್ಣ ವಡಗೇರಿ ತಿಳಿಸಿದರು.

ಆಶಾಭಾವನೆ ಮೂಡಿಸಿದ ಮುಂಗಾರು
ಯಲಬುರ್ಗಾ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಅಧಿಕ ಪ್ರಮಾಣದಲ್ಲಿ ಬಿದ್ದಿರುವ ಮಳೆಯಿಂದ ಮುಂಗಾರು ಆಶಾದಾಯಕವಾಗಿದೆ. ಒಟ್ಟು 52,408 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ 20,583 ಹೆಕ್ಟೇರ್‌, ಸಜ್ಜೆ 15,022ಹೆಕ್ಟೇರ್‌ ಹಾಗೂ ಹೆಸರು 7,125 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತೊಗರಿ, ಸೂರ್ಯಕಾಂತಿ, ಹತ್ತಿ ಹಾಗೂ ವಿವಿಧ ಬೆಳೆಗಳ ಬಿತ್ತನೆಯಾಗಿದೆ.

ಮುಂಗಾರು ಪ್ರಾರಂಭಗೊಂಡ ಜೂನ್ ಮೊದಲ ಎರಡು ವಾರಗಳ ಅವಧಿಯಲ್ಲಿ ವಾಡಿಕೆಯಂತೆ 9.2 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ, 32.8 ಸೆಂ.ಮೀ. ಮಳೆ ಸುರಿದು ಒಟ್ಟು ಶೇ 84ರಷ್ಟು ಅಧಿಕ ಮಳೆಯಾಗಿದೆ. ತೇವಾಂಶ ಕಡಿಮೆಯಾಗಿ ಬಿಸಿಲು ಬಿದ್ದರೆ ಬೆಳೆ ಮತ್ತಷ್ಟು ಕಳೆ ಕಟ್ಟುತ್ತದೆ.

‘ಯೂರಿಯಾ ಬದಲಿಗೆ ನ್ಯಾನೊ ಗೊಬ್ಬರ ಬಳಕೆಯಿಂದ ರೈತರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು. 45 ಕೆ.ಜಿ. ಯೂರಿಯಾ ಗೊಬ್ಬರಕ್ಕೆ ಹೋಲಿಸಿದರೆ, 500 ಎಂಎಲ್ ನ್ಯಾನೊ ದ್ರವರೂಪದ ಗೊಬ್ಬರ ಪರಿಣಾಮಕಾರಿಯಾಗಿದೆ. ನ್ಯಾನೊ ದ್ರವದ ಗೊಬ್ಬರ ಬೆರೆಸಿ ಸಿಂಪಡಿಸಿದರೆ ಬೆಳೆ ಸಮೃದ್ಧವಾಗಿ ಬೆಳೆಯುತ್ತವೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ.

ಕಾಯಿ ಬಿಡದ ಹೆಸರು
ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರಿನಲ್ಲಿ ರೈತರು ಬಿತ್ತಿದ ಬೆಳೆ ಉತ್ತಮವಾಗಿದ್ದ್ರು ಫಸಲು ಮಾತ್ರ ಕೈಗೆ ಬರದಂತಾಗಿದೆ.

ಸೂರ್ಯಕಾಂತಿ, ಹೆಸರು ಮಣ್ಣಿನ ತೇವಾಂಶ ಕಡಿಮೆ ಇದ್ದ ಕಾರಣ ಫಸಲು ಹಾಳಾಗುತ್ತಿದೆ. ಹೂ ಬಿಟ್ಟಿರುವ ಹೆಸರು ಬಳ್ಳಿ ಕಾಯಿ ಬಿಟ್ಟಿಲ್ಲ. ಬಿತ್ತನೆ ಸಮಯದಲ್ಲಿ ಬಿದ್ದ ಮಳೆ ಆಧರಿಸಿ ರೈತರು ಬಿತ್ತನೆ ಮಾಡಿದ್ದಾರೆ. ಹೆಸರು ಬೆಳೆಗೆ ಕೀಟದ ಹಾವಳಿ ಹೆಚ್ಚಾಗಿದೆ.

‘ಕಳೆದ ಒಂದು ವಾರದಿಂದ ಜಿಟಿಜಿಟಿ ಮಳೆ ಇದೆ. ಆದರೆ ಬೆಳೆಗೆ ಅನೂಕೂಲವಾಗುವ ಮಳೆ ಸುರಿದರೆ ರೈತರ ಮೊಗದಲ್ಲಿ ನಗು ಕಾಣಬಹುದು’ ಎನ್ನುತ್ತಾರೆ ನಂದಾಪೂರ ಗ್ರಾಮದ ರೈತ ರಾಜುನಾಯಕ.

ಮೋಡ ಕವಿದ ವಾತಾವರಣದಿಂದ ಹೆಸರು ಬೆಳಗೆ ನಂಜು ರೋಗ ಕಾಣಿಸಿಕೊಂಡಿದೆ. ಈ ನಂಜುರೋಗಕ್ಕೆ ಕ್ರಿಮಿನಾಶಕ ಸಿಂಪಡಿಸಲು ಸಮಯವನ್ನು ಕೊಡುತ್ತಿಲ್ಲ. ರೈತರು ತಮ್ಮ ಹೊಲವನ್ನು ಬಿತ್ತನೆಗೆ ಸಜ್ಜುಗೊಳಿಸಿರುವ ಭೂಮಿಯು ಈಗ ಕಸದ ರಾಶಿಯಾಗಿ ಮಾರ್ಪಡಾಗಿದೆ.

ಭತ್ತದ ಕಣಜದಲ್ಲಿ ನಾಟಿ ನಿಧಾನ
ಗಂಗಾವತಿ ತಾಲ್ಲೂಕಿನ ಸಾಣಾಪುರ, ಬಸವನದುರ್ಗಾ, ದೇವಘಾಟ್, ಢಣಾಪುರ ಭಾಗದ ವಿಜಯನಗರ ಉಪ ಕಾಲುವೆ ಆಧುನಿಕರಣ ಕಾಮಗಾರಿ ವಿಳಂಬದಿಂದ ಭತ್ತ ನಾಟಿಗೆ ನೀರಿನ ತೊಂದರೆ ಎದುರಾಗಿದೆ.

ಬೇಸಿಗೆ ನಂತರ ಸಾಣಾಪುರ, ಆನೆಗೊಂದಿ ಭಾಗದ ರೈತರು ಜುಲೈ ಅಂತ್ಯದೊಳಗೆ ಭತ್ತ ನಾಟಿ ಮಾಡುತ್ತಿದ್ದರು. ಇದೀಗ ವಿಜಯನಗರ ಕಾಲುವೆ ನವೀಕರಣ ಕಾಮಗಾರಿ ವಿಳಂಬದಿಂದ ಈವರೆಗೆ ರೈತರು ಸಸಿಗಳಿಗೆ ಬೀಜ ಬಿತ್ತನೆ ಮಾಡಿಲ್ಲ.

ಮುಂಗಾರಿನಲ್ಲಿ ಒಟ್ಟು 61,233 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿಯ ಗುರಿ ಹೊಂದಲಾಗಿದ್ದು, ಕಳೆದ ವಾರದಲ್ಲಿ 19,075 ಹೆಕ್ಟೇರ್‌ ಭೂಮಿಯಲ್ಲಿ ಮಾತ್ರ ನಾಟಿ ಮಾಡಲಾಗಿತ್ತು.

ತುಂಗಾಭದ್ರ ಜಲಾಶಯ ತುಂಬಿ ನದಿಗೆ ಹೆಚ್ಚಿನ ನೀರು ಹರಿಬಿಟ್ಟಿದ್ದು, ಸಾಣಾಪುರ ಗ್ರಾಮದಲ್ಲಿ ನಡೆಯುತ್ತಿರುವ ವಿಎನ್‌ಸಿ ಉಪಕಾಲುವೆ ಕಾಮಗಾರಿಗೆ ನೀರು ನುಗ್ಗಿ ಮಣ್ಣು, ಕಲ್ಲುಗಳು ಕೊಚ್ಚಿಹೋಗಿವೆ. ಬೋರ್‌ವೆಲ್‌ ಇರುವ ರೈತರು ಮಾತ್ರ ಸಸಿಗಳಿಗೆ ಬೀಜ ಬಿತ್ತಿದ್ದು, ಕಾಲುವೆ ನೀರನ್ನು ನಂಬಿದ ರೈತರು ಈವರೆಗೆ ಬೀಜಗಳೇ ಬಿತ್ತಿಲ್ಲ. ಕೆಲ ರೈತರು ಬೀಜ ಬಿತ್ತಿದರು, ನದಿ ಪಾತ್ರ ಜಮೀನಿನಲ್ಲಿ ನದಿ ನೀರು ಹರಿಯುತ್ತಿರುವ ಕಾರಣ ನಾಟಿಗೆ ಸಾಧ್ಯವಿಲ್ಲದಂತಾಗಿದೆ.

ಕಾಲುವೆಗಳಿಗೆ ಅಗಸ್ಟ್‌ನಲ್ಲಿ ನೀರು ಬಿಡುವ ಕಾರಣ ಸಸಿಗಳಿಗೆ ಬೀಜಗಳನ್ನು ಬಿತ್ತಿ, ನಾಟಿ ಮಾಡಿದರೆ ಇಳುವರಿ ಕಡಿಮೆ ಆಗುವುದರ ಜೊತೆಗೆ ಕಟಾವು ಅಕಾಲಿಕ ಮಳೆ, ಚಳಿಗೆ ಸಿಲುಕಲಿವೆ ಎಂದು ಸಾಣಾಪುರ ಗ್ರಾಮದ ಯುವ ರೈತ ಯೋಹಾನ್ ಹೇಳುತ್ತಾರೆ. ಸಾಕಷ್ಟು ಪ್ರಮಾಣದಲ್ಲಿ ನೀರು ಇರುವ ಕಾರಣ ವರ್ಷದ ಎರಡೂ ಬೆಳೆಗೂ ನೀರು ಲಭಿಸುತ್ತದೆ ಎನ್ನುವುದೇ ಸಮಾಧಾನ.

*

ಈ ವರ್ಷ ಬೆಳೆ ಚೊಲೊ ಅದಾವ, ಮಳಿಯಿಂದ ಅನುಕೂಲ ಆಗಿತ್ತು, ಈಗ ಜಡಿಮಳಿಯಿಂದ ಅನಾನುಕೂಲ ಆಗೈತಿ. ಒಂದಿಷ್ಟು ಬಿಡುವು ಆದ್ರ ಕಳೆ ತೆಗದು ಸ್ವಚ್ಛಗೊಳಿಸಲು ಸಾಧ್ಯ. ಇಲ್ಲದಿದ್ದರೆ ಬೆಳಿಗಿಂತ ಕಳೆ ಜಾಸ್ತಿ ಆಗಿ ನಷ್ಟ ಆಕೈತಿ.
–ಶೇಖರಗೌಡ ಪೊಲೀಸ ಪಾಟೀಲ, ನೆರೆಬೆಂಚಿ ರೈತ.

*

ಮುಂಗಾರು ಬೆಳೆಗಳು ಈಗಂತೂ ಉತ್ತಮವಾಗಿವೆ. ಜಿನುಗು ಮಳೆ, ಮೋಡದ ವಾತಾವರಣದಿಂದ ಹೆಸರು, ಅಲಸಂದಿಗೆ ರಸಹೀರುವ ಕೀಟದ ಬಾಧೆ ಎದುರಾಗಿದೆ. ಮೆಕ್ಕೆಜೋಳಕ್ಕೆ ಸುಳಿರೋಗ ಬಂದಿದೆ. ಮಳೆ ಮುಂದುವರೆದರೆ ಯಾವ ಬೆಳೆಯೂ ಕೈಗೆ ಬರುವುದಿಲ್ಲ.
–ಮಲ್ಲಪ್ಪ ಕಂಬಳಿ, ರೈತ ಚಿಕ್ಕನಂದಿಹಾಳ

*

ಯೂರಿಯಾ ಗೊಬ್ಬರದ ಕೊರತೆ ರೈತರನ್ನು ಕಾಡುತ್ತಿದೆ. ಖಾಸಗಿ ವ್ಯಾಪಾರಸ್ಥರ ಬಳಿ ಹೆಚ್ಚಿನ ಹಣ ವ್ಯಯಮಾಡಿಯೇ ಖರೀದಿಸಬೇಕಾಗಿದೆ. ಸಹಕಾರ ಸಂಘಗಳಲ್ಲಿಯೇ ರಿಯಾಯಿತಿ ದರದಲ್ಲಿ ಬೇಡಿಕೆಗೆ ತಕ್ಕಂತೆ ಗೊಬ್ಬರ ವಿತರಣೆಗೆ ಕ್ರಮಕೈಗೊಳ್ಳಬೇಕಾಗಿದೆ.
–ರೇವಣಪ್ಪ ಹಿರೇಕುರುಬರ, ರೈತ

*

ಈಗ ಉಳ್ಳಾಗಡ್ಡಿ, ಮೆಣಸಿನಕಾಯಿ ಹೆಚ್ಚು ಬೆಳೆಯಲಾಗುತ್ತಿದೆ. ಈಗಿನ ಹವಾಮಾನದ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಳ ಮೇಲೆ ಪರಿಣಾಮ ಬೀರುವುದಿಲ್ಲ.
–ಕೃಷ್ಣ ಉಕ್ಕುಂದ,ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ

*

ಟೊಮೊಟೊಗೆ ಎಲೆ ತಿನ್ನುವ ರೋಗ ಕಾಡುವ ಅಪಾಯ ಇರುತ್ತದೆ. ಸಜ್ಜಿಗೆ ಸುಂಕ ಕಟ್ಟುತ್ತಿದೆ. ಈಗ ತುರ್ತಾಗಿ ಸಾಕಷ್ಟು ಬಿಸಿಲು ಬೇಕಾಗಿದೆ.
–ಬಸಪ್ಪ ವಂಕಲಕುಂಟಿ, ರೈತ, ಕಾಮನೂರು

*

ದ್ವಿದಳ ಧಾನ್ಯದ ಬೆಳೆಗಳು ಕಟಾವಿಗೆ ಬಂದಿವೆ. ಆದರೆ, ಬೆಳೆಗೆ ಎಲೆ ಹಳದಿಯಾಗುವ ರೋಗ ಕಾಣಿಸಿಕೊಂಡಿದೆ. ತೇವಾಂಶ ಹೆಚ್ಚಾದಂತೆಲ್ಲ ರೋಗದ ವಿಸ್ತಾರ ಹೆಚ್ಚಾಗುತ್ತಲೇ ಹೋಗುತ್ತದೆ. ರೈತರಿಗೆ ನಿಯಂತ್ರಣ ಕಷ್ಟವಾಗುತ್ತಿದೆ. ದ್ವಿದಳ ಧಾನ್ಯದಲ್ಲಿ ನೀರು ನಿಲ್ಲುವುದರಿಂದ ರೋಗದ ಹಾವಳಿ ಹೆಚ್ಚಾಗುತ್ತಿದೆ. ಆದ್ದರಿಂದ ರೈತರು ಆದಷ್ಟು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಶಿಲೀಂದ್ರ ನಾಶಕ ಬಳಸಬೇಕು.
ಡಾ ಬದರಿ ಪ್ರಸಾದ್ ಪಿ.ಆರ್‌.,ಮುಖ್ಯಸ್ಥರು ಕೃಷಿಕೀಟಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ ಗಂಗಾವತಿ

___________________________

ಪೂರಕ ಮಾಹಿತಿ: ಮೆಹಬೂಬ್‌ಸಾಬ್‌ ಕನಕಗಿರಿ, ನಾರಾಯಣರಾವ್‌ ಕುಲಕರ್ಣಿ, ಉಮಾಶಂಕರ ಹಿರೇಮಠ,ಮಂಜುನಾಥ ಎಸ್. ಅಂಗಡಿ, ಕೆ. ಶರಣಬಸವ ನವಲಹಳ್ಳಿ,ಎನ್‌. ವಿಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT